ವಾಷಿಂಗ್ಟನ್: ಜನರ ಗುಂಪಿನ ಮೇಲೆ ಟ್ರಕ್ ವೊಂದು ಏಕಾಏಕಿ ನುಗ್ಗಿದ ಪರಿಣಾಮ ಹತ್ತಕ್ಕೂ ಅಧಿಕ ಜನರು ಸಾ*ವನ್ನಪ್ಪಿರುವ ಘಟನೆ ಸೆಂಟ್ರಲ್ ನ್ಯೂ ಓರ್ಲಿಯನ್ಸ್ ನಲ್ಲಿ ಬುಧವಾರ (ಜ.01) ಬೆಳಗ್ಗೆ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನೈಟ್ ಫೈಯರ್ ಹಾಗೂ ವೈಬ್ರೆಂಟ್ ಕಲ್ಚರ್ ಗೆ ಹೆಸರುವಾಸಿಯಾಗಿದ್ದ ಬೌರ್ಬೊನ್ ಸ್ಟ್ರೀಟ್ ಮತ್ತು ಇಬೆರ್ ವಿಲ್ಲೆ ಪ್ರದೇಶದಲ್ಲಿ ನಸುಕಿನ 3.15ರ ವೇಳೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಪ್ರತ್ಯಕ್ಷದರ್ಶಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪೋಸ್ಟ್ ನಲ್ಲಿ ಘಟನೆಯ ಗಂಭೀರತೆಯನ್ನು ಪ್ರದರ್ಶಿಸಿತ್ತು. ಘಟನಾ ಸ್ಥಳದಲ್ಲಿ ಪೊಲೀಸ್ ಕಾರುಗಳು, ಆಂಬುಲೆನ್ಸ್ ಗಳ ಓಡಾಟ ವಿಡಿಯೋದಲ್ಲಿ ಸೆರೆಯಾಗಿದೆ.
ಅತೀ ವೇಗದಿಂದ ಬಂದಿದ್ದ ಟ್ರಕ್ ಜನರ ಗುಂಪಿನ ಮೇಲೆ ಹರಿಸಿದ್ದು, ನಂತರ ಏಕಾಏಕಿ ಚಾಲಕ ರೈಫಲ್ ನಿಂದ ಗುಂಡಿನ ದಾಳಿ ನಡೆಸಿರುವುದಾಗಿ ವರದಿ ತಿಳಿಸಿದ್ದು, ಏತನ್ಮಧ್ಯೆ ಶಂಕಿತ ವ್ಯಕ್ತಿ ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿರುವುದಾಗಿ ಸಿಬಿಎಸ್ ವರದಿ ಮಾಡಿದೆ.
ಘಟನೆಯಲ್ಲಿ ಎಷ್ಟು ಮಂದಿ ಸಾವ*ನ್ನಪ್ಪಿದ್ದಾರೆ ಎಂಬ ನಿಖರ ಅಂಕಿಅಂಶ ಲಭ್ಯವಾಗಿಲ್ಲ. ಈ ಬಗ್ಗೆ ತನಿಖೆ ಮುಂದುವರಿದಿದ್ದು, ಇದೊಂದು ಭಯೋ*ತ್ಪಾದಕ ಕೃತ್ಯವೇ ಅಥವಾ ಆಕಸ್ಮಿಕ ನಡೆದ ಘಟನೆ ಎಂಬ ಬಗ್ಗೆ ತನಿಖೆಯಿಂದ ತಿಳಿದುಬರಬೇಕಾಗಿದೆ. ಅಲ್ಲದೇ ಜನರು ಈ ಪ್ರದೇಶದಲ್ಲಿ ಸಂಚರಿಸದಂತೆ ಪೊಲೀಸರು ಸಲಹೆ ನೀಡಿರುವುದಾಗಿ ವರದಿ ತಿಳಿಸಿದೆ.