ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರ ಸಂಬಂಧದಲ್ಲಿ ಬಿರುಕು ಮೂಡಿದೆ, ಸದ್ಯದಲ್ಲೇ ರಶ್ಮಿಕಾ, ರಕ್ಷಿತ್ ಜೊತೆಗಿನ ಸಂಬಂಧ ಕಡಿದುಕೊಳ್ಳಲಿದ್ದಾರೆ, ಅವರಿಗೆ ತೆಲುಗು ಚಿತ್ರರಂಗದಲ್ಲಿ ಗಟ್ಟಿನೆಲೆಯೂರುವ ಆಸೆ ಇದೆ. ಬೇಗನೇ ಮದುವೆಯಾದರೆ ಚಿತ್ರರಂಗದಲ್ಲಿ ಬಿಝಿಯಾಗಿರಲು ಸಾಧ್ಯವಿಲ್ಲ. ಈ ಕಾರಣದಿಂದ ರಶ್ಮಿಕಾ, ರಕ್ಷಿತ್ ಶೆಟ್ಟಿ ಜೊತೆಗಿನ ನಿಶ್ಚಿತಾರ್ಥವನ್ನು ಮುರಿದು, ತೆಲುಗು ಚಿತ್ರರಂಗದಲ್ಲಿ ತೊಡಗಿಸಿಕೊಳ್ಳಲಿದ್ದಾರೆ – ಈ ತರಹದ ಸುದ್ದಿಯೊಂದು ಕೆಲವು ವೆಬ್‌ಸೈಟ್‌ಗಳಲ್ಲಿ ಓಡಾಡುತ್ತಿದೆ.
ತೆಲುಗಿನಲ್ಲಿ ಬಿಝಿಯಾಗುತ್ತಿರುವ ರಶ್ಮಿಕಾಗೆ, ತೆಲುಗು ಚಿತ್ರರಂಗದಲ್ಲೇ ಮುಂದುವರೆಯುವ ಆಸೆ ಇರುವುದರಿಂದ ರಕ್ಷಿತ್ ಜೊತೆಗಿನ ನಿಶ್ಚಿತಾರ್ಥವನ್ನು ಮುರಿದುಕೊಳ್ಳಲಿದ್ದಾರೆಂದು ಕೆಲವು ತೆಲುಗು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಆದರೆ, ಈ ಬಗ್ಗೆ ರಕ್ಷಿತ್ ಶೆಟ್ಟಿಯವರನ್ನು ಕೇಳಿದರೆ, “ಈ ತರಹ ಯಾಕೆ ಸುದ್ದಿಯಾಗುತ್ತಿದೆಯೋ ನನಗೂ ಗೊತ್ತಿಲ್ಲ’ ಎನ್ನುತ್ತಾರೆ.
“ನಾವಿಬ್ಬರು ತುಂಬಾ ಚೆನ್ನಾಗಿದ್ದೇವೆ. ಆದರೆ, ಈ ತರಹದ ಸುಳ್ಳು ಸುದ್ದಿಗಳನ್ನು ಯಾರು ಹಬ್ಬಿಸುತ್ತಿದ್ದಾರೋ ಗೊತ್ತಿಲ್ಲ. ಇದರ ಹಿಂದಿನ ಉದ್ದೇಶವೇನೆಂಬುದು ನನಗೆ ಅರ್ಥವಾಗುತ್ತಿಲ್ಲ. ಸಿನಿಮಾ ಪ್ರಚಾರಕ್ಕಾಗಿ ಈ ತರಹ ಮಾಡುತ್ತಿದ್ದಾರೋ ಅಥವಾ ದೂರದಿಂದ ಮಜಾ ತೆಗೆದುಕೊಳ್ಳುತ್ತಿದ್ದಾರೋ … ನಾವಂತೂ ಚೆನ್ನಾಗಿದ್ದೇವೆ.
ನಾವಿಬ್ಬರು ಎಷ್ಟೇ ಬಿಝಿ ಇದ್ದರೂ ವಾರಕ್ಕೊಂದು ಬಾರಿಯಾದರೂ ಭೇಟಿಯಾಗುತ್ತೇವೆ. ರಶ್ಮಿಕಾ ಕೂಡಾ ತೆಲುಗು ಸಿನಿಮಾ ಚಿತ್ರೀಕರಣದಲ್ಲಿ ಬಿಝಿಯಾಗಿದ್ದರೂ ನನ್ನನ್ನು ನೋಡಲೆಂದೇ ಅಲ್ಲಿಂದ ಬರುತ್ತಾಳೆ. ಹೀಗಿರುವಾಗ ನಾವು ದೂರವಾಗುವ ಮಾತೆಲ್ಲಿ’ ಎನ್ನುವುದು ರಕ್ಷಿತ್ ಶೆಟ್ಟಿ ಮಾತು. ಇನ್ನು, ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಟಿಸಿರುವ ತೆಲುಗು ಚಿತ್ರ “ಗೀತಾ ಗೋವಿಂದಂ’ ಆಗಸ್ಟ್ 15 ರಂದು ತೆರೆಕಾಣುತ್ತಿದೆ.
ಸಿನಿಮಾ ಪ್ರಚಾರಕ್ಕಾಗಿ ಈ ತರಹದ ಯಾರಾದರೂ ಈ ತರಹದ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೋ ಎಂಬ ಸಂದೇಹ ಕೂಡಾ ರಕ್ಷಿತ್‌ಗಿದೆ. “ಯಾರು ಏನೇ ಅಂದರೂ ನಾವಿಬ್ಬರು ಚೆನ್ನಾಗಿದ್ದೇವೆ. ಮದುವೆಯಾಗುವವರೆಗೆ ಈ ತರಹದ ಸುದ್ದಿಗಳು ಬರುತ್ತಲೇ ಇರುತ್ತದೆ’ ಎನ್ನುತ್ತಾರೆ ರಕ್ಷಿತ್. ಸದ್ಯ ರಕ್ಷಿತ್ “ಅವನೇ ಶ್ರೀಮನ್ನಾರಾಯಣ’ ಹಾಗೂ “777 ಚಾರ್ಲಿ’ ಸಿನಿಮಾದಲ್ಲಿ ಬಿಝಿಯಾಗಿದ್ದು, ಸದ್ಯ “ಅವನೇ ಶ್ರೀಮನ್ನಾರಾಯಣ’ ಚಿತ್ರೀಕರಣ ನಡೆಯುತ್ತಿದೆ.