ಬೆಂಗಳೂರು: ಮೊಬೈಲ್ಗಳನ್ನು ಕಳವು ಮಾಡಿ ಕೊರಿಯರ್ ಮೂಲಕ ಕೇರಳಕ್ಕೆ ಕಳುಹಿಸಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಚಂದ್ರಾಲೇಔಟ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಭದ್ರಾವತಿ ಮೂಲದ ಶ್ರೀನಿವಾಸ್ ಹಾಗೂ ಕೇರಳ ಮೂಲದ ಶಫೀಕ್ ಬಂಧಿತರು.
ಆರೋಪಿತರಿಂದ 10.50 ಲಕ್ಷ ರೂ. ಮೌಲ್ಯದ 52 ಮೊಬೈಲ್ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಮೊಬೈಲ್ ಗಳನ್ನು ಕಳವು ಮಾಡುತ್ತಿದ್ದ ಆರೋಪಿ ಶ್ರೀನಿ ವಾಸ್ ಸಹಚರರು ತಲೆಮರೆಸಿಕೊಂಡಿದ್ದಾರೆ.
ಶ್ರೀನಿವಾಸ್ ಹಾಗೂ ಆತನ ನಾಲ್ವರು ಸಹಚರರು ಸಭೆ ಸಮಾರಂಭ, ಜಾತ್ರೆ ಹಾಗೂ ಹೆಚ್ಚಿನ ಜನಸಂದಣಿ ಇರುವ ಕಡೆಗಳಲ್ಲಿ ಸಾರ್ವಜನಿಕರ ಮೊಬೈಲ್ಗಳನ್ನು ಕಳವು ಮಾಡಿಕೊಂಡು ಅವುಗಳನ್ನು ಕೊರಿಯರ್ ಮೂಲಕ ಕೇರಳದ ಶಫೀಕ್ ಗೆ ತಲುಪಿಸುತ್ತಿದ್ದರು.
ಇತ್ತೀಚೆಗೆ ಆರೋಪಿಗಳು ಕೇರಳದ ವಿಳಾಸಕ್ಕೆ ಕಳುಹಿಸಿದ್ದ ಕೊರಿಯರ್ ಬಾಕ್ಸ್ಗಳನ್ನು ಯಾರೂ ಸ್ವೀಕರಿಸದ ಕಾರಣ ವಾಪಸ್ ಬಂದಿತ್ತು. ಡಿಟಿಡಿಸಿ ಕೊರಿಯರ್ ಶಾಖೆಯ ಮ್ಯಾನೇಜರ್ ಬಾಕ್ಸ್ ಕೊರಿಯರ್ ಮಾಡಿದ್ದ ಆರೋಪಿ ಶ್ರೀನಿವಾಸ್ಗೆ ಹಲವು ಬಾರಿ ಕರೆ ಮಾಡಿದ್ದರೂ ಆತ ಸ್ವೀಕರಿಸಿರಲಿಲ್ಲ. ಬಳಿಕ, ಕೊರಿಯರ್ ಕಂಪನಿ ಸಿಬ್ಬಂದಿ ಬಾಕ್ಸ್ ತೆರೆದು ನೋಡಿದಾಗ ಅದರಲ್ಲಿ 12 ಮೊಬೈಲ್ಗಳು ಇರುವುದು ಕಂಡು ಬಂದಿದೆ. ಬಳಿಕ ಕೊರಿಯರ್ ಕಂಪನಿ ಮ್ಯಾನೇಜರ್ ಈ ಬಗ್ಗೆ ಚಂದ್ರಾಲೇಔಟ್ ಪೊಲೀಸರ ಗಮನಕ್ಕೆ ತಂದು ಈ ಕುರಿತು ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಕೊರಿಯರ್ ಕಳಿಸಿದ್ದ ಆರೋಪಿ ಶ್ರೀನಿವಾಸ್ ನನ್ನು ಭದ್ರಾವತಿಯಲ್ಲಿ ಬಂಧಿಸಿದ್ದರು. ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಬೆಂಗಳೂರಿನಲ್ಲಿ ಕದ್ದ ಮೊಬೈಲ್ ಗಳನ್ನು ಕೊರಿಯರ್ ಮೂಲಕ ಕೇರಳಕ್ಕೆ ಕಳಿಸುತ್ತಿದ್ದ ವಿಚಾರ ತಿಳಿಸಿದ್ದ.
ಆರೋಪಿ ನೀಡಿದ ಮಾಹಿತಿ ಮೇರೆಗೆ ಕೇರಳ ರಾಜ್ಯದ ಕೊಂಡುಪರಂಬಿಲ್ನಲ್ಲಿ ಮೊಬೈಲ್ಗಳನ್ನು ಸ್ವೀಕರಿಸುತ್ತಿದ್ದ ಶಫೀಕ್ ಅಂಗಡಿಗೆ ಪೊಲೀಸರು ತೆರಳಿ ಆತನನ್ನು ವಿಚಾರಣೆ ಮಾಡಿದ್ದರು. ಆರೋಪಿ ಶ್ರೀನಿವಾಸ್ನಿಂದ ಸ್ವೀಕರಿಸಿದ ಮೊಬೈಲ್ಗಳನ್ನು ತನ್ನ ಅಂಗಡಿಯಲ್ಲಿರುವುದಾಗಿ ತಿಳಿಸಿದ್ದ. ಈ ಮಾಹಿತಿ ಆಧರಿಸಿ 30 ಮೊಬೈಲ್ಗಳನ್ನು ಪೊಲೀಸರು ಅಲ್ಲಿ ವಶಕ್ಕೆ ಪಡೆದಿದ್ದಾರೆ.