Advertisement

ಪ್ರಾದೇಶಿಕ ಭಾಷಿಕರನ್ನು ರೂಪಿಸಿದ ಮಾದರಿ ನಮ್ಮದು

12:22 PM Apr 15, 2018 | |

ಬೆಂಗಳೂರು: ಭಾರತ ಜಗತ್ತಿಗೆ ಅತ್ಯುತ್ತಮ ಆರ್ಥಿಕ ಮಾದರಿಯನ್ನು ನೀಡಲು ಸಾಧ್ಯವಾಗದಿದ್ದರೂ ಪ್ರಾದೇಶಿಕತೆಯನ್ನು ಉಳಿಸಿಕೊಂಡು ರಾಷ್ಟ್ರೀಯತೆ ಸಾರುವ ಮಾದರಿ ನೀಡಿದೆ. ಅಸಮಾನತೆ, ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ “ಸಾರ್ವಜನಿಕ ಹೂಡಿಕೆ- ಖಾಸಗಿ ನಿರ್ವಹಣೆ’ ವ್ಯವಸ್ಥೆ ಸೂಕ್ತವೆನಿಸುತ್ತದೆ ಎಂದು ರಾಜ್ಯಸಭಾ ಸದಸ್ಯ ಜೈರಾಮ್‌ ರಮೇಶ್‌ ಪ್ರತಿಪಾದಿಸಿದರು.

Advertisement

ಬಿ.ಪ್ಯಾಕ್‌ ಸಂಸ್ಥೆ ನಗರದ ಭಾರತೀಯ ವಿದ್ಯಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ “ಭಾರತದಲ್ಲಿ ಆರ್ಥಿಕ ಮತ್ತು ರಾಜಕೀಯ ನೀತಿಗಳು’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು. ಈ ವೇಳೆ ಬಿ.ಪ್ಯಾಕ್‌ ಉಪಾಧ್ಯಕ್ಷ ಟಿ.ವಿ.ಮೋಹನ್‌ದಾಸ್‌ ಪೈ ಅವರು ಜೈರಾಮ್‌ ರಮೇಶ್‌ ಅವರ ಜತೆ ನಡೆಸಿದ ಸಂವಾದದ ವಿವರ ಇಲ್ಲಿದೆ.

ಪ್ರಶ್ನೆ: ನಿಮ್ಮ ರಾಜಕೀಯ ಪ್ರವೇಶ ಹೇಗೆ?
ಉತ್ತರ:
ನಾನು ಆಕಸ್ಮಿಕವಾಗಿ ರಾಜಕೀಯ ಪ್ರವೇಶಿಸಿದೆ. 1989ರಲ್ಲಿ ದಿವಂಗತ ರಾಜೀವ್‌ ಗಾಂಧಿ ಅವರ ಆಹ್ವಾನದ ಮೇರೆಗೆ ರಾಜಕೀಯ ಕ್ಷೇತ್ರಕ್ಕೆ ಬಂದೆ. 1991ರಲ್ಲಿ ರಾಜೀವ್‌ಗಾಂಧಿಯವರ ಹತ್ಯೆಯಾಯಿತು. ನಂತರ ಆಡಳಿತ ಹಾಗೂ ಕಾಂಗ್ರೆಸ್‌ ನಡುವೆ ಪಕ್ಷದಲ್ಲಿ ಮುಂದುವರಿಯಲು ನಿರ್ಧರಿಸಿದೆ.

ಪ್ರಶ್ನೆ: ರಾಜಕೀಯ ಪ್ರವೇಶಿಸುವವರಿಗೆ ನಿಮ್ಮ ಕಿವಿಮಾತು?
ಉತ್ತರ:
ರಾಜಕೀಯ ಪ್ರವೇಶಕ್ಕೆ ಆರ್ಥಿಕ ಸ್ವಾವಲಂಬನೆ ಮುಖ್ಯ. ಆರ್ಥಿಕವಾಗಿ ಸ್ವಾವಲಂಬಿಗಳಾಗಿರದಿದ್ದರೆ ರಾಜಕೀಯದಲ್ಲಿ ಪ್ರಾಮಾಣಿಕರಾಗಿ ಉಳಿಯುವುದು ಕಷ್ಟ. ಇಲ್ಲಿ ಏಳುಬೀಳು ಸಹಜ. ಶೇ.80ರಷ್ಟು ಬೀಳು ಇದ್ದರೆ ಶೇ.20ರಷ್ಟು ಬೆಳವಣಿಗೆ ಇರುತ್ತದೆ. ನಾನು 24/7 ರಾಜಕಾರಣಿಯಲ್ಲ. ರಾಜಕೀಯ ಹೊರತಾಗಿ ಬೇರೆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ಉದ್ಯಮ, ಓದು, ಬರವಣಿಗೆ, ಸಂಗೀತ ಹವ್ಯಾಸವಿದ್ದರೆ ಒಳಿತು. ನಾನು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದೇನೆ.

ಪ್ರಶ್ನೆ: ಕನ್ನಡಿಗರಾದ ನಿಮ್ಮ ಮೂಲದ ಬಗ್ಗೆ ಹೇಳುವಿರಾ?
ಉತ್ತರ:
ನಾನು ಚಿಕ್ಕಮಗಳೂರು ಜಿಲ್ಲೆಯವನು. 1978ರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಸ್ಪರ್ಧೆ ಬಳಿಕ ಚಿಕ್ಕಮಗಳೂರು ಖ್ಯಾತಿ ಪಡೆಯಿತು. ಆ ಕಾಲದಲ್ಲಿ ಸ್ಥಾಪನೆಯಾದ ಸಾರ್ವಜನಿಕ ಉದ್ದಿಮೆಗಳು ದೇಶದ ಐಕ್ಯತೆ ಸಂರಕ್ಷಣೆಗೆ ಪೂರಕವೆಂಬಂತಿದ್ದವು. ಬೆಂಗಳೂರಿನಲ್ಲೂ ಸಾಕಷ್ಟು ಸಾರ್ವಜನಿಕ ಉದ್ದಿಮೆಗಳು ಆರಂಭವಾಗಿ ಎಲ್ಲ ವರ್ಗದವರನ್ನು ಒಳಗೊಳ್ಳಲು ಸಹಕಾರಿಯಾಯಿತು.

Advertisement

ಪ್ರಶ್ನೆ: ಸ್ವಾತಂತ್ರಾನಂತರದಿಂದ 2014ರವರೆಗಿನ ಆರ್ಥಿಕ ಸ್ಥಿತ್ಯಂತರದ ಬಗ್ಗೆ ಏನು ಹೇಳುವಿರಿ?
ಉತ್ತರ:
1900ರಿಂದ 1950ರವರೆಗೆ ದೇಶದ ಜಿಡಿಪಿ ಬೆಳವಣಿಗೆ ದರ ಶೇ.0.5ರಷ್ಟಿತ್ತು. ಆದರೆ 1950ರಿಂದ 1955ರವರೆಗೆ ಪ್ರತಿವರ್ಷ ಶೇ.3.5ರಷ್ಟು ಬೆಳವಣಿಗೆ ದರ ದಾಖಲಾಯಿತು. 1955ರಿಂದ 1960ರಲ್ಲಿ ಶೇ.4.5ರಷ್ಟು ಜಿಡಿಪಿ ಬೆಳವಣಿಗೆಯಾಯಿತು. ಹೀಗೆ ಏರುಮುಖವಾಗಿದ್ದ ಆರ್ಥಿಕ ಬೆಳವಣಿಗೆ ದರ 1970ರ ನಂತರ ಇಳಿಕೆಯಾಗಲಾರಂಭಿಸಿ ಶೇ.3.5ಕ್ಕೆ ಕುಸಿಯಿತು. 1980ರ ನಂತರ ಮತ್ತೆ ಚೇತರಿಕೆ ಕಂಡಿತು. 1

991ರಿಂದ 2014ರವರೆಗೆ ಶೇ.7.5ರಷ್ಟು ಜಿಡಿಪಿ ಬೆಳವಣಿಗೆ ದರ ದಾಖಲಾಯಿತು. ದೇಶದ ಕೈಗಾರಿಕಾ ಪ್ರಗತಿಗಾಗಿ ಮೊದಲ ಆದ್ಯತೆಯಾಗಿ ಜವಳಿ ಉದ್ಯಮವನ್ನು ಆಯ್ಕೆ ಮಾಡಿಕೊಳ್ಳದಿದ್ದುದು ಲೋಪವಾಯಿತು. 1990ರವರೆಗೆ ಭಾರತದ ತಲಾದಾಯ ಚೀನಾ ತಲಾದಾಯಕ್ಕಿಂತ ಶೇ.15ರಷ್ಟು ಹೆಚ್ಚಿತ್ತು. ಆದರೆ ಇಂದು ಭಾರತಕ್ಕೆ ಹೋಲಿಸಿದರೆ ಚೀನಾ ತಲಾದಾಯ ಆರು ಪಟ್ಟು ಹೆಚ್ಚಿದೆ.

ಪ್ರಶ್ನೆ: ಸ್ವಾತಂತ್ರಾನಂತರ ಸಾಮಾಜಿಕ, ಆರ್ಥಿಕ, ರಾಜಕೀಯ ವಿಕಸನ ಹೇಗಿದೆ?
ಉತ್ತರ:
ಸ್ವಾತಂತ್ರ್ಯನಂತರ ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿನ ವಿಕಸನ ಗಮನಾರ್ಹ. ಆರ್ಥಿಕ ವಿಕಸನ ಆಧುನಿಕವಾಗಿದ್ದರೆ, ರಾಜಕೀಯ ಕ್ಷೇತ್ರದಲ್ಲಿ ವಿಕಸನ ಹಂತದಲ್ಲಿದೆ. ಸಾಮಾಜಿಕ ಕ್ಷೇತ್ರದಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಸಾಮಾಜಿಕ ಸುಧಾರಣೆ ತೀವ್ರವಾಗಿತ್ತು.

ಪ್ರಶ್ನೆ: ವಿದೇಶಾಂಗ ವ್ಯವಹಾರ ದಿಕ್ಕುದೆಸೆ, ಪ್ರಜಾಪ್ರಭುತ್ವದ ಸ್ಥಿತಿ ಹೇಗಿದೆ?
ಉತ್ತರ:
ಜಗತ್ತಿಗೆ ಉತ್ತಮ ಆರ್ಥಿಕ ಮಾದರಿಯನ್ನು ಭಾರತ ನೀಡಲಾಗದಿದ್ದರೂ ಅದ್ಭುತವಾದ ಸಾಮಾಜಿಕ ಮಾದರಿಯನ್ನು ನೀಡಿದೆ. ಸಾಮಾಜಿಕ, ಸಾಂಸ್ಕೃತಿಕವಾಗಿ ಸಾಕಷ್ಟು ವೈರುದ್ಧಗಳಿದ್ದರೂ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಉಳಿಸಿ ಬೆಳೆಸಿದ್ದು ನಮ್ಮ ಮಾದರಿಯ ಹೆಗ್ಗಳಿಕೆ. ಈ ಮಾದರಿ ಪ್ರಜಾಪ್ರಭುತ್ವವನ್ನು ಉಳಿಸುವ ಜತೆಗೆ ಇನ್ನಷ್ಟು ಆಳಕ್ಕಿಳಿಯಲು ಸಹಕಾರಿಯಾಯಿತು.

ವೈವಿಧ್ಯದ ಧರ್ಮೀಯರನ್ನು ಒಳಗೊಂಡ ರಾಷ್ಟ್ರಗಳ ಪೈಕಿ ಭಾರತ ಹಾಗೂ ಅಮೆರಿಕದಲ್ಲಷ್ಟೇ ಪ್ರಜಾಪ್ರಭುತ್ವ ಉಳಿದಿದೆ. ಅಮೆರಿಕದ ಮಾದರಿ ಅಲ್ಲಿರುವವರನ್ನೆಲ್ಲಾ ಅಮೆರಿಕನ್ನರನ್ನು ರೂಪಿಸುತ್ತದೆ. ಆದರೆ ಭಾರತದ ಮಾದರಿ ಕನ್ನಡಿಗರು, ತಮಿಳಿಗರು, ಬಂಗಾಳಿಗರಾಗಿ ಉಳಿಯುವ ಜತೆಗೆ ಭಾರತೀಯರಾಗಿ ರಾಷ್ಟ್ರೀಯತೆಯನ್ನು ಉಳಿಸಿಕೊಳ್ಳಬಹುದಾಗಿದೆ. “ವಿವಿಧತೆಯ ಮೂಲಕ ಏಕತೆ’ ಎಂಬ ಬಂಗಾಳಿ ಸಾಲನ್ನು ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರು ಅವರು “ವಿವಿಧತೆಯಲ್ಲಿ ಏಕತೆ’ ಎಂದು ತಪ್ಪಾಗಿ ಬದಲಿಸಿದಂತಿದೆ.

ಪ್ರಶ್ನೆ: ಸುಸ್ಥಿತ ಸಮಾನತೆಯ ಅಭಿವೃದ್ಧಿಗೆ ಸಿದ್ಧ ಸೂತ್ರವಿದೆಯೇ?
ಉತ್ತರ:
ಪ್ರಗತಿ ಸಾಧಿಸಿದಂತೆಲ್ಲಾ ಅಸಮಾನತೆ ಹೆಚ್ಚುತ್ತಿದೆ. ಪರಿಶಿಷ್ಟ ಜಾತಿ, ಪಂಗಡದವರು, ಮುಸ್ಲಿಮರು ಅಸಮಾನತೆಯಿಂದಾಗಿ ಬಡತನದಿಂದ ಹೊರಬರಲಾರದೆ ಸಂಕಷ್ಟದಲ್ಲಿದ್ದಾರೆ.

ಪ್ರಶ್ನೆ: ಶಿಕ್ಷಣ, ಆರೋಗ್ಯ ಸೇವೆಯನ್ನು ಪರಿಣಾಮಕಾರಿಯಾಗಿ ಕಲ್ಪಿಸಲು ಏನು ಮಾಡಬೇಕು?
ಉತ್ತರ:
ಸಾರ್ವಜನಿಕ ಕ್ಷೇತ್ರದಲ್ಲಿ ಬಂಡವಾಳ ಹೂಡಿದರೂ ನಿರ್ವಹಣೆ ಸಮರ್ಪಕವಾಗಿರುವುದಿಲ್ಲ. ಖಾಸಗಿಯಲ್ಲಿ ನಿರ್ವಹಣೆ ಕಟ್ಟುನಿಟ್ಟಾಗಿರಲಿದ್ದು, ಲೋಪವಾದರೆ ಶಿಕ್ಷೆ ಇರಲಿದೆ. ಹಾಗಾಗಿ ಸಾರ್ವಜನಿಕ ಹೂಡಿಕೆ, ಖಾಸಗಿ ನಿರ್ವಹಣೆ ವ್ಯವಸ್ಥೆ ತಂದರೆ ಉಪಯುಕ್ತವಾಗಲಿದೆ ಎಂಬುದನ್ನು ನನ್ನ ಅನಿಸಿಕೆ.

ಪ್ರಶ್ನೆ: ಕಾಂಗ್ರೆಸ್‌ ಪಕ್ಷ ಜಾತಿ ಆಧಾರದ ಮೇಲೆ ಜನರನ್ನು ವಿಂಗಡಿಸುತ್ತದೆ ಎಂಬ ಆರೋಪಕ್ಕೆ ಏನು ಹೇಳುವಿರಿ?
ಉತ್ತರ:
ಕಾಂಗ್ರೆಸ್‌ಗಿಂತ ಮೊದಲು ದೇಶದಲ್ಲಿ ಜಾತಿ ವ್ಯವಸ್ಥೆ ಇದೆ. ಅಧಿಕಾರಕ್ಕೆ ಎಂದೂ ವಿಭಜನೆ ಮಾಡಿಲ್ಲ. ಹಿಂದುಗಳ ಮತವಿಲ್ಲದೇ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಜಾತಿ ವ್ಯವಸ್ಥೆ, ಅಸಮಾನತೆ ತೊಲಗಿಸಲು ಮಹಿಳೆಯರಿಗೆ ಸಮಾನ ಅವಕಾಶ, ಸ್ಥಾನಮಾನ ನೀಡಬೇಕು.

ಪ್ರಶ್ನೆ: ಮುಸ್ಲಿಮರು ಸೇರಿದಂತೆ ಎಲ್ಲ ವರ್ಗದವರ ಒಳಗೊಳ್ಳುವಿಕೆಗೆ ಸಲಹೆ ಏನು?
ಉತ್ತರ:
ಶಿಕ್ಷಣ, ನಗರೀಕರಣ ಹೆಚ್ಚಾದಂತೆ ಅಸಮಾನತೆ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಬಡತನ, ಅಸಮಾನತೆ ನಿರ್ಮೂಲನೆಯಾದರೆ ಸಹಜವಾಗಿಯೇ ಎಲ್ಲರ ಒಳಗೊಳ್ಳುವಿಕೆಗೆ ಸಹಕಾರಿಯಾಗುತ್ತದೆ.

ಮೊದಲು ದನಿ ಎತ್ತುತ್ತೇವೆ
ಪ್ರಶ್ನೆ: ಕರ್ನಾಟಕದಲ್ಲಿ ಮಕ್ಕಳು, ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆದರೆ ದನಿ ಎತ್ತುವಿರಾ?
ಉತ್ತರ:
“ನಿರ್ಭಯಾ’ ಪ್ರಕರಣ ಸಂಭವಿಸಿದಾಗಲೇ 24 ಗಂಟೆಗಳಲ್ಲಿ ತಿದ್ದುಪಡಿ ತಂದು ಕಾನೂನುಗಳನ್ನು ಬಿಗಿಗೊಳಿಸಲಾಯಿತು. ಅವುಗಳನ್ನು ರಾಜ್ಯ ಸರ್ಕಾರಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಸಂತ್ರಸ್ತರ ಪರವಾಗಿ ಹೋರಾಡುವುದು ರಾಜಕಾರಣ ಮಾಡಿದಂತಾಗುವುದಿಲ್ಲ. ಮುಂದೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾಗಿ ಇಂತಹ ಘಟನೆಗಳು ಸಂಭವಿಸಿದರೆ ಖಂಡಿತಾ ಮೊದಲು ದನಿ ಎತ್ತುತ್ತೇವೆ.

Advertisement

Udayavani is now on Telegram. Click here to join our channel and stay updated with the latest news.

Next