Advertisement

Uttara Karnataka: ಮಹಾಲಿಂಗಪುರ ಪುರಸಭೆ ಅಧ್ಯಕ್ಷರ ಜಾನುವಾರು ಪ್ರೀತಿ

10:19 PM Sep 25, 2024 | Team Udayavani |

ಮಹಾಲಿಂಗಪುರ: ಉತ್ತರ ಕರ್ನಾಟಕದ ರೈತರ ಗ್ರಾಮೀಣ ಕ್ರೀಡೆಗಳಾದ ತೆರೆಬಂಡಿ, ಕಲ್ಲು ಜಗ್ಗುವ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆಯುತ್ತಾ ಉತ್ತರ ಕರ್ನಾಟಕದ ರೈತರ ಮನೆಮಾತಾಗಿರುವ ಮುಧೋಳ ತಾಲೂಕಿನ ಅಕ್ಕಿಮರಡಿ ಗ್ರಾಮದ ಮಲ್ಲಪ್ಪ ಬೋರಡ್ಡಿ ಅವರ ತೆರೆಬಂಡಿ ಸ್ಪರ್ಧೆಯ ಜೋಡೆತ್ತುಗಳನ್ನು ಮಹಾಲಿಂಗಪುರ ಪುರಸಭೆಯ ಅಧ್ಯಕ್ಷರು, ಪ್ರಗತಿಪರ ರೈತರಾದ ಯಲ್ಲನಗೌಡ ಪಾಟೀಲ ಅವರು ದಾಖಲೆಯ 36 ಲಕ್ಷರೂ ಗಳಿಗೆ ಖರೀದಿಸಿದ್ದು ಬಹುಶ: ಕರ್ನಾಟಕ ರಾಜ್ಯದಲ್ಲಿಯೇ ಪ್ರಥಮ ಬಹುದೊಡ್ಡ ದಾಖಲೆ ಎನ್ನಬಹುದು.ಇಷ್ಟು ಹಣದಲ್ಲಿ 4 ಟ್ರ್ಯಾಕ್ಟರ್ ಗಳನ್ನು ಖರೀದಿಸಬಹುದಾಗಿದೆ. ಆದರೆ ರೈತರ ಜಾನುವಾರು ಪ್ರೀತಿಯ ಮುಂದೆ ಎಲ್ಲವೂ ಗೌಣ.

Advertisement

ತಂದೆಯ ಪ್ರೇರಣೆಯಲ್ಲಿ ಜಾನುವಾರು ಪ್ರೀತಿ :
ದಿ.ಬಸಲಿಂಗಪ್ಪ ಪಾಟೀಲ ಪಾಟೀಲ ಅವರು ಪಟ್ಟಣದ ಪ್ರಗತಿಪರ ರೈತರಾಗಿದ್ದು. ಅವರು ಸಹ ಎತ್ತುಗಳನ್ನು ಸಾಕುವುದು, ಬಸವೇಶ್ವರ ಜಾನುವಾರು ಜಾತ್ರೆಗಳಲ್ಲಿ ಗಳೆ ಹೊಡೆಯುವುದು, ಕಲ್ಲು ಎಗ್ಗುವುದು, ತೆರೆಬಂಡಿ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳಿಗಾಗಿ ಹತ್ತಾರು ವರ್ಷಗಳ ಕಾಲ ತಮ್ಮನ್ನು ತೊಡಗಿಸಿಕೊಂಡಿದ್ದರು.

ತಂದೆ ಬಸಲಿಂಗಪ್ಪಗೌಡ ಪಾಟೀಲ್ ಅವರ ಪ್ರೇರಣೆಯಲ್ಲಿ ಬೆಳೆದ ಯಲ್ಲನಗೌಡ ಪಾಟೀಲ ಮತ್ತು ಕೃಷ್ಣಗೌಡ ಪಾಟೀಲ ಸಹೋದರರು ಕಳೆದ 30 ವರ್ಷಗಳಿಂದ ಜಾನುವಾರು ಪ್ರೀಯರಾಗಿ ಸ್ಪರ್ಧೆಯ ಎತ್ತುಗಳನ್ನು ಸಾಕುವುದು, ಸುತ್ತಮುತ್ತಲಿನ 3-4 ಜಿಲ್ಲೆಗಳಲ್ಲಿ ನಡೆಯುವ ಜಾನುವಾರು ಸ್ಪರ್ಧೆಗಳಲ್ಲಿ ತಮ್ಮ ಎತ್ತುಗಳೊಂದಿಗೆ ಭಾಗವಹಿಸಿ ಬಹುಮಾನ ಗೆಲ್ಲುವುದು ಇವರ ಜಾನುವಾರು ಪ್ರೀತಿ ಮತ್ತು ಹುಚ್ಚು ಹವ್ಯಾಸಕ್ಕೆ ಸಾಕ್ಷಿ.

ಎತ್ತುಗಳ ಖರೀದಿಗಾಗಿ ಲಕ್ಷಾಂತರ ವೆಚ್ಚ :
ಪುರಸಭೆಯ ನೂತನ ಅಧ್ಯಕ್ಷರು, ರೈತರಾದ ಯಲ್ಲನಗೌಡ ಪಾಟೀಲ ಅವರು ಪಟ್ಟಣದ ಬಸವೇಶ್ವರ ಜಾತ್ರಾ ಕಮಿಟಿ ಅಧ್ಯಕ್ಷರಾಗಿ ತೆರೆಬಂಡಿ, ಕಲ್ಲು ಎಳೆಯುವುದು, ಗಳೆ ಹೊಡೆಯುವ ರಾಜ್ಯಮಟ್ಟದ ಸ್ಪರ್ಧೆಗಳನ್ನು ಸಂಘಟಿಸುತ್ತಾ ಬಂದಿದ್ದಾರೆ. ಸ್ವತಹ: ಸ್ಪರ್ಧೆಗಾಗಿ ಲಕ್ಷಾಂತರ ಮೌಲ್ಯದ ಎತ್ತುಗಳನ್ನು ಸಾಕಿ ಸ್ಪರ್ಧೆಯಲ್ಲಿ ಭಾಗವಹಿಸಿ ಸಾಕಷ್ಟು ಬಹುಮಾನ ಗೆದ್ದಿದ್ದಾರೆ. ಕಳೆದ 4 ವರ್ಷಗಳ ಹಿಂದೆ 8.1 ಲಕ್ಷ ಕೊಟ್ಟು ದಾಸನಾಳದ ರೈತರಿಂದ ರಾಜಾ ಹೆಸರಿನ ಎತ್ತನ್ನು ಖರೀದಿಸಿದ್ದರು. ಆ ಎತ್ತು ಮೂರು ವರ್ಷಗಳಲ್ಲಿ ಸಾಕಷ್ಟು ಬಹುಮಾನ ತಂದುಕೊಟ್ಟು ಕಳೆದ ವರ್ಷದ ಅಗಷ್ಟ್ ತಿಂಗಳಲ್ಲಿ ಅಕಾಲಿಕವಾಗಿ ಅಸುನೀಗಿದ್ದನ್ನು ಸ್ಮರಿಸಬಹುದು.

ಜಾನುವಾರು ಪ್ರೀತಿಯ ಹುಚ್ಚು ಬಿಡುತ್ತಿಲ್ಲ :
ನಮ್ಮ ತಂದೆಯ ಕಾಲದಿಂದಲೂ ನಮ್ಮ ಮನೆಯಲ್ಲಿ ಎತ್ತುಗಳನ್ನು ಸಾಕುವುದು, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವುದು ನಮ್ಮ ಮನೆತನದ ಪ್ರಮುಖ ಹವ್ಯಾಸ. ಕಲ್ಲು ಜ್ಗುವುದು, ಇತ್ತೀಚಿನ ತೆರಬಂಡಿ ಸ್ಪರ್ಧೆಗಳಲ್ಲಿ ಭಾಗವಹಿಸುವ ಎತ್ತುಗಳ ಮೇಲಿನ ಹುಚ್ಚು ಪ್ರೀತಿಯು ಇಂದಿಗೂ ಬಿಟ್ಟಿಲ್ಲ. ಕಳೆದ 3-4 ವರ್ಷಗಳಲ್ಲಿ ತೆರಬಂಡಿ ಸ್ಪರ್ಧೆಯಲ್ಲಿ ದಾಖಲೆ ನಿರ್ಮಿಸಿರುವ ನೆರೆಯ ಅಕ್ಕಿಮರಡಿ ಗ್ರಾಮದ ಮಲ್ಲಪ್ಪ ಬೋರಡ್ಡಿ ಅವರ ಎತ್ತುಗಳನ್ನು ಇಂದು ಬರೋಬ್ಬರಿ 36 ಲಕ್ಷ ಹಣವನ್ನು ಕೊಟ್ಟು ಖರೀದಿಸಿದ್ದೇವೆ.

Advertisement

ನಮ್ಮ ಜಾನುವಾರುಗಳ ಪ್ರೀತಿಗೆ ಸಹೋದರರಾದ ಕೃಷ್ಣಗೌಡ, ವಿಠ್ಠಲಗೌಡ, ನಾರಾಯಣಗೌಡ ಅವರು ಸಹಕಾರ ನೀಡುತ್ತಿದ್ದಾರೆ. ಕಳೆದ 25 ವರ್ಷಗಳಿಂದ ರಾಜಕೀಯ ಜೀವನದಲ್ಲಿದ್ದರೂ ಸಹ ಜಾನುವಾರುಗಳ ಮೇಲಿನ ಅಭಿಮಾನ, ಹುಚ್ಚುಪ್ರೀತಿ ಕಡಿಮೆಯಾಗಿಲ್ಲ. ಈ ಜೋಡೆತ್ತುಗಳು ತೆರಬಂಡಿ ಸ್ಪರ್ಧೆಗೆ ಹೇಳಿ ಮಾಡಿಸಿದ ಜೋಡೆತ್ತುಗಳಾದ ಕಾರಣ ಹೆಚ್ಚಿನ ಹಣ ನೀಡಿ ಖರೀದಿಸಿದ್ದೇವೆ ಎಂಬ ಹೆಮ್ಮ ನಮಗಿದೆ.
-ಯಲ್ಲನಗೌಡ ಪಾಟೀಲ. 36 ಲಕ್ಷಕ್ಕೆ ಜೋಡೆತ್ತು ಖರೀದಿಸಿದ ಮಹಾಲಿಂಗಪುರ ಪುರಸಭೆ ಅಧ್ಯಕ್ಷರು.

ಬಹುಮಾನ ಮತ್ತು ಮಾರಾಟದಲ್ಲಿ ದಾಖಲೆಯ ಹೆಮ್ಮೆ :
ಕಳೆದ 4 5 ವರ್ಷಗಳ ಹಿಂದೆ ಒಂದು ಎತ್ತಿಗೆ 16 ಲಕ್ಷ ಹಾಗೂ ಇನ್ನೊಂದು ಎತ್ತಿಗೆ 12.80 ಲಕ್ಷ ಹಣ ಕೊಟ್ಟು ಖರೀದಿಸಿದ್ದೇವು. ಎರಡು ಎತ್ತುಗಳನ್ನು ಬೇರೆ ಬೇರೆ ಭಾಗಗಳಿಂದ ಖರೀದಿಸಿ ತಂದು ಸ್ಪರ್ಧೆಗಾಗಿ ಜೋಡಿ ಮಾಡಿದ್ದೇವು. ಒಟ್ಟು 28.80 ಲಕ್ಷಕ್ಕೆ ಖರೀದಿಸಿದ ಎತ್ತುಗಳು ಕಳೆದ 4 5 ವರ್ಷಗಳಲ್ಲಿ ಉತ್ತರ ಕರ್ನಾಟಕದ 4 5 ಜಿಲ್ಲೆಗಳಲ್ಲಿ ನಡೆದ ತೆರಬಂಡಿ ಸ್ಪರ್ಧೆಯಗಳ ಬಹುತೇಕ ಕಡೆಗಳಲ್ಲಿ ಪ್ರಥಮ ಮತ್ತು ದ್ವೀತಿಯ ಸ್ಥಾನಗಳಿಸಿ ನಾವು ಹಾಕಿದ ಹಣಕ್ಕೆ ಮೂರು ಪಟ್ಟು ಲಾಭವನ್ನು ತಂದುಕೊಟ್ಟಿವೆ. ತೆರಬಂಡಿ ಸ್ಪರ್ಧೆಯಲ್ಲಿ ಅತಿಹೆಚ್ಚು ಪ್ರಥಮ ಬಹುಮಾನ ಪಡೆದಿದ್ದು ಹಾಗೂ ಇಂದು ದಾಖಲೆಯ 36 ಲಕ್ಷಕ್ಕೆ ಜೋಡೆತ್ತು ಮಾರಾಟವಾಗಿದ್ದು ಕರ್ನಾಟಕ ರಾಜ್ಯದಲ್ಲಿ ನಮ್ಮ ಅಕ್ಕಿಮರಡಿ ಎತ್ತುಗಳೇ ಮೊದಲಿರಬಹುದು. ನಮ್ಮ ಹಾಗೆ ಎತ್ತುಗಳ ಮೇಲೆ ಅಪಾರ ಪ್ರೀತಿ, ಅಭಿಮಾನ ಮತ್ತು ತೆರಬಂಡಿ ಸ್ಪರ್ಧೆಯನ್ನು ನಡೆಸುವಂತಹ ಮಹಾಲಿಂಗಪುರ ಪುರಸಭೆಯ ಅಧ್ಯಕ್ಷರು, ಪ್ರಗತಿಪರ ರೈತರಾದ ಯಲ್ಲನಗೌಡ ಪಾಟೀಲ ಅವರು ದಾಖಲೆಯ 36 ಲಕ್ಷಕ್ಕೆ ನಮ್ಮ ಜೋಡೆತ್ತುಗಳನ್ನು ಖರೀದಿಸಿದ್ದು ನಮಗೆ ಬಹಳ ಖುಷಿಯ ಸಂಗತಿ ಎನ್ನುತ್ತಾರೆ ಎತ್ತುಗಳನ್ನು ಮಾರಾಟ ಮಾಡಿದ ಅಕ್ಕಿಮರಡಿಯ ಮಲ್ಲಪ್ಪ ಬೋರಡ್ಡಿ.

ವರದಿ: ಚಂದ್ರಶೇಖರ ಮೋರೆ ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next