Advertisement

MUDA; ಅವರು-ಇವರು ಕಳ್ಳರು ಎನ್ನೋದು ಬೇಡ, ರಾಜೀನಾಮೆ ಕೊಟ್ಟು ನೀವು ಸ್ವಚ್ಛವಾಗಿರಿ: ಯತ್ನಾಳ್

04:34 PM Sep 28, 2024 | keerthan |

ವಿಜಯಪುರ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಗೌರವಯುತವಾಗಿ ರಾಜೀನಾಮೆ ನೀಡಬೇಕು. ಅವರು ಕಳ್ಳರಿದ್ದಾರೆ, ಇವರು ಕಳ್ಳರಿದ್ದಾರೆ ಎನ್ನುವುದು ಬೇಡ. ರಾಜಕೀಯದಲ್ಲಿ ನೀವು ಸ್ವಚ್ಛವಾಗಿರಿ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರು ಸಿದ್ದರಾಮಯ್ಯನವರಿಗೆ ಸಲಹೆ ನೀಡಿದರು.

Advertisement

ಮುಡಾ ಪ್ರಕರಣದ ಆರೋಪ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ತಮ್ಮ ರಾಜೀನಾಮೆ ವಿಷಯವನ್ನು ಎತ್ತಿದಾಗ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಿದ್ದಾರಾ?, ಬಿ.ಎಸ್.ಯಡಿಯೂರಪ್ಪ ಜೈಲಿಗೆ ಹೋಗಿ ಬಂದು ಮತ್ತೆ ಸಿಎಂ ಆಗಿಲ್ವಾ? ಎಂಬ ಪ್ರಶ್ನೆಗಳಿಗೆ ಯತ್ನಾಳ ಈ ರೀತಿ ಪ್ರತಿಕ್ರಿಯಿಸಿದರು. ಈ ಪ್ರಶ್ನೆಯನ್ನು ಕುಮಾರಸ್ವಾಮಿ ಅವರಿಗೆ ಕೇಳಿ. ಪಾಪ ಯಡಿಯೂರಪ್ಪ ಮನೆಯಲ್ಲಿ ಕುಳಿತಿದ್ದಾರೆ. ಅವರು ಹಾದಿಯಲ್ಲಿ ಸಿಗದಿದ್ದರೆ ಅವರ ಮನೆಗೆ ಹೋಗಿ ಕೇಳಿ. ಅವರಿಬ್ಬರ ಬಗ್ಗೆ ನಾ ಯಾಕೆ ಹೇಳಲಿ?, ನನಗೇನು ಕೆಲಸ ಇಲ್ವಾ ಎಂದು ಖಾರವಾಗಿ ನುಡಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಈ ಹಿಂದೆ ಎಲ್.ಕೆ.ಅಡ್ವಾಣಿ ವಿರುದ್ಧ ಕೇವಲ 50 ಲಕ್ಷ ರೂಪಾಯಿ ಆರೋಪ ಕೇಳಿ ಬಂದಿತ್ತು. ಬೊಫೋರ್ಸ್ ಹಗರಣದ ಕುರಿತ ಜೈನ್ ಡೈರಿಯಲ್ಲಿ “ಎಲ್‌ಕೆಎ” ಎಂದಷ್ಟೇ ಉಲ್ಲೇಖಿಸಲಾಗಿತ್ತು. ಈ ಆರೋಪದಿಂದ ಅವರು ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ಮುಕ್ತವಾಗುವವರೆಗೆ ಸಂಸತ್ ಪ್ರವೇಶ ಮಾಡುವುದಿಲ್ಲ ಎಂದು ನಿರ್ಧಾರ ಮಾಡಿದ್ದರು. ಅದು ಆದರ್ಶ. ಅದೇ ರೀತಿ ಸಿದ್ದರಾಮಯ್ಯ ಕರ್ನಾಟಕಕ್ಕೆ ಹೊಸ ಮತ್ತು ತಮ್ಮದೇ ಆದ ಆದರ್ಶವಾಗಬೇಕಾದರೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಇಲ್ಲವಾದರೆ ಅವರು ಕೂಡಾ ಯಡಿಯೂರಪ್ಪ ರೀತಿಯೇ ಆಗುತ್ತಾರೆ ಎಂದು ಸೂಚ್ಯವಾಗಿ ಹೇಳಿದರು.

ಇದೇ ವೇಳೆ, ಸಿದ್ದರಾಮಯ್ಯ ಯಾಕೆ ರಾಜೀನಾಮೆ ನೀಡಬೇಕೆಂದರೆ, ಅವರು ರಾಜ್ಯದ ಮುಖ್ಯಮಂತ್ರಿ ಇದ್ದಾರೆ. ಯಾವ ಅಧಿಕಾರಿಗಳಿಗೆ ಅವರ ವಿರುದ್ಧ ಪಾರದರ್ಶಕ ಮತ್ತು ನಿಷ್ಪಕ್ಷಪಾತವಾಗಿ ತನಿಖೆ ಮಾಡಲು ಆಗುತ್ತದೆ? ಅಧಿಕಾರಿಗಳು ಅವರ ವಿರುದ್ಧ ಏನಾದರೂ ರಿಪೋರ್ಟ್ ಕೊಟ್ಟರೆ, ಅಂತಹ ಅಧಿಕಾರಿಗಳು ಮರುದಿನವೇ ವರ್ಗಾವಣೆ ಇಲ್ಲವೇ, ಸಸ್ಪೆಂಡ್ ಆಗಬೇಕಾಗುತ್ತದೆ. ಇದರಿಂದ ಅಧಿಕಾರಿಗಳು ಭಯದಲ್ಲಿ ಇರುತ್ತಾರೆ. ಸಿಎಂ ಹುದ್ದೆಯಿಂದ ಸಿದ್ದರಾಮಯ್ಯ ಹೊರಹೋದರೆ ನಿಷ್ಪಕ್ಷಪಾತ ತನಿಖೆ ಮಾಡಬಹುದು ಎಂದು ತಿಳಿಸಿದರು.

Advertisement

ರಾಹುಲ್ ರಾಜೀನಾಮೆ ಕೊಡುತ್ತಾರಾ?: ಚುನಾವಣಾ ಬಾಂಡ್‌ ಗಳನ್ನು ಎಲ್ಲಾ ರಾಜಕೀಯ ಪಕ್ಷಗಳು ತೆಗೆದುಕೊಂಡಿವೆ. ಲಾಲು ಪ್ರಸಾದ್, ಮುಲಾಯಂ ಸಿಂಗ್ ಯಾದವ ಪುತ್ರನೂ ಚುನಾವಣಾ ಬಾಂಡ್ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್, ಬಿಜೆಪಿ ಕೂಡ ತೆಗೆದುಕೊಂಡಿದೆ. ಹಾಗಾದರೆ, ರಾಹುಲ್ ಗಾಂಧಿ ರಾಜೀನಾಮೆ ಕೊಡುತ್ತಾರಾ? ಸುಪ್ರೀಂ ಕೋರ್ಟ್ ಚುನಾವಣೆ ಬಾಂಡನ್ನು ಯಾರು ತೆಗೆದುಕೊಳ್ಳಬಾರದು ಎಂದು ಹೇಳಿದೆ. ಹೀಗಾಗಿ ಎಲ್ಲರೂ ಬಿಟ್ಟಿದ್ದಾರೆ. ಆದರೆ, ಬಿಜೆಪಿಗೆ ಹೆಚ್ಚಿನ ಜನರು ರೊಕ್ಕ ಕೊಟ್ಟಿರುವುದರಿಂದ ಅವರಿಗೆ ತಾಪವಾಗಿದೆ ಎಂದು ಯತ್ನಾಳ ಪ್ರತಿಪಕ್ಷಗಳಿಗೆ ಕುಟುಕಿದರು.

ನ್ಯಾಯಾಲಯಕ್ಕೆ ಗೌರವ ಕೊಡಬೇಕು: ಇದೇ ಚುನಾವಣಾ ಬಾಂಡ್ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ ಕುರಿತ ಪ್ರಶ್ನೆಗೆ ಯತ್ನಾಳ್, ನ್ಯಾಯಾಲಯದ ಏನು ಹೇಳುತ್ತದೆ, ಯಾರ ಮೇಲೆ ಎಫ್‌ಐಆರ್ ಹಾಕಬೇಕು ಎಂದು ಹೇಳುತ್ತದೆಯೋ, ಆ ಆದೇಶ ಪಾಲಿಸಬೇಕು. ಅದು ಎಲ್ಲರಿಗೂ ಅನ್ವಯವಾಗುತ್ತದೆ. ನನಗೂ, ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿಗಳಿಗೂ ಅಷ್ಟೇ. ನ್ಯಾಯಾಲಯಕ್ಕೆ ನಾವು ಗೌರವ ಕೊಡಬೇಕು. ನಾವು ನ್ಯಾಯಾಲಯಕ್ಕೆ ಹೋಗುತ್ತೇವೆ, ನ್ಯಾಯ ಬೇಡುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next