Advertisement

ನಮ್ಮ ಮುಂದಿರುವ ಸವಾಲಿಗೆ ಸಮರ್ಥ ಉತ್ತರ ನೀಡುತ್ತೇವೆ

10:23 AM Jul 05, 2019 | Lakshmi GovindaRaj |

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಆಯ್ಕೆಯಾದ ನೂತನ ಅಧ್ಯಕ್ಷರು ಹಾಗು ಪದಾಧಿಕಾರಿಗಳನ್ನು ಬುಧವಾರ “ಉದಯವಾಣಿ’ ಮಣಿಪಾಲ್‌ ಮೀಡಿಯಾ ನೆಕ್‌ವರ್ಕ್‌ ಪರವಾಗಿ ಅಭಿನಂದಿಸಿತು. ಈ ವೇಳೆ “ಉದಯವಾಣಿ’ಗೆ ವಿಶೇಷ ಸಂದರ್ಶನ ನೀಡಿದ ನೂತನ ಅಧ್ಯಕ್ಷ ಜೈರಾಜ್‌ ಅವರು, ತಮ್ಮ ಯೋಜನೆಗಳು, ಆದ್ಯತೆಯ ಕೆಲಸಗಳ ಬಗ್ಗೆ ಮಾತನಾಡಿದ್ದಾರೆ.

Advertisement

ಚಿತ್ರಗಳ ಸಂಖ್ಯೆ ಜಾಸ್ತಿ, ಗೆಲ್ಲುವ ಚಿತ್ರ ಕಡಿಮೆ: ಕಳೆದ ವರ್ಷ 200ಕ್ಕೂ ಹೆಚ್ಚು ಚಿತ್ರಗಳು ಕನ್ನಡದಲ್ಲಿ ಬಂದಿವೆ. ಈ ವರ್ಷ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ವರ್ಷದಿಂದ ವರ್ಷಕ್ಕೆ ಚಿತ್ರಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಚಿತ್ರರಂಗದ ಮಟ್ಟಿಗೆ ಇದು ಒಳ್ಳೆಯ ಬೆಳವಣಿಗೆ. ಆದರೆ, ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಚಿತ್ರಗಳು ಬಿಡುಗಡೆಯಾದರೂ, ಗೆಲ್ಲುವ ಚಿತ್ರಗಳ ಸಂಖ್ಯೆ ಕಡಿಮೆ ಇದೆ.

ಚಿತ್ರಗಳು ದುಡ್ಡು ಮಾಡುವುದಿರಲಿ, ಬಹುತೇಕ ಚಿತ್ರಗಳಿಗೆ ನಿರ್ಮಾಪಕರು ಹಾಕಿದ ಕನಿಷ್ಟ ಬಂಡವಾಳ ಕೂಡ ವಾಪಾಸ್‌ ಬರುತ್ತಿಲ್ಲ. ಹೀಗಾದರೆ ನಿರ್ಮಾಪಕರು ಉಳಿಯುವುದಾದರೂ ಹೇಗೆ? ಪ್ರತಿವರ್ಷ ಹೊಸ ನಿರ್ಮಾಪಕರು, ನಿರ್ದೇಶಕರು ಬರುತ್ತಿದ್ದಾರೆ. ಈ ಸಂಖ್ಯೆ ಕೂಡ ಜಾಸ್ತಿಯಾಗುತ್ತಿದೆ.

ಆದರೆ ಚಿತ್ರಗಳು ಸೋಲುತ್ತಾ ಹೋದರೆ, ಮತ್ತೆ ಯಾರು ಚಿತ್ರ ಮಾಡೋದಕ್ಕೆ ಮುಂದೆ ಬರುತ್ತಾರೆ? ಚಿತ್ರರಂಗದ ಮಟ್ಟಿಗೆ ಇದೊಂದು ಗಂಭೀರ ವಿಚಾರ. ಇದಕ್ಕೆ ಎಲ್ಲರೂ ಸೇರಿ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಇದು ಚಿತ್ರರಂಗದ ಅಸ್ತಿತ್ವದ ಪ್ರಶ್ನೆಯಾಗಿರುವುದರಿಂದ, ಖಂಡಿತಾ ಮುಂದಿನ ದಿನಗಳಲ್ಲಿ ವಾಣಿಜ್ಯ ಮಂಡಳಿ ಈ ನಿಟ್ಟಿನಲ್ಲಿ ಕೆಲಸ ಮಾಡಲಿದೆ.

ಮಂಡಳಿ ಮುಂದೆ ಸವಾಲುಗಳಿವೆ: ಕನ್ನಡ ಚಿತ್ರರಂಗಕ್ಕೆ ವಾಣಿಜ್ಯ ಮಂಡಳಿಯೇ ಮಾತೃ ಸಂಸ್ಥೆಯಾಗಿರುವುದರಿಂದ, ಸಹಜವಾಗಿಯೇ ಚಿತ್ರರಂಗದಲ್ಲಿ ಏನೇ ಸಮಸ್ಯೆಗಳಿದ್ದರೂ, ಅದು ಮಂಡಳಿ ಮುಂದೆ ಬರುತ್ತದೆ. ವಾಣಿಜ್ಯ ಮಂಡಳಿ ನಿರ್ಮಾಪಕರು, ವಿತರಕರು, ಪ್ರದರ್ಶಕರು ಹೀಗೆ ಇಡೀ ಚಿತ್ರರಂಗದ ಹಿತ ಕಾಯಬೇಕಾಗಿರುವುದರಿಂದ, ಎಲ್ಲದಕ್ಕೂ ಸ್ಪಂದಿಸಬೇಕಾಗುತ್ತದೆ. ಹಾಗಂತ, ಚಿತ್ರರಂಗದ ಎಲ್ಲಾ ಸಮಸ್ಯೆಗಳಿಗೂ ನಾವು ಪರಿಹಾರ ಕೊಡುತ್ತೇವೆ ಅಂತಲ್ಲ.

Advertisement

ನಮ್ಮ ವ್ಯಾಪ್ತಿಯಲ್ಲಿ ನಾವೇನು ಮಾಡಬಹುದೋ, ಅದನ್ನು ಖಂಡಿತಾ ಮಾಡುತ್ತೇವೆ. ಎಲ್ಲರನ್ನು ಒಟ್ಟಾಗಿ ವಿಶ್ವಾಸದಿಂದ ಕರೆದುಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಥಿಯೇಟರ್‌ ಸಮಸ್ಯೆ, ಚಿತ್ರನಗರಿ ವಿಳಂಬ, ಜಿಎಸ್‌ಟಿ ಹೀಗೆ ನಮ್ಮ ಮುಂದೆ ಹತ್ತಾರು ಸಮಸ್ಯೆಗಳು ಇವೆ ಅನ್ನೋದಕ್ಕಿಂತ, ಸವಾಲುಗಳು ಇದೆ ಅಂತ ಹೇಳಬಹುದು.

ಪರಿಹಾರ ಹುಡುಕುವ ಪ್ರಯತ್ನ ಮಾಡುತ್ತೇವೆ: ಕೆಲವೊಂದು ಸಮಸ್ಯೆಗಳು ಅನೇಕ ವರ್ಷದಿಂದ ಚಿತ್ರರಂಗದಲ್ಲಿದೆ. ಪ್ರದರ್ಶಕನಾಗಿ, ವಿತರಕನಾಗಿ ನಾನು ಕೂಡ ಅಂತಹ ಅನೇಕ ಸಮಸ್ಯೆ ಎದುರಿಸಿದ್ದೇನೆ. ಹಾಗಾಗಿ ನನಗೆ ಚಿತ್ರದಲ್ಲಿರುವ ಎಲ್ಲರ ಸಮಸ್ಯೆ, ನೋವು ಅರ್ಥವಾಗುತ್ತದೆ. ಅದರಲ್ಲೂ ಹೊಸದಾಗಿ ಚಿತ್ರ ಮಾಡಿದವರು ಥಿಯೇಟರ್‌ ಸಿಗುತ್ತಿಲ್ಲ ಎನ್ನುವ ಸಮಸ್ಯೆ ಹೇಳುತ್ತಾರೆ.

ಒಳ್ಳೆ ಚಿತ್ರ ಮಾಡಿದರೆ ಖಂಡಿತಾ ಥಿಯೇಟರ್‌ ಕೊಡಬಹುದು ಅನ್ನೋದು ಪ್ರದರ್ಶಕರ ವಾದ. ಯುಎಫ್ಓ – ಕ್ಯೂಬ್‌ ಸರಿಯಾಗಿ ವ್ಯವಹರಿಸುತ್ತಿಲ್ಲ ಎನ್ನುವ ದೂರಿದೆ. ಇನ್ನೊಂದು ಕಡೆ ಸರ್ಕಾರ ಜನತಾ ಥಿಯೇಟರ್‌ ಬಗ್ಗೆ ಹೇಳಿದರೂ, ಅದನ್ನು ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಚಿತ್ರನಗರಿ ಈಗಾಗಲೇ ಆಗಬೇಕಿತ್ತು.

ಕಾರಣಾಂತರಗಳಿಂದ ಆಗಿಲ್ಲ. ಜಿಎಸ್‌ಟಿ ಗೊಂದಲ ಇನ್ನೂ ಇದೆ. ಈ ಬಗ್ಗೆ ಸರ್ಕಾರದ ಜೊತೆ ಮಾತುಕತೆ ಮಾಡುತ್ತಿದ್ದೇವೆ. ಇಲ್ಲಿ ಯಾರೋ ಒಬ್ಬರು ಸರಿ, ಮತ್ತೂಬ್ಬರು ತಪ್ಪು ಅಂತ ಹೇಳಲಾಗುವುದಿಲ್ಲ. ಒಟ್ಟಿನಲ್ಲಿ ನಮ್ಮ ಅವಧಿಯಲ್ಲಿ ಈ ಇದೆಲ್ಲದ್ದಕ್ಕೂ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇವೆ.

ಮಂಡಳಿಗೆ 75ರ ಸಂಭ್ರಮಕ್ಕೆ ತಯಾರಿ: ಕನ್ನಡ ಚಿತ್ರರಂಗ ಎಂಟು ದಶಕಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದೇ ವೇಳೆ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಎಪ್ಪತ್ತೈದರ ಸಂಭ್ರಮದಲ್ಲಿದೆ. ಈ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಲು ಮಂಡಳಿ ನಿರ್ಧರಿಸಿದೆ. ಚಿತ್ರರಂಗವನ್ನು ಕಟ್ಟಿದ, ಇದರ ಬೆಳವಣಿಗೆಗೆ ಕಾರಣರಾದವರನ್ನು ಸ್ಮರಿಸುವ, ಚಿತ್ರರಂಗದ ಇತಿಹಾಸವನ್ನು ಈಗಿನವರಿಗೆ ಮತ್ತು ಮುಂದಿನವರಿಗೆ ತಲುಪಿಸುವ ಸದುದ್ದೇಶದಿಂದ ಇಂಥದ್ದೊಂದು ವಿಭಿನ್ನ ಕಾರ್ಯಕ್ರಮ ನಡೆಸುವ ಯೋಜನೆ ಇದೆ.

ಚಿತ್ರರಂಗದ ಎಲ್ಲರ ಸಹಕಾರ ಪಡೆದುಕೊಂಡು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಇಡೀ ಭಾರತೀಯ ಚಿತ್ರರಂಗವೇ ಇದಕ್ಕೆ ಸಾಕ್ಷಿಕರಿಸುವಂತೆ ಕಾರ್ಯಕ್ರಮ ಮಾಡುವ ಯೋಜನೆ ಇದೆ. ಈ ಕಾರ್ಯಕ್ರಮದ ಬಗ್ಗೆ ಈಗಾಗಲೇ ತಯಾರಿ ಮತ್ತು ರೂಪುರೇಷೆಗಳು ಸಿದ್ಧವಾಗುತ್ತಿದ್ದು, ಶೀಘ್ರದಲ್ಲಿಯೇ ಅದರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇವೆ.

Advertisement

Udayavani is now on Telegram. Click here to join our channel and stay updated with the latest news.

Next