Advertisement

ಎಲ್ಲಾ ಇಲಾಖೆಗಳಲ್ಲಿ ಲಾಬಿಕೋರರ ಸಿಂಡಿಕೇಟ್‌ ಇರುತ್ತೆ

09:05 PM Jun 26, 2019 | Team Udayavani |

ಮೈಸೂರು: ಲಾಬಿ ಮಾಡುವವರು ಕಲೆಕ್ಷನ್‌ ಮಾಡಿ ತಂದುಕೊಡುವುದನ್ನು ಪಡೆದು, ಅವರು ಹೇಳಿದ ಕಡೆಗೆ ಸಹಿ ಹಾಕುವುದಷ್ಟೇ ಮಂತ್ರಿಗಳ ಕೆಲಸವಾಗಿದೆ. ಸಾರಿಗೆ, ಅಬಕಾರಿ, ಕಂದಾಯ ಸೇರಿದಂತೆ ಸರ್ಕಾರದ ಪ್ರಮುಖ ಇಲಾಖೆಗಳನ್ನು ಮಂತ್ರಿಗಳು ನಡೆಸಲ್ಲ.

Advertisement

ಅದಕ್ಕಾಗಿಯೇ ಒಂದು ಸಿಂಡಿಕೇಟ್‌ ಇರುತ್ತೆ, ವರ್ಗಾವಣೆ ಸೇರಿದಂತೆ ಎಲ್ಲ ತೀರ್ಮಾನಗಳೂ ಅವರದ್ದೇ ಸಹಿ ಹಾಕುವುದಷ್ಟೇ ಮಂತ್ರಿಯ ಕೆಲಸ ಎಂದು ಶಾಸಕ ಅಡಗೂರು ಎಚ್‌.ವಿಶ್ವನಾಥ್‌ ಹೇಳಿದರು. ಸಂವಹನ ಪ್ರಕಾಶನ ಹೊರತಂದಿರುವ ಪತ್ರಕರ್ತ ರವಿ ಪಾಂಡವಪುರ ಬರೆದಿರುವ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಯೋಗ್ಯವಲ್ಲದ ಬಸ್‌: ರಾಜ್ಯದಲ್ಲಿ 30 ಸಾವಿರ ಸಂಚಾರ ಯೋಗ್ಯವಲ್ಲದ ಬಸ್‌ಗಳಿವೆ. ಅವು ರಸ್ತೆಗಳಿಯದಂತೆ ನೋಡಿಕೊಳ್ಳಬೇಕಾದದ್ದು ಸಾರಿಗೆ ಇಲಾಖೆಯ ಕೆಲಸ. ಸಾರಿಗೆ ಮಂತ್ರಿ ಅಂಥ ಒಬ್ಬರು ಇರ್ತಾರೆ, ಆದರೆ ಇಲಾಖೆ ನಡೆಸುವವರು ಮಂತ್ರಿಯಲ್ಲ. ಅದಕ್ಕಾಗಿಯೇ ಒಂದು ಸಿಂಡಿಕೇಟ್‌ ಇರುತ್ತೆ. ವರ್ಗಾವಣೆ ಸೇರಿದಂತೆ ಎಲ್ಲವೂ ಅವರದೇ ತೀರ್ಮಾನ. ಇಷ್ಟೆಂದು ಕಲೆಕ್ಷನ್‌ ಮಾಡಿರ್ತಾರೆ, ಅದನ್ನು ತಂದು ಮಂತ್ರಿ ಕೈಗೆ ಕೊಡುತ್ತಾರೆ. ಅವರು ಹೇಳಿದ್ದಕ್ಕೆ ಸಹಿ ಹಾಕುವುದಷ್ಟೇ ಮಂತ್ರಿ ಕೆಲಸ ಎಂದರು.

ಅಬಕಾರಿ ಇಲಾಖೆಯಲ್ಲೂ ಅಬಕಾರಿ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಗೆ ದೊಡ್ಡ ಲಾಬಿಯೇ ಇದೆ. ಕಂದಾಯ ಇಲಾಖೆಯಡಿ ಬರುವ ಸಬ್‌ ರಿಜಿಸ್ಟ್ರಾರ್‌ಗಳ ವರ್ಗಾವಣೆಯನ್ನು ಕಂದಾಯ ಮಂತ್ರಿ ಮಾಡಲ್ಲ, ಅದಕ್ಕೊಂದು ದೊಡ್ಡ ಲಾಬಿ ಇದೆ. ಇದು ಎಚ್‌.ಡಿ.ಕುಮಾರಸ್ವಾಮಿ ಸರ್ಕಾರದಲ್ಲಷ್ಟೇ ಅಲ್ಲ, ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಸತ್ಯವನ್ನು ಹೇಳಿದರೆ ಎಚ್‌.ವಿಶ್ವನಾಥ್‌ ವಿವಾದಾತ್ಮಕ ವ್ಯಕ್ತಿ ಅಂದು ಬಿಡ್ತಾರೆ ಎಂದು ಹೇಳಿದರು.

ನಂಬಿಕೆಯೇ ದೇವರು: ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಬೇಧ ಭಾವವಿಲ್ಲದೆ ಎಲ್ಲರೂ ಕಂಡ ಕಂಡ ಕಲ್ಲಿಗೆಲ್ಲ ನಮಸ್ಕಾರ ಮಾಡಿ, ಭಯ ಭಕ್ತಿಯಿಂದ ಪೂಜಿಸುತ್ತಾರೆ. ಭಾರತದ ತತ್ವ-ಸಿದ್ಧಾಂತವೇ ನಂಬಿಕೆ. ನಾವು ಏನನ್ನು ನಂಬುತ್ತೇವೋ ಅದೇ ದೇವರು. ಏನನ್ನು ನಂಬುವುದಿಲ್ಲವೋ ಅದೇ ದೆವ್ವ. ಈ ನಂಬಿಕೆಯಿಂದಲೇ ದೇವಸ್ಥಾನಗಳಲ್ಲಿ ಏನು ಕೊಟ್ಟರೂ ತಿನ್ನುತ್ತೇವೆ, ಕುಡಿಯುತ್ತೇವೆ. ನಾಸ್ತಿಕರಿಗೂ ದೇವರ ಮೇಲೆ, ತೀರ್ಥ ಪ್ರಸಾದ ಬಗ್ಗೆ ಭಯ ಇದೆ.

Advertisement

ಇಂತಹ ನಂಬಿಕೆಯಿಂದಲೇ ಸುಳ್ವಾಡಿ ಪ್ರಕರಣ ನಡೆದದ್ದು, ಒಬ್ಬ ಸ್ವಾಮೀಜಿಯೇ ಈ ನಾಟಕಕ್ಕೆ ಸೂತ್ರಧಾರಿಯಾಗಿ ಆಸೆ, ದುರಾಸೆ, ಲಂಪಟತನದಿಂದ ಸಾಲೂರು ಮಠದ ಹಿರಿಯ ಸ್ವಾಮೀಜಿಯ ಹತ್ಯೆಗೂ ಸ್ಕೆಚ್‌ ಹಾಕಿದ್ದ ಕಿರಿಯ ಸ್ವಾಮೀಜಿಯಿಂದ ನಡೆದ ಸುಳ್ವಾಡಿ ಘಟನೆಯನ್ನು ಸರ್ಕಾರ ರಾಷ್ಟ್ರೀಯ ದುರಂತ ಎಂದು ಘೋಷಿಸಿತು. ಇಷ್ಟಾದರೂ ಫೀಜ್‌ಗಾಗಿ ಯಾವ ವಕೀಲರು ಕೂಡ ಆತನ ಬೇಲ್‌ಗಾಗಿ ಮುಂದೆ ಹೋಗದಿರುವುದು ಮೆಚ್ಚಬೇಕಾದ ಸಂಗತಿ ಎಂದರು.

ಪರಿಹಾರ ಕಾರ್ಯ ಚುರುಕು: ಮಂಡ್ಯ ಜಿಲ್ಲೆಯ ಕನಗನಮರಡಿ ಬಸ್‌ ದುರಂತ ಹಾಗೂ ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ವಿಷ ಪ್ರಸಾದ ಪ್ರಕರಣವನ್ನು ಎಚ್‌.ಡಿ.ಕುಮಾರಸ್ವಾಮಿ ಸರ್ಕಾರ ಉತ್ತಮವಾಗಿ ನಿರ್ವಹಿಸಿತು. ಕನಗನ ಮರಡಿ ಬಸ್‌ ದುರಂತ ನಡೆದ ಕೂಡಲೇ ಜಿಲ್ಲಾ ಮಂತ್ರಿ ಸಿ.ಎಸ್‌.ಪುಟ್ಟರಾಜು ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯ ಕೈಗೊಂಡರು. ಸುಳ್ವಾಡಿ ಪ್ರಕರಣವನ್ನೂ ಕುಮಾರಸ್ವಾಮಿ ಅವರು ಅಷ್ಟೇ ವೈಯಕ್ತಿಕವಾಗಿ ತೆಗೆದುಕೊಂಡು ನಿಭಾಯಿಸುವ ಮೂಲಕ, ಯಾವುದೇ ದುರಂತ ನಡೆದಾಗ ಸರ್ಕಾರ ಎಷ್ಟು ಬೇಗ ಅಲ್ಲಿಗೆ ತಲುಪಬಹುದು?

ಪರಿಹಾರ ಕಾರ್ಯ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು. ಯೋಗಾನರಸಿಂಹಸ್ವಾಮಿ ದೇವಸ್ಥಾನದ ಸಂಸ್ಥಾಪಕರಾದ ಪ್ರೊ.ಭಾಷ್ಯಂಸ್ವಾಮೀಜಿ ಸಾನಿಧ್ಯವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಕೃಷ್ಣೇಗೌಡ ಪುಸ್ತಕಗಳ ಕುರಿತು ಮಾತನಾಡಿದರು. ಸಾಹಿತಿ ಡಾ.ಸಿ.ಪಿ.ಕೆ.ಅಧ್ಯಕ್ಷತೆವಹಿಸಿದ್ದರು. ಪ್ರಕಾಶಕ ಡಿ.ಎನ್‌.ಲೋಕಪ್ಪ, ಕೃತಿಕಾರ ರವಿ ಪಾಂಡವಪುರ ಉಪಸ್ಥಿತರಿದ್ದರು.

ಪಂಚಾಯ್ತಿ ಮೆಂಬರ್‌ ಹೇಳ್ತಾನೆ ರೈಟ್‌!: ತಾಲೂಕು ಕೇಂದ್ರಗಳಿಂದ ರಾತ್ರಿ 7ಗಂಟೆ ನಂತರ ಹೊರಡುವ ನೈಟ್‌ ಔಟ್‌ಬಸ್‌ಗಳಿಗೆ ಪಂಚಾಯ್ತಿ ಮೆಂಬರ್‌ಗಳು ಕಾಯಂ ಪ್ರಯಾಣಿಕರು. ಎಣ್ಣೆ ಹಾಕಿಕೊಂಡು ಬಾಗಿಲಲ್ಲೇ ನಿಂತು ಕಂಡಕ್ಟರ್‌ ಬದಲಿಗೆ ಇವರೇ ರೈಟ್‌ರೈಟ್‌ ಅಂತಿರ್ತಾರೆ ಎಂದು ಶಾಸಕ ಎಚ್‌.ವಿಶ್ವನಾಥ್‌ ಲೇವಡಿ ಮಾಡಿದರು.

ಅಕ್ಕ ಸಮ್ಮೇಳನದಲ್ಲಿ ಕೃಷ್ಣಯ್ಯಶೆಟ್ಟರ ತಿರುಪತಿ ಲಾಡು!: ಒಮ್ಮೆ ಅಕ್ಕ ಸಮ್ಮೇಳನಕ್ಕೆ ಅಮೆರಿಕಗೆ ಹೋಗಿದ್ದೆ. ಆಗ ಕೃಷ್ಣಯ್ಯಶೆಟ್ಟಿ ರಾಜ್ಯದ ಮುಜರಾಯಿ ಮಂತ್ರಿ. ಸಿಕ್ಕವರಿಗೆಲ್ಲಾ ತಿರುಪತಿ ಪ್ರಸಾದ ಎಂದು ಲಾಡು ತಿನ್ನಿಸುವುದೇ ಆತನ ಕೆಲಸವಾಗಿತ್ತು. ಅಕ್ಕ ಸಮ್ಮೇಳನಕ್ಕೂ ಬಂದಿದ್ದ ಕೃಷ್ಣಯ್ಯಶೆಟ್ಟಿ, ಅಮೆರಿಕದಲ್ಲೇ ಮಾಡಿಸಿದ ಲಾಡುಗೆ ತಿರುಪತಿ ಲಾಡು ಕವರ್‌ಹಾಕಿ ಅಲ್ಲಿನ ಜನರಿಗೆ ಕೊಟ್ಟಿದ್ದರು. ಲಾಡು ಮಾಡಿ ಎಷ್ಟು ದಿವಸವಾಗಿತ್ತೋ ವಾಸನೆ ಹೊಡೆಯುತ್ತಿದ್ದರೂ ಅಲ್ಲಿನ ಜನ ಏನ್‌ ತಿಳ್ಕೊತ್ತಾರೋ ಅಂಥ ಭಯದಿಂದ ತಿಂದಿದ್ದರು. ಇನ್ನು ಕೆಲವರು ಮರೆಯಲ್ಲಿ ಇಟ್ಟು ಹೋದರು ಎಂದು ಕೃಷ್ಣಯ್ಯ ಶೆಟ್ಟರ ತಿರುಪತಿ ಲಾಡು ಪ್ರಸಾದದ ವೃತ್ತಾಂತವನ್ನು ಎಚ್‌.ವಿಶ್ವನಾಥ್‌ ಬಿಡಿಸಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next