ತಿರುವನಂತಪುರಂ: ಪ್ರವಾಹದಿಂದಾಗಿ ಕೇರಳ ಭೌಗೋಳಿಕ ರಚನೆಯೇ ಬದಲಾಗಿದ್ದು, ಮಣ್ಣಿನ ಮೇಲ್ಪದರ ನೀರಿನಲ್ಲಿ ಕೊಚ್ಚಿಹೋಗಿದೆ. ಇದರ ಪರಿಣಾಮವಾಗಿ ವಯನಾಡ್‌ನಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಪ್ರಮಾಣದಲ್ಲಿ ಎರೆಹುಳಗಳು ಸತ್ತು ಬೀಳುತ್ತಿವೆ. ಇದಕ್ಕೆ ಭೂಮಿಯಲ್ಲಿ ಉಂಟಾಗಿರುವ ವಿಪರೀತ ಉಷ್ಣತೆಯೇ ಕಾರಣ ಎಂದು ವಯನಾಡ್‌ಗೆ ಭೇಟಿ ನೀಡಿದ ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಭೂಮಿಯ ಮೇಲ್ಭಾಗದ ಮಣ್ಣು ಪ್ರವಾಹದಲ್ಲಿ ನೀರಿನೊಂದಿಗೆ ಕೊಚ್ಚಿ ಹೋಗಿದೆ. ಈಗ ಇರುವ ಮಣ್ಣು ಎರೆಹುಳಗಳಿಗೆ ಪೂರಕವಾಗಿಲ್ಲ. ಇವು ಗಡುಸಾಗಿವೆ. ಹೀಗಾಗಿ ನೀರು ಮತ್ತು ತೇವಾಂಶವನ್ನು ಸುಲಭವಾಗಿ ಹೀರಿಕೊಳ್ಳುತ್ತಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಎರೆಹುಳಗಳು ಮಣ್ಣಿನ ಆರೋಗ್ಯ ಕಾಪಾಡುವ ಪ್ರಮುಖ ಜೀವಿಗಳಾಗಿದ್ದು, ಇವು ಸತ್ತು ಹೋದರೆ ಮಣ್ಣಿನಲ್ಲಿ ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ. ಈ ಪರಿಸ್ಥಿತಿ ಮುಂದುವರಿದರೆ ಮಣ್ಣಿನಲ್ಲಿರುವ ಇತರ ಸೂಕ್ಷ್ಮ ಜೀವಿಗಳು ಕೂಡ ಸಾಯುತ್ತವೆ. ಇದರಿಂದಾಗಿ ಭತ್ತ ಮತ್ತು ಕಾಳುಮೆಣಸಿ ನಂತಹ ಬೆಳೆಗಳ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂದು ಪರಿಸರ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಎರೆಹುಳಗಳು ಸಾವನ್ನಪ್ಪುತ್ತಿರುವುದರ ಬಗ್ಗೆ ಸಮಗ್ರ ಅಧ್ಯಯನ ಅಗತ್ಯವಿದ್ದು, ಇದರ ಕಾರಣ ಮತ್ತು ಪರಿಣಾಮಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕಿದೆ.
ವ್ಯಕ್ತಿ ಬಂಧನ: ಪ್ರವಾಹದ ಬಳಿಕ ಕಂಡುಬಂದಿರುವ ಇಲಿ ಜ್ವರದಂಥ ಸಾಂಕ್ರಾಮಿಕ ರೋಗಗಳಿಗೆ ಸರ್ಕಾರ ನೀಡುತ್ತಿರುವ ಔಷಧಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹಬ್ಬಿಸಿದ ವ್ಯಕ್ತಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಆರೋಗ್ಯ ಸಚಿವೆ ಶೈಲಜಾ ಅವರ ನಿರ್ದೇಶನದ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮೂಲಕ ಜನರಲ್ಲಿ ಆತಂಕ ಮೂಡಿಸುತ್ತಿದ್ದ ಆರೋಪದಲ್ಲಿ ಜಾಕೋಬ್ ವಡಕ್ಕಂಚೇರಿ ಎಂಬವರನ್ನು ಬಂಧಿಸಿದ್ದಾರೆ.