ಕಲಬುರಗಿ: ಹೈಕ ಭಾಗದ ಅಭಿವೃದ್ಧಿಗೆ ಹಠ ಹಾಗೂ ಛಲದಿಂದ ಕೆಲಸ ಮಾಡಿದ್ದೇವೆ. ಇಷ್ಟು ದಿನ ಕೆಲವು ಕೆಲಸಗಳು ಕಾಗದದಲ್ಲೇ ಆಗುತ್ತಿದ್ದವು. ಬಿಲ್ ಕೂಡ ಹಾಗೇ ಆಗುತ್ತಿತ್ತು. ಈಗ ಅಭಿವೃದ್ಧಿ ಕೆಲಸಗಳನ್ನು ನಿವೇ ನೋಡುತ್ತಿದ್ದಿರಿ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ರಾಜಾಪುರದಲ್ಲಿ ಆರ್‌ಟಿಒ ಕ್ರಾಸ್‌ದಿಂದ ರಾಜಾಪುರವರೆಗಿನ ರಸ್ತೆ ಸೇರಿದಂತೆ ವಿವಿಧ ರಸ್ತೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಕೆಲವರು ಚಮತ್ಕಾರದ ಮಾತುಗಳನ್ನಾಡಿ ತಲೆ ಮೇಲೆ ಸವರಲು ಬರ್ತಾರೆ. ಅವರ ಮಾತುಗಳಿಗೆ ಮರುಳಾಗಬೇಡಿ. ಪ್ರಜಾಪ್ರಭುತ್ವದ ನೆಲೆಗಟ್ಟು ಹಾಗೂ ರಕ್ಷಣೆ ನೀಡುವವರನ್ನು ಆರಿಸಿ ಕಳುಹಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಮ್ಮೂರಾಗ (ರಾಜಾಪುರ) ಏನು ಕೆಲಸ ಮಾಡಿದ್ದೀರಿ ಎಂದು ವ್ಯಕ್ತಿಯೊಬ್ಬ ಸಭೆಯಲ್ಲಿ ಕೇಳಿದ. ಇದಕ್ಕೆ ಉತ್ತರ ನೀಡಿದ ಖರ್ಗೆ ಅವರು, ನಿನಗಾಗಿ ಏನು ಮಾಡಿದೇ ಎನ್ನುವುದಕ್ಕಿಂತ ನಿಮಗಾಗಿ ಏನು ಮಾಡಿದೆ ಎಂದು ಕೇಳಿದರೆ ಉತ್ತಮ.
ಈಗ ಕಾಣುತ್ತಿರುವ ರಸ್ತೆಗಳು, ಉದ್ಯೋಗಾವಕಾಶಗಳು, ಕಟ್ಟಡಗಳು, ಉಚಿತ ಅಕ್ಕಿ ವಿತರಣೆ ಸೇರಿದಂತೆ ಇತರ ಯೋಜನೆಗಳು ಯಾರಿಗೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ ಎಂದರು. ರಾಜಾಪುರದಿಂದ ಐವಾನ್ ಶಾಹಿ ಅತಿಥಿಗೃಹಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಮಾಡಲು ಬದ್ಧ.
ರಸ್ತೆ ಅಗಲೀಕರಣಕ್ಕೆ ಎರಡು ಮನೆಗಳು ಅಡ್ಡ ಬರುತ್ತಿವೆ. ಅವುಗಳಿಗೆ ಸೂಕ್ತ ಪರಿಹಾರ ನೀಡಿ ರಸ್ತೆ ಅಭಿವೃದ್ಧಿಗೊಳಿಸಲು ಎಲ್ಲರೂ ಮುಂದಾಗಬೇಕು ಎಂದು ಹೇಳಿದರು. ಸಚಿವ ಡಾ| ಶರಣಪ್ರಕಾಶ ಪಾಟೀಲ, ಶಾಸಕ ಖಮರುಲ್ ಇಸ್ಲಾಂ ಮಾತನಾಡಿದರು.
ಮಹಾಪೌರ ಶರಣು ಮೋದಿ, ವಿಧಾನ ಪರಿಷತ್ ಸದಸ್ಯ ಇಕ್ಬಾಲ ಅಹ್ಮದ ಸರಡಗಿ, ಕುಡಾ ಅಧ್ಯಕ್ಷ ಮಹಮ್ಮದ ಅಗಸರ ಚುಲ್‌ಬುಲ್, ಭಾಗಣ್ಣಗೌಡ ಪಾಟೀಲ ಸಂಕನೂರ, ಇಲಿಯಾಸ್ ಭಾಗವಾನ್, ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್, ಪಾಲಿಕೆ ಆಯುಕ್ತ ಸುನೀಲಕುಮಾರ ಮುಂತಾದವರಿದ್ದರು.