Advertisement

ನಮಗೆ ಪ್ರತ್ಯೇಕ ರಾಜ್ಯ ಅಲ್ಲ,ಅಭಿವೃದ್ಧಿ ಬೇಕು: ಯತ್ನಾಳ್‌

10:47 AM Jun 08, 2017 | |

ವಿಧಾನಪರಿಷತ್‌: “ಕಳೆದ 30-40 ವರ್ಷಗಳಿಂದ ಉತ್ತರ ಕರ್ನಾಟಕ ಭಾಗದಿಂದ ಆಯ್ಕೆಯಾದ ಎಲ್ಲ ಪಕ್ಷಗಳ ಜನಪ್ರತಿನಿಧಿಗಳು, ವಿಧಾನಸೌಧದಕ್ಕೆ ಬಂದು ನಿದ್ದೆ ಮಾಡಿ ಹೋಗಿ ಆ ಭಾಗಕ್ಕೆ ಅನ್ಯಾಯ ಮಾಡಿದ್ದಾರೆ. ಅನ್ಯಾಯ ಮಾಡಿದವರೇ ಇಂದು ನಮಗೆ ಅನ್ಯಾಯ ಆಗಿದೆ,ಪ್ರತ್ಯೇಕ ರಾಜ್ಯ ಬೇಕು ಎಂದು ಭಾಷಣ ಹೊಡೆಯುತ್ತಾರೆ.

Advertisement

ಆದರೆ, ನಮಗೆ ಪ್ರತ್ಯೇಕ ರಾಜ್ಯ ಅಲ್ಲ, ಅಭಿವೃದ್ಧಿ ಬೇಕು’ ಎಂದು ವಿಧಾನಪರಿಷತ್ತಿನ ಪಕ್ಷೇತರ ಸದಸ್ಯ ಬಸವನಗೌಡ ಪಾಟೀಲ್‌ ಯತ್ನಾಳ್‌ ತೀಕ್ಷ್ಣ ಮಾತುಗಳನ್ನಾಡಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಸಂತ್ರಸ್ತ ಕುಟುಂಬಗಳಿಗೆ ಏಕರೂಪ ಪರಿಹಾರ ಒದಗಿಸುವ ಕುರಿತು ನಿಯಮ 330 ಅಡಿಯಲ್ಲಿ ಪ್ರಸ್ತಾಪಿಸಲಾದ ವಿಷಯದ ಮೇಲೆ ಮಾತನಾಡಿ, “ನನ್ನದು ಅಖಂಡ ಕರ್ನಾಟಕದ ಕಲ್ಪನೆ. ಹಾಗಾಗಿ ಪ್ರತ್ಯೇಕ ರಾಜ್ಯ ಬೇಕಿಲ್ಲ. ಉತ್ತರ ಕರ್ನಾಟಕ ಭಾಗ ಅಭಿವೃದ್ದಿ ಆಗಿದ್ದಿದ್ದರೆ, ಯಾರೂ ಪ್ರತ್ಯೇಕ ರಾಜ್ಯ ಕೇಳುತ್ತಿರಲಿಲ್ಲ. ಅಭಿವೃದ್ಧಿ ಮಾಡದೇ ತಾವೇ ಅನ್ಯಾಯ ಮಾಡಿ, ಈಗ ನಮಗೆ ಅನ್ಯಾಯ ಆಗಿದೆ ಪ್ರತ್ಯೇಕ ರಾಜ್ಯ ಬೇಕು ಎಂದು ಉತ್ತರ ಕರ್ನಾಟಕ ಭಾಗದ ಕೆಲ ಜನಪ್ರತಿ ನಿಧಿಗಳು ಕೇಳುತ್ತಿರುವುದು ವಿಪರ್ಯಾಸ ಎಂದರು.

ಒಗ್ಗಟ್ಟಿನ ಕೊರತೆ: ಮೈಸೂರು ಮಹಾರಾಜರ ಕಾರಣಕ್ಕಾಗಿ ವಿಶ್ವೇಶ್ವರಯ್ಯ ಕನ್ನಂಬಾಡಿ ಕಟ್ಟಿದರು. ಅಲ್ಲದೇ ಈ ಭಾಗದ ಜನ ಮತ್ತು ಜನಪ್ರತಿನಿಧಿಗಳಿಗೆ ನೀರಾವರಿಯ ಮಹತ್ವ ಗೊತ್ತಿತ್ತು, ಒಗ್ಗಟ್ಟು ಇತ್ತು. ಆದ್ದರಿಂದ ಮೈಸೂರು ಕರ್ನಾಟಕ ಭಾಗ ಅಭಿವೃದ್ಧಿ ಕಂಡಿತು. ಆದರೆ, ನಮ್ಮ ಕಡೆ (ಉತ್ತರ ಕರ್ನಾಟಕ) ಮಹತ್ವ ಗೊತ್ತಾಗಿಲ್ಲ, ಒಗ್ಗಟ್ಟಂತೂ ಇರಲೇ ಇಲ್ಲ. ಈಗಲೂ ಕಿತ್ತಾಟ ನಡೆಯುತ್ತದೆ.

ಜನ ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳಿಸಿದರೆ, ಇಲ್ಲಿ ರೊಟ್ಟಿ-ಬ್ಯಾಳಿ ತಿಂದು ನಿದ್ದೆ ಮಾಡಿ ಕಾಲ ಕಳೆದು ಅನ್ಯಾಯ ಮಾಡಿದವರೇ, ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೇ ಅದಕ್ಕಾಗಿ ಪ್ರತ್ಯೇಕ ರಾಜ್ಯ ಬೇಕು ಎಂದು ಭಾಷಣ ಮಾಡುತ್ತಾರೆ ಎಂದು ಯತ್ನಾಳ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next