ಕೊಳಂಬೆ: ಮಳೆ ಪ್ರವಾಹ ಬಂದು ಮಂಗಳೂರು ಮುಳುಗಿ ಹೋದರೂ ಗ್ರಾಮಾಂತರ ಭಾಗದ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿಗಾಗಿ ಕಳೆದ 4 ದಿನಗಳಿಂದ ಜನರು ಪರದಾಡುವಂತಾಗಿದೆ. ಇದಕ್ಕೆ ಕಾರಣ ಮಳವೂರು ವೆಂಟೆಡ್ ಡ್ಯಾಮ್ ನಿಂದ ನೀರು ಬಾರದೇ ಇರುವುದು. ಮಹಾನಗರ ಪಾಲಿಕೆಯಪಚ್ಚನಾಡಿಯಲ್ಲಿರುವ ಒಳಚರಂಡಿ ಯೋಜನೆಯ ನೀರು ತುಂಬಿ ತೋಡಿನಲ್ಲಿ ಹರಿದು ಗುರುಪುರ ನದಿಗೆ ಸೇರುವ ಕಾರಣ ಮಳವೂರು ವೆಂಟೆಡ್ ಡ್ಯಾಂನಿಂದ ನೀರು ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಡ್ಯಾಮ್ ನಿಂದ ನೀರು ಸರಬರಾಜಾಗುವ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡಲಾರಂಭಿಸಿದೆ.
60 ಮನೆಗಳಿಗೆ ನೀರಿನ ಸಮಸ್ಯೆ
ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೌಹಾರ್ದನಗರದಲ್ಲಿ ಮೂರು ಕೊಳವೆ ಬಾವಿ ಇದ್ದರೂ ಯಾವುದೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಭಾಗದ ಸುಮಾರು 60 ಮನೆಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಮಳೆ ಬಂದಾಗ ಛಾವಣಿಯಿಂದ ಹರಿಯುವ ನೀರನ್ನು ಸಂಗ್ರಹಿಸಿ ಉಪಯೋಗಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.