ದೇವನಹಳ್ಳಿ: ಜೀವಜಲ ಮೂಲವನ್ನು ತಲತಲಾಂತರಗಳಿಂದ ನಮ್ಮ ಪೂರ್ವಜರು ರಕ್ಷಿಸಿಕೊಂಡು ಬರುತ್ತಿದ್ದರು. ಇದೀಗ ಜಲ ಮೂಲ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು. ತಾಲೂಕಿನ ಕನ್ನಮಂಗಲ ಕರೆಯಂಗಳದಲ್ಲಿ ಸ್ಥಳೀಯರ ಸಮ್ಮುಖದಲ್ಲಿ ನಡೆಯುತ್ತಿರುವ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದರು.
ನೀರು ಉಳಿಸಿ: ಮನುಷ್ಯ ನೀರಿಗಾಗಿ ಏನು ಬೇಕಾದರೂ ಕೊಟ್ಟುಬಿಡುತ್ತಾನೆ. ನೀರೇ ಸರ್ವಸ್ವ, ನೀರಿಲ್ಲವೆಂದರೆ ನಾವೇ ಇರಲ್ಲ. ಪ್ರಪಂಚದಲ್ಲಿನ ಸಕಲ ಚರಾಚರಗಳೂ ಇರಲ್ಲ. ನೀರಿಗಾಗಿ ಹಾಹಾಕಾರ ಹೆಚ್ಚುತ್ತಿದೆ. ಪರಿಸರ ಸಮತೋಲನ ಕಾಯ್ದುಕೊಳ್ಳಬೇಕಾದರೆ ನೀರಿನ ಅಂಶ ಇರಬೇಕು. ನೀರಿನ ಸಮಸ್ಯೆಗೆ ಸರ್ಕಾರವನ್ನು ಅವಲಂಬಿತರಾಗುವುದು ಎಷ್ಟರ ಮಟ್ಟಿಗೆ ಸರಿಯೆನಿಸುತ್ತದೆ. ನಾವೇ ನೀರನ್ನು ಉಳಿಸಿಕೊಂಡು ಹೋದಲ್ಲಿ ಮುಂದೊಂದು ದಿನ ನಮ್ಮ ಪೀಳಿಗೆಗೆ ಕೊಡುಗೆಯಾಗುತ್ತದೆ ಎಂದು ಹೇಳಿದರು.
ಜಲ ಕ್ರಾಂತಿಯೇ ಆಗಲಿ: ನಾವು, ನಮ್ಮ ಕೆರೆ, ಬಾವಿ, ಕುಂಟೆ, ಗೋಕಟ್ಟೆಯನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಸ್ಥಳೀಯರು ಮನಸ್ಸು ಮಾಡಿ ಮುಂದೆ ಬರಬೇಕು. ಒಂದು ಗ್ರಾಮದ ಅಭಿವೃದ್ಧಿ ಆ ಗ್ರಾಮದಲ್ಲಿ ವಾಸಿಸುವ ಜನರ ಕರ್ತವ್ಯ ಪ್ರಜ್ಞೆಯಲ್ಲಿರುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಸಿ.ಎಸ್.ಕರೀಗೌಡ ಅವರು ಈ ಭಾಗಕ್ಕೆ ಜಿಲ್ಲಾಧಿಕಾರಿಯಾಗಿ ಉತ್ತಮ ಸಹಕಾರ ನೀಡುವುದರ ಜೊತೆಗೆ ಜನರ ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಗೆ ಸೀಮಿತವಾಗದೇ ಇಡೀ ರಾಜ್ಯ ಮಟ್ಟದಲ್ಲಿ ಈ ಕಾರ್ಯ ನಡೆದರೆ ಜಲ ಕ್ರಾಂತಿಯೇ ಆಗಲಿದೆ ಎಂದರು.
ಜಿಲ್ಲಾಧಿಕಾರಿಗೆ ಅಭಿನಂದನೆ: ಕೆರೆ ಅಭಿವೃದ್ಧಿಪಡಿಸಿರುವುದನ್ನು ಕಂಡು ಸಂತಸದಿಂದ ಇದೇ ಮಾದರಿಯಲ್ಲಿ ತುಮಕೂರು ಜಿಲ್ಲೆಯಲ್ಲಿ ಆರಂಭಿಸುವ ಚಿಂತನೆ ಯಾಕೆ ಮಾಡಬಾರದು ಎಂದು ಅನಿಸುತ್ತದೆ. ನೋಡೋಣ ದೈವ ಪ್ರೇರಣೆ ಎಂದು ಜಿಲ್ಲಾಧಿಕಾರಿಗಳಿಗೆ ಸ್ಥಳದಲ್ಲಿಯೇ ಅಭಿನಂದಿಸಿದರು.
16 ಕೆರೆಗಳ ಕಾಮಗಾರಿ ಪೂರ್ಣ: ಜಿಲ್ಲಾಧಿಕಾರಿ ಕರೀಗೌಡ ಮಾತನಾಡಿ, ಗ್ರಾಮೀಣ ಪ್ರದೇಶದ ಜನರು ನೀರಿಗಾಗಿ ತತ್ತರಿಸುತ್ತಿದ್ದಾರೆ. ಜಿಲ್ಲೆಯಲ್ಲಿರುವ ತಾಲೂಕುಗಳಲ್ಲಿನ ಸ್ಥಳೀಯರ ಸಹಭಾಗಿತ್ವದಲ್ಲಿ ಸರ್ಕಾರದಿಂದ ನಯಾಪೈಸೆ ಅನುದಾನವಿಲ್ಲದೇ ಕರೆ ಅಭಿವೃದ್ಧಿಪಡಿಸಲಾಗುತ್ತಿದೆ. ಖಾಸಗಿ ಕಂಪನಿಗಳ ಸಾಮಾಜಿಕ ಕಳಕಳಿಯಿಂದ ಜಿಲ್ಲೆಯಲ್ಲಿ 22 ಕೆರೆಗಳನ್ನು ಗುರುತಿಸಿಕೊಂಡು 16 ಕೆರೆಗಳ ಕಾಮಗಾರಿ ಸಂಪೂರ್ಣ ಮುಗಿಸಲಾಗಿದೆ.
ಉಳಿದ ಕರೆಗಳ ಕಾಮಗಾರಿ ಪ್ರಗತಿಯಲ್ಲಿವೆ. ಇನ್ನು ಕೆಲವು ಕೆರೆಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಸ್ಥಳೀಯರು ಉತ್ತಮ ಸಹಕಾರ ನೀಡುತ್ತಿರುವುದು ಸಂತಸ ಹಾಗೂ ಮಾಡುವ ಕಾರ್ಯದಲ್ಲಿ ತೃಪ್ತಿ ತಂದಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ಮಂಜುನಾಥ್, ಗ್ರಾಮ ಪಂಚಾಯಿತಿ ಪಿಡಿಒ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.