ಕುಣಿಗಲ್: ಮಾರ್ಕೋನಹಳ್ಳಿ ಜಲಾಶಯದ ಅಚ್ಚುಕಟ್ಟು ಪ್ರದೇಶ ರಾಗಿ ಬೆಳೆಗೆ ಆ.21 ರಿಂದ ಏಳು ದಿನಗಳ ಕಾಲ ನೀರು ಹರಿಸಲು ಗುರುವಾರ ಶಾಸಕ ಡಾ.ಎಚ್.ಡಿ ರಂಗನಾಥ್, ಉಪವಿಭಾಗಾಧಿಕಾರಿ ಅಜಯ್ ನೇತೃತ್ವದಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಶಾಸಕ ಡಾ.ಎಚ್.ಡಿ.ರಂಗನಾಥ್ ಮಾತನಾಡಿ, ಅಮೃತೂರು ಹೋಬಳಿ ವ್ಯಾಪ್ತಿಯಲ್ಲಿ ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ ಅಂರ್ತಜಲ ಮಟ್ಟ ಕುಸಿದು ಜನ ಜಾನುವಾರಗಳ ಕುಡಿಯುವ ನೀರಿನ ಸಮಸ್ಯೆ ತಲೆ ದೂರಿದೆ. ಅಲ್ಲದೆ ಕೃಷಿಗೆ ನೀರಿಲ್ಲದೆ ರೈತರು ಕಂಗಾಲಾಗಿದ್ದಾರೆ. ಈ ಎರಡು ಸಮಸ್ಯೆಗಳನ್ನು ಬಗೆ ಹರಿಸುವುದು, ಸಮಿತಿಯ ಕರ್ತವ್ಯವಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.
84.95 ಅಡಿ ನೀರು: ಯಡಿಯೂರು ಹೇಮಾವತಿ ನಾಲಾ ವಲಯದ ಎಇಇ ಉಮಾಮಹೇಶ್ ಮಾತ ನಾಡಿ, ಮಾರ್ಕೋನಹಳ್ಳಿ ಜಲಾಶಯದ ಪೂರ್ಣ ನೀರಿನ ಮಟ್ಟ 88.50 ಅಡಿ ಆದರೆ ಪ್ರಸ್ತುತ ಜಲಾಶಯದಲ್ಲಿ 84.95 ಅಡಿ ನೀರಿದೆ. ಮಾರ್ಕೋನಹಳ್ಳಿ ಎಡದಂಡೆ ನಾಲೆ 28.80 ಕಿ.ಮೀ ಯಲ್ಲಿ 247.33 ಕ್ಯೂಸೆಕ್ ನೀರು ಹರಿಯುತ್ತದೆ ಹಾಗೂ ಬಲ ದಂಡೆ 12.80 ಕಿ.ಮೀ ಇದೆ 38.86 ಕ್ಯೂಸೆಕ್ ನೀರು ಹರಿಯುತ್ತದೆ, ಯೋಜನೆ ಪ್ರಕಾರ ಮುಂಗಾರಿನಲ್ಲಿ ಬೆಳೆಯ ಬೇಕಾಗಿರುವ ಬೆಳೆಗೆ ಅವಶ್ಯವಿರುವ ನೀರಿನ ಪ್ರಮಾಣ 5469 ಹೆಕ್ಟೇರ್ ಭತ್ತದ ಬೆಳೆಗೆ 3471.55 ಎಂ.ಸಿ.ಎಫ್.ಟಿ ನೀರು, 196 ಹೆಕ್ಟೇರ್ ಕಬ್ಬು ಬೆಳೆಗೆ 124.41 ಎಂ.ಸಿ.ಎಫ್.ಟಿ ನೀರು, 37 ಹೆಕ್ಟೇರ್ ಪ್ರದೇಶದ ತೋಟಕ್ಕೆ 13.70 ಎಂ.ಸಿ.ಎಫ್.ಟಿ ನೀರು, ರಾಗಿ 180 ಹೆಕ್ಟೇರ್ ಪ್ರದೇಶಕ್ಕೆ 41.79 ಎಂ.ಸಿ.ಎಫ್.ಟಿ ನೀರು ಹಾಗೂ 60 ಹೆಕ್ಟೇರ್ ಪ್ರದೇಶದಲ್ಲಿ ಇತರೆ ಧಾನ್ಯ ಬೆಳೆ ಬೆಳೆಯಲು 13.93 ಎಂ.ಸಿ.ಎಫ್.ಟಿ ನೀರು ಅಗತ್ಯವಾಗಿದೆ. ಒಟ್ಟು 5942 ಹೆಕ್ಟೇರ್ ಪ್ರದೇಶದ ಜಮೀನಿಗೆ 3665.38 ಎಂ.ಸಿ.ಎಫ್.ಟಿ ನೀರು ಅಗತ್ಯವಾಗಿದೆ ಎಂದರು. ಪಿಎಸ್‌ಐ ಮಂಜು ಮತ್ತಿತರರು ಇದ್ದರು.