Advertisement

ನೀರಿನ ಮರುಬಳಕೆ : ಇವರದ್ದು ಮತ್ತೂಂದು ಮಾರ್ಗ

02:35 PM Apr 01, 2017 | Team Udayavani |

ನೀರು ಉಳಿತಾಯದಲ್ಲಿ ಜನರೇನೂ ಹಿಂದೆ ಬಿದ್ದಿಲ್ಲ. ತಮ್ಮದೇ ಆದ ವಿಶಿಷ್ಟ ವಿಧಾನದ ಮೂಲಕ ಬೇಸಗೆಯನ್ನು ನಿರ್ವಹಿಸುವ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ. ಹಾಗೆ ನೋಡಿದರೆ, ಆಡಳಿತ ವ್ಯವಸ್ಥೆ, ಸ್ಥಳೀಯ ಸಂಸ್ಥೆಗಳೇ ಅಷ್ಟೊಂದು ದಕ್ಷತೆಯನ್ನು ಮೂಡಿಸಿಕೊಂಡಿಲ್ಲ.!

Advertisement

ನೀರಿನ ಉಳಿತಾಯದ ಪ್ರಮುಖ ಭಾಗವೆಂದರೆ ಒಮ್ಮೆ ಬಳಸಿದ ನೀರಿನ ಮರು ಬಳಕೆಗೆ ಉಪಾಯ ಹುಡುಕುವುದು. ಯಾಕೆಂದರೆ ನಿತ್ಯ ಬಳಕೆಯ ಶೇ. 90ರಷ್ಟು ನೀರು ಮರು ಬಳಕೆಗೆ ಸಿಗುವಂಥದ್ದು. ಗ್ರಾಮೀಣ ಪ್ರದೇಶಗಳಲ್ಲಿ ಈ ಪೈಕಿ ಶೇ. 65-70 ರಷ್ಟು ನೀರು ಮರುಬಳಕೆಯಾಗುತ್ತಿದೆ. ಒಬ್ಬೊಬ್ಬರದು ಒಂದೊಂದು ವಿಧಾನವಿರಬಹುದು. ಆದರೆ, ನಗರ ಪ್ರದೇಶಗಳಂತೆ ಒಳಚರಂಡಿಯಲ್ಲಿ ಹರಿದು ಹೋಗುತ್ತಿಲ್ಲ.

ಕಿನ್ನಿಮೂಲ್ಕಿ ನಿವಾಸಿ ರಾಮಚಂದ್ರ ಆಚಾರ್ಯರ ವಿಧಾನವೇ ಬೇರೆ. ಅವರು ಬಟ್ಟೆ ಒಗೆದ ನೀರನ್ನು ವ್ಯರ್ಥ ಮಾಡುವುದಿಲ್ಲ. ಒಂದೊಂದು ಗಿಡಗಳಿಗೆ ಹಾಕುತ್ತಾರೆ. ಮತ್ತೆ ಬೇರೆ ನೀರನ್ನು -ಶುದ್ಧ ನೀರನ್ನು ಗಿಡಗಳಿಗೆ ಹಾಕುವುದು ಕಡಿಮೆ. 

ಮತ್ತೂಂದು ವಿಶಿಷ್ಟವಾದ ಸಂಗತಿಯೆಂದರೆ, ದಿನವೂ ಒಂದೊಂದು ತೆಂಗಿನ ಮರದ ಬುಡದಲ್ಲಿ ಪಾತ್ರೆಯನ್ನು ತಿಕ್ಕುತ್ತಾರೆ. ಇದರಿಂದ ಪಾತ್ರೆ ತೊಳೆದ ನೀರೆಲ್ಲ ಆ ಮರದ ಬುಡಕ್ಕೆ ಬೀಳುತ್ತದೆ. ತಮ್ಮ ಮನೆಯ ಸುತ್ತಲಿರುವ ತೆಂಗಿನ ಮರಗಳಿಗೆ ಬೇಸಗೆಯಲ್ಲಿ ಪಾತ್ರೆ ತಿಕ್ಕಿದ ನೀರಿನದೇ ಆಶ್ರಯ. ಉಳಿದಂತೆ ನೆಲ ಒರೆಸಿ ಶುಚಿಗೊಳಿಸಿದ ಬಕೆಟ್‌ ನೀರನ್ನೂ ಅವರು ಹೂಗಿಡಗಳಿಗೆ ಹಾಕುತ್ತಾರೆ. ಗಿಡಮರಗಳಿಗೆ ಕೊಡುವ ಉತ್ತಮ ಗುಣಮಟ್ಟದ ನೀರಿನ ಪ್ರಮಾಣವನ್ನು ಮನುಷ್ಯರು ಬಳಸಬಹುದು ಎಂಬುದು ಅವರ ಲೆಕ್ಕಾಚಾರ.

ಬೇಸಗೆಯಲ್ಲಿ ಇಷ್ಟು ನಾಜೂಕಾಗಿ ವ್ಯವಹರಿಸದೆ ಹೋದರೆ ಒಂದೋ ಗಿಡ ಸಾಯುತ್ತದೆ, ಇಲ್ಲವಾದರೆ ಅದಕ್ಕೂ ಇಷ್ಟೇ ಪ್ರಮಾಣದ ಒಳ್ಳೆಯ ನೀರು ಕೊಡಬೇಕು. ಮನುಷ್ಯರಿಗೇ ಒಳ್ಳೆಯ ನೀರು ಕುಡಿಯುವುದಕ್ಕೆ ಸಿಗದಿರುವಾಗ ಗಿಡಗಳಿಗೆ ಎಲ್ಲಿಂದ ತರುವುದು? ಎಂದು ಪ್ರಶ್ನಿಸುತ್ತಾರೆ ಅವರು.

Advertisement

ರಾಮಚಂದ್ರ ಆಚಾರ್ಯರ ಮನೆಯ ಬಾವಿಗೆ ಪಂಪು ಇದ್ದರೂ ಅದನ್ನು ಬೇಸಗೆಯಲ್ಲಿ ಚಾಲೂ ಮಾಡುವುದಿಲ್ಲ. ಪಂಪು ಚಾಲು ಮಾಡಿದರೆ ಒಂದೇ ಬಾರಿ ನೀರು ಖಾಲಿ ಆಗುತ್ತದೆ, ಮತ್ತೆ ಕುಡಿಯುವ ನೀರಿಗೆ ಪರದಾಡಬೇಕು. ಹೀಗಾಗಿ ನಿತ್ಯವೂ ಒಂದಿಷ್ಟು ಕೊಡ ನೀರನ್ನು ಸೇದಿಕೊಳ್ಳುತ್ತಾರೆ. ತೆಂಗಿನ ಮರಗಳಿಗೆ ಅಗತ್ಯವಿದ್ದರೂ ಸ್ವಲ್ಪ ಸೇದಿ ಹಾಕುತ್ತಾರೆ. ಇದರಿಂದ ಮರಗಳಿಗೆ ನೀರುಣಿಸಿದಂತೆಯೂ ಆಗುತ್ತದೆ, ನಮಗೆ ವ್ಯಾಯಾಮವೂ ಆಗುತ್ತದೆ ಎನ್ನುವ ಸಕಾರಾತ್ಮಕ ಚಿಂತನೆ ಅವರದ್ದು.

ನೀರಿನ ಗಣಿತ
ಶುದ್ಧ ನೀರಿನ ಕೊರತೆಯ ಸಮಸ್ಯೆ ಯಾವ ತೆರನಾದ ಆರ್ಥಿಕ ಪರಿಣಾಮವನ್ನು ಹೊಂದಿದೆ ಎಂದರೆ, ಜಗತ್ತಿನಲ್ಲಿ 1. 1 ಬಿಲಿಯನ್‌ ಜನರು ನೀರಿನ ಕೊರತೆ ಎದುರಿಸುತ್ತಿರುವುದು ಒಂದು ಸಂಗತಿ. ಮತ್ತೂಂದೆಂದರೆ, 2.7 ಬಿಲಿಯನ್‌ ಜನರನ್ನು ವರ್ಷದಲ್ಲಿ ಒಂದು ತಿಂಗಳಂತೂ ತೀವ್ರ ನೀರಿನ ಕೊರತೆ ಬಾಧಿಸುತ್ತದೆ. ಇದರೊಂದಿಗೆ ನೈರ್ಮಲ್ಯದ ಕೊರತೆ ಮತ್ತಷ್ಟು ಸಮಸ್ಯೆಯನ್ನು ಸೃಷ್ಟಿಸುತ್ತಿದೆ. ಶುದ್ಧ ಮತ್ತು ಗುಣಮಟ್ಟದ ನೀರಿನ ಕೊರತೆ ಮತ್ತು ನೈರ್ಮಲ್ಯ ಕೊರತೆಯಿಂದ 2.4 ಬಿಲಿಯನ್‌ ಜನರು ಪ್ರತಿ ವರ್ಷ ಕಾಲರಾ, ಟೈಫಾಯಿಡ್‌ ಇತ್ಯಾದಿ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಇವರಲ್ಲಿ 2 ಮಿಲಿಯನ್‌ ಜನರು ಇದೇ ಕಾರಣದಿಂದ ಸಾವಿಗೀಡಾಗುತ್ತಿದ್ದಾರೆ. ಇದರಲ್ಲಿ ಮಕ್ಕಳ ಸಂಖ್ಯೆ ಜಾಸ್ತಿ ಎನ್ನುವುದೇ ಆತಂಕ ತರುವಂಥದ್ದು.

Advertisement

Udayavani is now on Telegram. Click here to join our channel and stay updated with the latest news.

Next