ಹುಣಸೂರು: ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಲ್ಟಿಯಾಗಿ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಉಳಿದವರು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿರುವ ಘಟನೆ ಕೇರಳದ ತೋಲ್ ಪಟ್ಟಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಬಿಳಿಕೆರೆ ಸುತ್ತಮುತ್ತಲ ಗ್ರಾಮದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಾಲಕ ಸೇರಿದಂತೆ ಎಲ್ಲರೂ ಪಾರಾಗಿದ್ದಾರೆ.
ಹುಣಸೂರು ತಾಲೂಕಿನ ಬಿಳಿಕೆರೆಯಿಂದ ನ.16ರ ಬೆಳಗ್ಗೆ 49 ಮಂದಿ ಅಯ್ಯಪ್ಪಸ್ವಾಮಿ ಭಕ್ತರನ್ನು ಶಬರಿಮಲೈಗೆ ಕರೆದೊಯ್ದಿದ್ದ ಖಾಸಗಿ ಬಸ್ ದೇವರ ದರ್ಶನ ಮುಗಿಸಿ ವಾಪಸ್ಸಾಗುವ ವೇಳೆ ಘಟನೆ ನಡೆದಿದ್ದು, ನ.19 ಮಂಗಳವಾರ ಬೆಳಗಿನ ಜಾವ ಕೇರಳದ ಕಾಟಿಕುಳಂನಿಂದ 8 ಕಿ.ಮೀ. ದೂರದ ತೋಲ್ಪಟ್ಟಿ ಅರಣ್ಯ ಪ್ರದೇಶದ ತಿರುವಿನಲ್ಲಿ ನಿದ್ರೆ ಮಂಪರಿನಲ್ಲಿದ್ದ ಚಾಲಕ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ.
ತಕ್ಷಣವೇ ದಾರಿಯಲ್ಲಿ ಹೋಗುತ್ತಿದ್ದ ವಾಹನ ಸವಾರರು ನೆರವಿಗೆ ಧಾವಿಸಿ ಬಸ್ನೊಳಗೆ ಸಿಲುಕಿದ್ದ ಎಲ್ಲರನ್ನು ಹೊರಕ್ಕೆ ತೆಗೆದು ಗಾಯಾಳುಗಳನ್ನು ಮಾನಂದವಾಡಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದು, ಒಬ್ಬರಿಗೆ ಕೈಗೆ ಹೆಚ್ಚಿನ ಗಾಯವಾಗಿದೆ.
ಅಪಘಾತವಾದ ಬಸ್ನಲ್ಲಿದ್ದ ಯಾತ್ರಾರ್ಥಿಗಳನ್ನು ಬೇರೆ ಬಸ್ ಮೂಲಕ ಬಿಳಿಕೆರೆಗೆ ಕಳುಹಿಸಿಕೊಡಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.