ಬೆಂಗಳೂರು: ಚಿನ್ನಾಭರಣ ಖರೀದಿಸಿ ವಂಚಿಸಿದ ಪ್ರಕರಣದಲ್ಲಿ ಶ್ವೇತಾಗೌಡ ಪ್ರಕರಣ ಸಂಬಂಧ ಮಾಜಿ ಸಚಿವ ವರ್ತೂರು ಪ್ರಕಾಶ್ಗೆ ಮಂಗಳವಾರ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಮತ್ತೊಂದು ನೋಟಿಸ್ ನೀಡಲಾಗುತ್ತದೆ.
ಈಗಾಗಲೇ ವರ್ತೂರು ಪ್ರಕಾಶ್ಗೆ ಈ ಹಿಂದೆ ಪ್ರಕರಣ ಕುರಿತು ಮಾಹಿತಿ ನೀಡುವಂತೆ ಎರಡು ಬಾರಿ ನೋಟಿಸ್ ನೀಡಲಾಗಿತ್ತು. ಆದರೆ, ವಿಚಾರಣೆಗೆ ಹಾಜರಾಗದೆ ನಿರ್ಲಕ್ಷ್ಯ ಮಾಡಿದ್ದಾರೆ. ಹೀಗಾಗಿ ಮಂಗಳವಾರ ಬಿಎನ್ ಎಸ್ಎಸ್ ಕಾಯ್ದೆ ಅಡಿ ನೊಟೀಸ್ ಜಾರಿ ಮಾಡಲಾಗುವುದು. ಅದಕ್ಕೂ ಪ್ರತಿಕ್ರಿಯೆನೀಡದಿದ್ದರೆ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಕುರಿತು ಮಾಹಿತಿ ನೀಡಿದ ಪೂರ್ವ ವಿಭಾಗದ ಡಿಸಿಪಿ ಡಿ.ದೇವರಾಜ್, ಆರೋಪಿತೆಯು ಈ ಹಿಂದೆ ಹುಬ್ಬಳ್ಳಿ-ಧಾರವಾಡ, ಸದಾಶಿವನಗರ, ಯಲಹಂಕ ಸೇರಿ ಹಲವು ಅಭರಣ ಅಂಗಡಿ ಮಾಲಿಕರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ. ಕೆಲವರಿಂದ ಅಭರಣ ಪಡೆದು ವಂಚಿಸಿದರೆ ಇನ್ನೂ ಕೆಲವರಿಗೆ ಹಣ ನೀಡಿದ್ದಾಳೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಶಿವಮೊಗ್ಗದ ಮೂಲದ ಜ್ಯುವೆಲ್ಲರಿ ಮಾಲಿಕರಿಗೆ ವಂಚಿಸಿದ ಆರೋಪ ಸಂಬಂಧ ಮತ್ತೂಂದು ಪ್ರಕರಣವನ್ನು ಕರ್ಮಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜತೆಗೆ ಸರ್ಕಾರಿ ಕೆಲಸ ಕೊಡಿಸುವುದಾಗಿಯೂ ಶ್ವೇತಾಗೌಡ ಕೆಲವರಿಂದ ಕೋಟ್ಯಂತರ ರೂ. ಪಡೆದು ವಂಚಿಸಿರುವುದು ಪತ್ತೆಯಾಗಿದೆ. ಈ ಸಂಬಂಧವೂ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಆರೋಪಿತೆ ಪರ ಮಾತನಾಡಿದ್ದ ವರ್ತೂರು ಪ್ರಕಾಶ್: ವಿಚಾರಣೆಯಲ್ಲಿ ವರ್ತೂರು ಪ್ರಕಾಶ್ ಅವರೇ ಆರೋಪಿತೆಯೊಂದಿಗೆ ಖುದ್ದು ನವರತ್ನ ಜ್ಯುವೆಲ್ಲರಿ ಶಾಪ್ಗೆ ತೆರಳಿ ಈಕೆ ತನಗೆ ಪರಿಚಯಸ್ಥೆಯಾಗಿದ್ದು, ಚಿನ್ನಾಭರಣ ವ್ಯಾಪಾರ ಆರಂಭಿಸುತ್ತಿದ್ದಾರೆ. ಒಡವೆ ನೀಡಿದರೆ ಹೆಚ್ಚು ಲಾಭ ಗಳಿಸಿಕೊಡುವುದಾಗಿ ಶ್ವೇತಾಗೌಡ ಪರ ಮಾತನಾಡಿದ್ದರು ಎಂದು ದೂರುದಾರರು ಹೇಳುತ್ತಿದ್ದಾರೆ. ಅದಕ್ಕೆ ಪೂರಕ ಪುರಾವೆಗಳನ್ನುಒದಗಿಸಿದ್ದಾರೆ. ಈ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಸಿಹಿ ತಿನಿಸುಗಳ ಹೆಸರಿನಲ್ಲಿ ರಾಜಕಾರಣಿಗಳ ನಂಬರ್!: ವರ್ತೂರು ಪ್ರಕಾಶ್ ಮನೆಯಲ್ಲಿ ಅಡುಗೆ ಕೆಲಸ ಮಾಡುವ ಮಹಿಳೆಯನ್ನು ಆರೋಪಿತೆಯೊಂದಿಗೆ ಕಳುಹಿಸಿರುವುದು ಗೊತ್ತಾಗಿದೆ. ಹಲವು ಬಾರಿ ಪ್ರಕಾಶ್ ಮನೆಯಲ್ಲಿ ಹೋಗಿ ಬಂದಿರುವುದು ತಿಳಿದುಬಂದಿದೆ. ಅಲ್ಲದೆ, ಆಕೆಯ ಮೊಬೈಲ್ ಪರಿಶೀಲಿಸಿದಾಗ ರಾಜಕಾರಣಿ ಹಾಗೂ ಉದ್ಯಮಿಗಳ ಹೆಸರುಗಳನ್ನ ಮೈಸೂರು ಪಾಕ್, ರಸಗುಲ್ಲ ಸೇರಿ ಇತರೆ ಸಿಹಿತಿನಿಸುಗಳ ಹೆಸರಿನಲ್ಲಿ ನಂಬರ್ಗಳನ್ನು ಸೇವ್ ಮಾಡಿರುವುದು ಕಂಡುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.