ಚನ್ನರಾಯಪಟ್ಟಣ: ಶ್ರೀರಾಮ ದೇವರ ನಾಲೆ ವ್ಯಾಪ್ತಿಯಲ್ಲಿ ಕಬ್ಬು ಬೆಳೆದಿರುವ ಕೃಷಿಕರ ಅನುಕೂಲಕ್ಕಾಗಿ ಮುಂದಿನ ಮೂರು ತಿಂಗಳು 15 ದಿನಕ್ಕೆ ಒಮ್ಮೆ ನೀರು ಬಿಡಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಭರವಸೆ ನೀಡಿದರು.
ತಾಲೂಕಿನ ದಡದಹಳ್ಳಿ ಗ್ರಾಮದಲ್ಲಿ ತಾಲೂಕು ಆಡಳಿತದಿಂದ ನಡೆದ “ಜಿಲ್ಲಾಧಿಕಾರಿ ನಡೆ ಗ್ರಾಮದ ಕಡೆ’ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆ ಪ್ರಾರಂಭವಾಗಿದ್ದು, ಅದಕ್ಕೆ ಕಬ್ಬಿನ ಅವಶ್ಯವಿದೆ. ಇಂತಹ ವೇಳೆಯಲ್ಲಿ ಬೆಳೆಗಾರರಿಗೆ ಅನುಕೂಲವಾಗಲೆಂದು ನೀರಾವರಿ ಇಲಾಖೆ ಅಧಿಕಾರಿ ಜೊತೆ ಮಾತನಾಡಿದ್ದು, ಪ್ರತಿ ಹದಿನೈದು ದಿನಕ್ಕೆ ಒಮ್ಮೆ ನೀರು ಹರಿಸಲು ಮುಂದಾಗುತ್ತೇನೆ ಎಂದು ತಿಳಿಸಿದರು.
ಅರ್ಜಿಗಳ ಇತ್ಯರ್ಥಕ್ಕೆ ಕ್ರಮ: ಕಳೆದ ನಾಲ್ಕು ವರ್ಷದಿಂದ ಆಶ್ರಯ ಮನೆಗಳಿಗೆ ಅನುದಾನ ನೀಡುತ್ತಿಲ್ಲ, ವಸತಿ ಸಚಿವ ಸೋಮಣ್ಣ ಆಶ್ರಯ ಮನೆ ಪಟ್ಟಿ ಮಾಡಿ ಕಳುಹಿಸುವಂತೆ ಹೇಳಿದ್ದರು. ಅದನ್ನು ಕಳುಹಿಸಲಾಗಿದೆ. ನೂತನವಾಗಿ ಆಶ್ರಯ ಮನೆ ನಿರ್ಮಾಣಕ್ಕೆ ಸರ್ಕಾರ ಅನುಮೊದನೆ ನೀಡಿಲ್ಲ, ಹಾಗಾಗಿ ಆಶ್ರಯ ಮನೆಗೆಸಂಬಂಧಿಸಿದ ಅರ್ಜಿಗಳಿಗೆ ಅದಷ್ಟು ಬೇಗ ಪರಿಹಾರ ಕೊಡಿಸುತ್ತೇನೆ ಎಂದು ಹೇಳಿದರು.
ವೈಮನಸ್ಸು ಇರಬಾರದು: ಎಂಎಲ್ಸಿ ಗೋಪಾಲಸ್ವಾಮಿ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ನಾವು(ಕಾಂಗ್ರೆಸ್ ಪಕ್ಷದವರು) ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಮಾಡಿದ್ದೇವೆ, ಇಂತಹ ಗ್ರಾಮದಲ್ಲಿ ಯಾರು ಜೆಡಿಎಸ್, ಬಿಜೆಪಿ ಹಾಗೂಕಾಂಗ್ರೆಸ್ ಎಂದು ವ್ಯಾಜ್ಯ ಮಾಡಿಕೊಂಡು ನೆಮ್ಮದಿ ಹಾಳುಮಾಡಿಕೊಳ್ಳುತ್ತೀರ, ರಾಜಕಾರಣಿಗಳು ಗ್ರಾಮಕ್ಕೆ ಒಂದುದಿನ ಬರುತ್ತಾರೆ, ನೀವು ನಿತ್ಯವೂ ಇಲ್ಲೆ ಇರುತ್ತೀರ,ನಿಮ್ಮಗಳ ನಡುವೆ ವೈಮನಸ್ಸು ಇರಬಾರದು ಎಂದು ಸಲಹೆ ನೀಡಿದರು.
67 ಅರ್ಜಿಗಳು ಬಂದಿವೆ: ತಹಶೀಲ್ದಾರ್ ಜೆ.ಬಿ.ಮಾರುತಿ ಮಾತನಾಡಿ, ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ 67 ಅರ್ಜಿಗಳು ಬಂದಿವೆ, ಅವುಗಳಲ್ಲಿ ಚರಂಡಿ ಸಮಸ್ಯೆ ಬಗೆ ಹರಿಸುವಂತೆ ಮನವಿ ಮಾಡಿದ್ದಾರೆ. ಬೀದಿ ದೀಪ ನಿರ್ವಹಣೆ, ಗ್ರಾಮದ ತಿಪ್ಪೆಗುಂಡಿ ಸ್ಥಳಾಂತರ, ಅಂಚೆ ಕಚೇರಿ ಸಿಬ್ಬಂದಿ, ಗ್ರಾಮಕ್ಕೆ ಬರದೆ ಅವರಿರುವ ಜಾಗಕ್ಕೆ ಕರೆಯಿಸಿಕೊಳ್ಳುತ್ತಿರುವುದು, ಗ್ರಾಪಂಅಧಿಕಾರಿಗಳು ಸ್ಥಳಕ್ಕೆ ಬಾರದೆ ಗ್ರಾಮದ ಯೋಜನೆ ಬಗ್ಗೆ ಕ್ರಿಯಾ ಯೋಜನೆ ರೂಪಿಸುತ್ತಿರುವ ಬಗ್ಗೆ ದೂರು ಬಂದಿವೆ. ಅವುಗಳಲ್ಲಿ ಆದಷ್ಟು ಸ್ಥಳದಲ್ಲಿ ಬಗೆಹರಿಸಲಾಗಿದೆ ಎಂದು ಹೇಳಿದರು.
ಇಲಾಖಾವಾರು ಅರ್ಜಿ: ಗಂಗಾಕಲ್ಯಾಣ ಕೊಳವೆಬಾವಿ ಕೊರೆಯಿಸುವುದು, ಅರಣ್ಯ ಇಲಾಖೆಗೆ ಒಂದು ಅರ್ಜಿ, ಸೆಸ್ಕ್ನಿಂದ ಎರಡು ಅರ್ಜಿ, ಸರ್ವೆ ಇಲಾಖೆ ಆರು ಅರ್ಜಿ,ಕೃಷಿ ಇಲಾಖೆಯಿಂದ ಐದು ಅರ್ಜಿ, ಕಂದಾಯಇಲಾಖೆಗೆ ಆರು ಅರ್ಜಿ ಬಂದಿವೆ. ಕೃಷಿ ಇಲಾಖೆ ಐದು ಬಂದಿವೆ, ಕಂದಾಯ ಇಲಾಖೆ ಅರ್ಜಿಗಳನ್ನು ಸ್ಥಳದಲ್ಲಿ ಪರಿಹರಿಸಲಾಗಿದೆ. ಅರಣ್ಯ ಹಾಗೂ ನೀರಾವರಿ ಇಲಾಖೆಗೆ ಸಂಬಂಧಿಸಿದ ಅರ್ಜಿಗಳಿಗೆ ಸಮಯ ಪಡೆದಿದ್ದು, ಆದಷ್ಟು ಬೇಗ ಬಗೆಹರಿಸಲಾಗುವುದು ಎಂದು ಹೇಳಿದರು.
ಜಿಪಂ ಸದಸ್ಯ ಪುಟ್ಟಸ್ವಾಮಿ, ನಲ್ಲೂರು ಗ್ರಾಪಂ ಅಧ್ಯಕ್ಷ ಗಿಡ್ಡಮ್ಮ, ಸದಸ್ಯ ಮಣಿಕಂಠ, ವಿವಿಧ ಸರ್ಕಾರಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.