ಕಲಬುರಗಿ: ಜೇವರ್ಗಿ ತಾಲೂಕಿನ ಇಟಗಾ ಮತ್ತು ಅಫ್ಜಲ್ ಪುರ್ ತಾಲೂಕಿನ ಗಾಣಗಾಪುರ ಮಧ್ಯೆ ಇರುವ ಸೇತುವೆ ಮೇಲಿಂದ ಕಬ್ಬು ತುಂಬಿಕೊಂಡಿದ್ದ ಲಾರಿಯೊಂದು ಭೀಮಾ ನದಿಗೆ ಬಿದ್ದಿರುವ ಘಟನೆ ಮಂಗಳವಾರ ನಸುಕಿನ ಜಾವದಲ್ಲಿ ನಡೆದಿದೆ.
ಕಬ್ಬು ತುಂಬಿದ ಲಾರಿ ಒಂದು ಜೇವರ್ಗಿ ತಾಲೂಕಿನಿಂದ ಅಫ್ಜಲ್ಪುರ್ ತಾಲೂಕಿನ ಚೌಡಾಪುರದ ಬಳಿ ಇರುವ ಸಕ್ಕರೆ ಕಾರ್ಖಾನೆಗೆ ಹೊರಟಿತ್ತು.
ಸೇತುವೆಯ ಮೇಲಿಂದ ಲಾರಿ ಭೀಮಾ ನದಿಗೆ ಬಿದ್ದಿದ್ದು ಲಾರಿ ಚಾಲಕ ನಾಪತ್ತೆಯಾಗಿದ್ದಾನೆ.
ಲಾರಿ ಮೇಲೆ ಬಿದ್ದಿರುವುದರಿಂದ ನೀರಿನಲ್ಲಿ ಚಾಲಕ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಘಟನಾ ಸ್ಥಳಕ್ಕೆ ಸಿಪಿಐ ಚನ್ನಯ್ಯ ಹಿರೇಮರ್, ಪಿಎಸ್‌ಐ ರಾಹುಲ್ ಪಾವಡೆ, ಪೊಲೀಸ್ ಸಿಬ್ಬಂದಿ ಸಂಗಣ್ಣ ಸೇರಿದಂತೆ ಅಗ್ನಿ ಶಾಮಕ ದಳದವರು ಆಗಮಿಸಿದ್ದು, ಲಾರಿ ಎತ್ತುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.
ಗಾಣಗಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.