Advertisement

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

03:10 AM Nov 23, 2024 | Team Udayavani |

ಉಡುಪಿ: ಕಾಡಿನಲ್ಲಿಯೇ ಸುತ್ತಾಡುವ ನಕ್ಸಲರು ಕೆಲವು ಸಮಯದ ಹಿಂದೆ ರೈಲಿನ ಮೂಲಕ ಪ್ರಯಾಣಿಸಿದ್ದರು ಎಂಬ ಮಾಹಿತಿ ಈಗ ಹೊರಗೆ ಬಿದ್ದಿದೆ. ಎನ್‌ಕೌಂಟರ್‌ಗೆ ಬಲಿಯಾದ ನಕ್ಸಲ್‌ ವಿಕ್ರಂ ಗೌಡ ಮತ್ತು ತಂಡ ಸುಬ್ರಹ್ಮಣ್ಯದಿಂದ ಮುರ್ಡೇಶ್ವರ ವರೆಗೆ ರೈಲಿನಲ್ಲಿ ಹೋಗಿ ಅನಂತರ ಕಾಡು ಹಾದಿ ಹಿಡಿದಿದ್ದರು ಎಂದು ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

Advertisement

ಲೋಕಸಭೆ ಚುನಾವಣೆ ಸನಿಹದಲ್ಲಿ ಎಲ್ಲೆಡೆ ಹೆಚ್ಚುವರಿ ಭದ್ರತೆ ಇದ್ದುದರಿಂದ ದಕ್ಷಿಣ ಕನ್ನಡ, ಕೊಡಗು ಗಡಿಭಾಗ ಕೂಜುಮಲೆ, ಕಡಮಕಲ್ಲು , ಸುಬ್ರಹ್ಮಣ್ಯ, ಬಿಳಿನೆಲೆ ಭಾಗದಲ್ಲಿ ಹೆಚ್ಚಿನ ದಿನಗಳನ್ನು ನಕ್ಸಲರು ಕಳೆದಿದ್ದರು. ಈ ವೇಳೆ ಇಲ್ಲಿನ ಅರಣ್ಯದಂಚಿನ ಮನೆಗಳಿಗೆ ಭೇಟಿ ನೀಡಿ ದಿನಸಿ ಹಾಗೂ ಇನ್ನಿತರ ಸಾಮಗ್ರಿಗಳನ್ನು ಕೊಂಡೊಯ್ದಿದ್ದರು. ಅಲ್ಲಿಂದ ಪಕ್ಕದ ಸುಬ್ರಹ್ಮಣ್ಯ ಕ್ರಾಸಿಂಗ್‌ ರೋಡ್‌(ನೆಟ್ಟಣ) ರೈಲು ನಿಲ್ದಾಣಕ್ಕೆ ಆಗಮಿಸಿ ರೈಲಿನ ಮೂಲಕ ಮುರ್ಡೇಶ್ವರ ಕಡೆಗೆ ಪ್ರಯಾಣಿಸಿದ್ದರು.

ಮುರ್ಡೇಶ್ವರ ರೈಲು ನಿಲ್ದಾಣದಲ್ಲಿ ಇಳಿದು ಕಾಡು ಹತ್ತಿದ್ದ ಅವರು ಕೊಲ್ಲೂರು ಭಾಗದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿಂದ ಅವರು ಕಾಡು ದಾರಿಯಾಗಿ ಕಾರ್ಕಳ, ಹೆಬ್ರಿ ಭಾಗಕ್ಕೆ ಬಂದಿದ್ದರು. ಪೀತಬೈಲಿನಲ್ಲಿ ವಿಕ್ರಂ ಗೌಡನ ಎನ್‌ಕೌಂಟರ್‌ ಆಗುವ ಕೆಲವು ದಿನಗಳ ಹಿಂದೆಯಷ್ಟೆ ಈದುವಿನಲ್ಲಿ ಕಾಣಿಸಿಕೊಂಡಿದ್ದರು. ನಕ್ಸಲರು ರೈಲಿನಲ್ಲಿ ಪ್ರಯಾಣಿಸುವಾಗ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟು ಯಾರಿಗೂ ತಿಳಿಯದಂತೆ ಗೌಪ್ಯತೆ ಕಾಪಾಡಿಕೊಂಡಿದ್ದರು ಎಂದು ತನಿಖೆ ವೇಳೆ ಮಾಹಿತಿ ಸಿಕ್ಕಿದ್ದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

ಮುಳುವಾದ ಬಂಡಾಯ!
ಕೇರಳದಲ್ಲಿ ವಿಕ್ರಂ ಹಾಗೂ ಈ ಏಳು ಮಂದಿ ನಕ್ಸಲರ ತಂಡ ಸಕ್ರಿಯವಾಗಿತ್ತು. ಇವರು ಹಾಗೂ ಕೇರಳ ನಕ್ಸಲ್‌ ನಾಯಕ ಸಂಯೋಯ್‌ ದೀಪಕ್‌, ಮೊಹಿಯುದ್ದೀನ್‌ ಅವರ ತಂಡಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಅವರೊಳಗೆ ಸಂಘಟನೆ, ಹಣಕಾಸಿನ ವಿಚಾರದಲ್ಲಿ ಜಗಳ ನಡೆದಿತ್ತು. ವಿಕ್ರಂ ಗೌಡ ಮತ್ತವರ ತಂಡ ಸಂಯೋಯ್‌ ತಂಡದಿಂದ 1 ಲಕ್ಷ ರೂ. ಪಡೆದುಕೊಂಡಿತ್ತು. ಇದೇ ವಿಷಯದಲ್ಲಿ ತಗಾದೆಯೂ ಉಂಟಾಗಿತ್ತು.

ಹೀಗಾಗಿ ಅಸಮಾಧಾನಗೊಂಡು ವಿಕ್ರಂ ಗೌಡ ನಾಯಕತ್ವದ ಎಂಟು ಮಂದಿ ಕೊಡಗಿನ ಗಾಳಿಬೀಡು, ಕರಿಕೆ ಮಾರ್ಗವಾಗಿ ಕೊಡಗು- ದ.ಕ. ಗಡಿಭಾಗ ಪುಷ್ಪಗಿರಿ ತಪ್ಪಲಿನ ಕಡೆಗೆ ಬಂದಿಳಿದು ಕೂಜುಮಲೆ, ಸುಬ್ರಹ್ಮಣ್ಯ ಬಿಳಿನೆಲೆ ಭಾಗದಲ್ಲಿ ಓಡಾಟ ನಡೆಸಿದ್ದರು. ಈ ಭಾಗದಲ್ಲಿ ಆಶ್ರಯ ಪಡೆದು ಸಂಘಟನೆಯನ್ನು ಬಲಪಡಿಸುವ ಉದ್ದೇಶ ಹೊಂದಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next