Advertisement
ಕೋಡಿ ಭಾಗದ ಕೋಡಿ ಉತ್ತರ, ಕೋಡಿ ದಕ್ಷಿಣ ಹಾಗೂ ಕೋಡಿ ಮಧ್ಯ ಭಾಗದ 3 ವಾರ್ಡ್‌ಗಳಿಗೆ ಪುರಸಭೆಯಿಂದ ಈವರೆಗೆ ಯಾವುದೇ ನೀರಿನ ಸಂಪರ್ಕವಿಲ್ಲ. ಕೆಲವೊಂದು ಮನೆಗಳಲ್ಲಿ ಬಾವಿಗಳಿದ್ದರೂ, ನದಿ, ಸಮುದ್ರ ತೀರದಲ್ಲಿರುವುದರಿಂದ ಉಪ್ಪು ನೀರಿನ ಪ್ರಭಾವದಿಂದಾಗಿ ಬಳಸಲು ಯೋಗ್ಯವಿಲ್ಲದಂತಾಗಿದೆ. ಇದರಿಂದ ಕುಡಿವ ನೀರಿಗೆ ಸುಮಾರು 60-70 ಮನೆಗಳು ತ್ರಾಸ ಪಡೆವಂತಾಗಿದೆ. ಇವರೆಲ್ಲ ಅಕ್ಕಪಕ್ಕದ ಮನೆಗಳಿಗೆ ಎಡತಾಕುವಂತಾಗಿದೆ. ನೀರಿನ ಸಂಪರ್ಕ ಯಾಕಿಲ್ಲ
7-8 ವರ್ಷಗಳ ಹಿಂದೆ ಪುರಸಭೆಯಿಂದ ನೀರಿನ ಸಂಪರ್ಕ ಕಲ್ಪಿಸಲು ಮುಂದಾಗಿದ್ದಾಗ ಚರ್ಚ್ ರೋಡ್ ಮಾರ್ಗವಾಗಿ ನೀರಿನ ಸಂಪರ್ಕ ಕೊಡಿ ಎಂದು ಸ್ಥಳೀಯರು ಕೇಳಿದ್ದರು. ಅದು ಸಾಧ್ಯವಾಗದ್ದರಿಂದ ನೀರಿನ ಸಂಪರ್ಕ ಯೋಜನೆ ಕೈಬಿಡಲಾಗಿತ್ತು. ಈಗ ನೀರಿನ ಸಮಸ್ಯೆ ಜೋರಾಗಿರುವುದರಿಂದ ಪುರಸಭೆ ನೀರು ಪೂರೈಕೆ ಮಾಡಬೇಕೆಂದು ಜನ ಕೇಳುತ್ತಿದ್ದಾರೆ. ಕೋಡಿ ಭಾಗದಲ್ಲಿ 1,500 ಮನೆಗಳಿದ್ದು, 4,500 ರಿಂದ 5 ಸಾವಿರ ಮಂದಿ ಜನಗಳಿದ್ದಾರೆ. ಕೆಲವೊಂದು ಮನೆಗಳಿಗೆ ಬಾವಿಗಳಿವೆ. 3 ಸರಕಾರಿ ಬಾವಿಗಳಿವೆ. ಈ 3 ವಾರ್ಡ್‌ಗಳಲ್ಲಿಯೂ ಯಾವುದೇ ಬೋರ್‌ವೆಲ್‌ಗಳಿಲ್ಲ.
ಉಳಿದಂತೆ ಪುರಸಭೆಯ ಫೆರಿ ರಸ್ತೆ, ಮದ್ದುಗುಡ್ಡೆ, ಈಸ್ಟ್‌ಬ್ಲಾಕ್, ಖಾರ್ವಿಕೇರಿ, ಚಿಕ್ಕನ್‌ಸಾಲ್, ಚರ್ಚ್ ರೋಡ್, ಸೆಂಟ್ರಲ್ ವಾರ್ಡ್‌ಗಳು ಸೇರಿದಂತೆ ಇತರೆ ಎಲ್ಲ ವಾರ್ಡ್‌ಗಳಲ್ಲಿ 24 ಗಂಟೆಗಳ ಕಾಲ ಇಲ್ಲದಿದ್ದರೂ, ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ನೀರು ಪೂರೈಸಲಾಗುತ್ತಿದೆ. ಪುರಸಭೆ 33 ಕೋ.ರೂ. ವೆಚ್ಚದ ಎರಡನೇ ಹಂತದ ನೀರಾವರಿ ಯೋಜನೆ ಜತೆಗೆ ಈ ಬಾರಿ ನೀರಿನ ಪೂರೈಕೆಗಾಗಿ 18.75 ಲಕ್ಷ ರೂ., ದುರಸ್ತಿಗಾಗಿ 20 ಲಕ್ಷ ರೂ., ನಿರ್ವಹಣೆಗಾಗಿ 18 ಲಕ್ಷ ರೂ. ಮೀಸಲಿಡಲಾಗಿದೆ. ಎರಡನೇ ಹಂತದ ಯೋಜನೆ ಸಿದ್ಧ
ಎಡಿಬಿ ನೆರವಿನಿಂದ ಜಲಸಿರಿ ಯೋಜನೆಯಡಿ 33 ಕೋ. ರೂ. ವೆಚ್ಚದಲ್ಲಿ ಪುರಸಭೆಯ ಎರಡನೇ ಹಂತದ ಯೋಜನೆ ಸಿದ್ಧವಾಗಿದ್ದು, ಟೆಂಡರ್ ಕೂಡ ಆಗಿದೆ. ಇದರಿಂದ ಮುಂದಿನ 2046 ವರೆಗೆ ನಿರಂತರ 24 ಗಂಟೆಗಳ ಕಾಲ ನೀರು ಪೂರೈಸಲು ಸಹಾಯವಾಗಲಿದೆ. ಈಗ 1 ಓವರ್ ಹೆಡ್ ಟ್ಯಾಂಕ್ ಇದ್ದು, ಹಳೆಕೋಟೆಯಲ್ಲಿ 5 ಲಕ್ಷ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್, ಕೋಡಿಯಲ್ಲಿ 4 ಲಕ್ಷ ಲೀಟರ್ ಸಾಮರ್ಥ್ಯದ 1 ಓವರ್ ಹೆಡ್ ಟ್ಯಾಂಕ್ ನಿರ್ಮಾಣವಾಗಲಿದೆ. ಇದರಿಂದ ಪುರಸಭೆಗೆ 1.5 ರಿಂದ 2 ದಶಲಕ್ಷ ಲೀಟರ್ ನೀರು ಹೆಚ್ಚುವರಿಯಾಗಿ ಪೂರೈಕೆಯಾಗಲಿದೆ.
Related Articles
ಕುಂದಾಪುರ ಪುರಸಭೆಯಲ್ಲಿ 2011 ರ ಜನಗಣತಿ ಪ್ರಕಾರ 30,444 ಜನರಿದ್ದು, ಈಗ ಇದು ಇನ್ನಷ್ಟು ಹೆಚ್ಚಾಗಿದೆ. 12,500 ಮನೆ, (ಅದರಲ್ಲಿ 8,544 ವಾಸ್ತವ್ಯ) ಕಟ್ಟಡಗಳಿವೆ. 2,925 ನಳ್ಳಿ ನೀರಿನ ಸಂಪರ್ಕಗಳಿವೆ. ದಿನಕ್ಕೆ 4 ದಶಲಕ್ಷ (ಎಂಎಲ್‌ಡಿ) ನೀರು ನಿತ್ಯ ಪೂರೈಕೆಯಾಗುತ್ತಿವೆ. 0.18 ಎಂಎಲ್‌ಡಿ ಕೊರತೆಯಾಗುತ್ತಿದೆ. ವಾರಾಹಿ ನದಿಯ ಉಪ ನದಿ ಜೊಂಬುವಿನಿಂದ ಜಪ್ತಿಯಲ್ಲಿ ನೀರು ಶುದ್ಧೀಕರಣವಾಗಿ ಅಲ್ಲಿಂದ ಪುರಸಭೆಗೆ ನೀರು ಪೂರೈಕೆ ಆಗುತ್ತಿದೆ. ಜಪ್ತಿಯಲ್ಲಿರುವ ಶುದ್ಧೀಕರಣದಲ್ಲಿ 7.6 ದಶಲಕ್ಷ ನೀರು ಸಂಗ್ರಹ ಸಾಮರ್ಥ್ಯವಿದೆ. 6 ಗ್ರಾಮಗಳಿಗೂ ಇಲ್ಲಿಂದ ನೀರನ್ನು ಪೂರೈಸಲಾಗುತ್ತಿದೆ.
Advertisement
ಅಗತ್ಯಕ್ಕೆ ತಕ್ಕಷ್ಟು ನೀರುಪುರಸಭೆಯ ಅಗತ್ಯತೆಗೆ ತಕ್ಕಷ್ಟು ನೀರಿನ ಪೂರೈಕೆ ಆಗುತ್ತಿದೆ. ಕೋಡಿ ಭಾಗದಲ್ಲಿ ಪುರಸಭೆಯಿಂದ ನೀರಿನ ಸಂಪರ್ಕಗಳು ಇಲ್ಲದಿದ್ದರೂ, ಅಗತ್ಯವಿರುವಷ್ಟು ಬಾವಿಗಳಿವೆ. ಅಗತ್ಯವಿದ್ದರೆ ಅದಕ್ಕಾಗಿ ಅನುದಾನ ಮೀಸಲಿಟ್ಟಿದ್ದು, ಬಳಸಲಾಗುವುದು.
– ಕೆ. ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ 6 ತಿಂಗಳಲ್ಲಿ ಪೂರ್ಣ
ಕೋಡಿ ಭಾಗದ ನೀರಿನ ಸಮಸ್ಯೆ ಬಗ್ಗೆ ಪ್ರತಿ ಬಾರಿ ಸಾಮಾನ್ಯ ಸಭೆಗಳಲ್ಲಿಯೂ ಪ್ರಸ್ತಾಪ ಮಾಡುತ್ತಿದ್ದೇನೆ. ಈ ಬಾರಿ 12 ಕೋ. ರೂ. ವೆಚ್ಚದ ಎರಡನೇ ಹಂತದ ನೀರಾವರಿ ಯೋಜನೆ ಪ್ರಾರಂಭವಾಗುತ್ತಿದೆ. ಅದು 6 ತಿಂಗಳಲ್ಲಿ ಪೂರ್ಣಗೊಳ್ಳಲಿದೆ.
– ಪ್ರಭಾಕರ ಕೋಡಿ,
ಪುರಸಭೆಯ ಸದಸ್ಯ ಬೇಸಗೆಯ ಆರಂಭದಲ್ಲಿದ್ದೇವೆ. ಹಲವು ಊರುಗಳಲ್ಲಿ ಕುಡಿಯುವ ನೀರಿನ ಕೊರತೆ ಬಾಧಿಸತೊಡಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತಗಳಿಗೆ ಪರಿಹಾರ ಕ್ರಮ ಕೈಗೊಳ್ಳಲು ಅನುಕೂಲವಾಗಲೆಂಬುದು ಈ ಸರಣಿಯ ಆಶಯ. ಕುಂದಾಪುರ – ಕಾರ್ಕಳ ಗ್ರಾಮೀಣ ಭಾಗದ ಹಲವು ಪ್ರದೇಶಗಳ ಲೇಖನಗಳು ಮೂಡಿಬರಲಿವೆ. ನಿಮ್ಮ ಭಾಗದಲ್ಲೂ ನೀರಿನ ಸಮಸ್ಯೆ ಇದ್ದರೆ ನಮಗೆ ತಿಳಿಸಬಹುದು. ವಾಟ್ಸಪ್ ನಂಬರ್ 91485 94259