Advertisement

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

12:31 AM Jan 08, 2025 | Team Udayavani |

ಉಡುಪಿ: ಮಹಿಳೆಯರು ಸದಾ ತಮಗೆ ಸಿಕ್ಕ ಅವಕಾಶ ಹಾಗೂ ವೇದಿಕೆಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಮುಂದಕ್ಕೆ ಬರಬೇಕು ಎಂದು ಪಡುಬಿದ್ರಿಯ ಪ್ರಜ್‌ ಜೆನೆಕ್ಸ್‌ ಮ್ಯಾನುಫ್ಯಾಕ್ಚರಿಂಗ್‌ ಇಂಡಸ್ಟೀಸ್‌ ಸೀನಿಯರ್‌ ಮ್ಯಾನೇಜರ್‌ ಪ್ರಜ್ವಲಾ ಶೆಟ್ಟಿ ಹೇಳಿದರು.

Advertisement

“ಉದಯವಾಣಿ’ಯು ಬನ್ನಂಜೆ ಜಯಲಕ್ಷ್ಮೀ ಸಿಲ್ಕ್ಸ್ ನ ಸಹಯೋಗದಲ್ಲಿ ಏರ್ಪಡಿಸಿದ್ದ ರೇಷ್ಮೆ ಜತೆ ದೀಪಾವಳಿ-2024ರ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.

ರೇಷ್ಮೆ ಜತೆ ದೀಪಾ ವಳಿಯು ಮಹಿಳೆಯರಿಗೆ ಹಬ್ಬದ ಸಂಭ್ರಮದ ಜತೆಗೆ ತಮ್ಮನ್ನು ತಾವು ವ್ಯಕ್ತಪಡಿಸಿಕೊಳ್ಳಲು ವೇದಿಕೆ ಕಲ್ಪಿಸಿದೆ. ಓದುಗರ ಅಭಿರುಚಿಗೆ ತಕ್ಕಂತೆ ಹಲವು ಕಾರ್ಯಕ್ರಮಗಳನ್ನು “ಉದಯವಾಣಿ’ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.

ಜಯಲಕ್ಷ್ಮೀ ಸಿಲ್ಕ್ಸ್ ನಿರ್ದೇಶಕಿ ಜಯಲಕ್ಷ್ಮೀ ವೀರೇಂದ್ರ ಹೆಗ್ಡೆ ಮಾತನಾಡಿ, ಜನರ ಸಹಕಾರ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ “ಉದಯವಾಣಿ’ ಹಾಗೂ ಜಯಲಕ್ಷ್ಮೀ ಸಿಲ್ಕ್ಸ್ ನಿದರ್ಶನ ಎಂದರು.

ಪ್ರಜ್‌ ಜೆನೆಕ್ಸ್‌ ಮ್ಯಾನುಫ್ಯಾಕ್ಚರಿಂಗ್‌ ಇಂಡಸ್ಟೀಸ್‌ನ ಎಚ್‌.ಆರ್‌. ವಿಭಾಗದ ಡಿಜಿಎಂ ರಘುವೀರ್‌ ಅವರು ಮಾತನಾಡಿ, ಮಹಿಳೆಯನ್ನು ಪೂಜ್ಯ ಭಾವನೆಯಿಂದ ಕಾಣುವ ಜಾಗದಲ್ಲಿ ಸದಾ ಏಳ್ಗೆ, ಗೆಲುವು, ಯಶಸ್ಸು ಇರುತ್ತದೆ. ಮಹಿಳೆ ಎನ್ನುವುದೇ ಶಕ್ತಿ. ಆ ಶಕ್ತಿ ಇನ್ನಷ್ಟು ಅವಕಾಶಗಳೊಂದಿಗೆ ಸಮಾಜದಲ್ಲಿ ಬೆಳಗಬೇಕು ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಉದಯವಾಣಿ ಸಂಪಾದಕ ಅರವಿಂದ ನಾವಡ ಅವರು, ಹಬ್ಬ ನಮ್ಮ ಪರಂಪರೆಯ ಭಾಗ. ಅದರ ಆಚರಣೆ ಮೂಲಕ ಉತ್ಸಾಹ ಹಾಗೂ ಸಂತೋಷವನ್ನು ಹಂಚುವುದರ ಜತೆಗೆ ಮುಂದಿನ ಪೀಳಿಗೆಗೂ ಆ ಪರಂಪರೆಯನ್ನು ದಾಟಿಸುವುದು ನಮ್ಮ ಉದ್ದೇಶ. ಸಣ್ಣ ಸಣ್ಣ ಸಂಗತಿಗಳಲ್ಲಿ ಸಂತೋಷವನ್ನು ಪಡುವ, ಹುಡುಕುವುದನ್ನು ಹೊಸ ಪೀಳಿಗೆಗೆ ಕಲಿಸಬೇಕಿದೆ. ಅದರ ಭಾಗ ಈ ಕಾರ್ಯಕ್ರಮ ಎಂದರು.

ಎಎಂಎನ್‌ಎಲ್‌ ಉಪಾಧ್ಯಕ್ಷ (ಮ್ಯಾಗಜಿನ್‌ ಹೆಡ್‌ ಆ್ಯಂಡ್‌ ಸ್ಪೆಷಲ್‌ ಇನಿಸಿಯೇಟಿವ್‌) ರಾಮಚಂದ್ರ ಮಿಜಾರ್‌ ಅವರು ಪ್ರಸ್ತಾವನೆಗೈದು, ರೇಷ್ಮೆ ಜತೆ ದೀಪಾವಳಿ ಮಹಿಳೆಯರಲ್ಲಿ ಹಬ್ಬದ ಸಂಭ್ರಮವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ನಮ್ಮ ಎಂಡಿ ಸಿಇಒ ವಿನೋದ ಕುಮಾರ್‌ ಅವರ ಮಾರ್ಗದರ್ಶನ ಕಾರಣ ಎಂದರು.

ಮನೋರಮಾ ಭಟ್‌, ಪೆರ್ಡೂರು, ವಿಜಯಾ ಜಿ. ಸುವರ್ಣ ಬಜ್ಪೆ, ಮಹಿಮಾ ಸುರತ್ಕಲ್‌, ಶೋಭಾ ಮೂಡುಬಿದರೆ, ವಿನಿತಾ ಶೆಟ್ಟಿ ಪುತ್ತೂರು, ಶ್ರುತಿ ಜಾಲೂÕರು ಸುಳ್ಯ ಅನುಭವ ಹಂಚಿಕೊಂಡರು. ಉಡುಪಿಯ ಫ್ಯಾಶನ್‌ ತಜ್ಞೆ ಮಲ್ಲಿಕಾ ಉಡುಪ, ಮಂಗಳೂರಿನ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಸಹಕರಿಸಿದ್ದರು.

ಉದಯವಾಣಿಯ ಉಡುಪಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಧಾಕೃಷ್ಣ ಭಟ್‌ ಕೊಡವೂರು ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. “ಉದಯವಾಣಿ’ ಸ್ಥಾನಿಕ ಸಂಪಾದಕ ಕೃಷ್ಣಭಟ್‌ ಅಳದಂಗಡಿ ವಂದಿಸಿದರು. ಹಿರಿಯ ವರದಿಗಾರ ಎಸ್‌.ಜಿ. ನಾಯ್ಕ ನಿರೂಪಿಸಿದರು.

ವಿಜೇತರು
ಪ್ರಥಮ: ತೆಂಕನಿಡಿಯೂರು ಕೆಳಾರ್ಕಳ ಬೆಟ್ಟಿನ ಶಶಿಕಲಾ ಭಟ್‌ ಮತ್ತು ಮನೆಯವರು
ದ್ವಿತೀಯ: ಮಂಗಳೂರಿನ ಅಶೋಕನಗರದ ವಿನಯಾ ಮತ್ತು ಬಳಗ
ತೃತೀಯ: ಕುಂದಾಪುರದ ವಾಣಿಶ್ರೀ ಮತ್ತು ಬಳಗ
ಪ್ರೋತ್ಸಾಹಕರ: 1. ಮಹಿಮಾ ಮತ್ತು ತಂಡ, ಸುರತ್ಕಲ್‌2. ಶೋಭಾ ಮತ್ತು ಬಳಗ, ಮೂಡುಬಿದಿರೆ 3. ಸುಕೇಶಿನಿ ಮತ್ತು ಮನೆಯವರು,ನಿಟ್ಟೂರು, ಉಡುಪಿ 4. ಶ್ವೇತಾ ಮತ್ತು ಮನೆಯವರು, ಮಂಗಳೂರು 5. ತನುಜಾಕ್ಷಿ ಮತ್ತು ಬಳಗ, ಪುತ್ತೂರು 6. ಗಾಯತ್ರಿ ಮತ್ತು ಬಳಗ, ಜಾಲ್ಸೂರು, ಸುಳ್ಯ 7. ವಿದ್ಯಾ ಮತ್ತು ಬಳಗ, ಪೆರ್ಡೂರು 8. ಸೌಮ್ಯ ಮತ್ತು ಕುಟುಂಬ, ಬಜಪೆ 9. ಯುಕ್ತಾ ಮತ್ತು ಬಳಗ, ಕಾಪು 10. ಶಾಂತಾ ಮತ್ತು ಬಳಗ, ಕಂಕನಾಡಿ, ಮಂಗಳೂರು.

ಬಹುಮಾನಿತರ ಅನಿಸಿಕೆ
“ಉದಯವಾಣಿ’ಯ ರೇಷ್ಮೆ ಜತೆ ದೀಪಾವಳಿಗಾಗಿ ಒಂದು ವಾರದಿಂದ ಸಿದ್ಧತೆ ಮಾಡಿಕೊಂಡಿದ್ದೆವು. ಮನೆಯವರೆಲ್ಲ ಸೇರಿ ಸಂಭ್ರಮಿಸಿದ ಖುಷಿಯ ಜತೆಗೆ ಬಹುಮಾನ ನಮ್ಮ ಸಂತಸವನ್ನು ಹೆಚ್ಚಿಸಿದೆ.
-ಶಶಿಕಲಾ ಭಟ್‌ ಮತ್ತು ಗೀತಾ ಭಟ್‌,
ತೆಂಕನಿಡಿಯೂರು

ಇದೊಂದು ವಿಶೇಷ ಅನುಭವ. ಬಹುಮಾನದ ನಿರೀಕ್ಷೆ ಇರಲಿಲ್ಲ. ಆದರೆ ಎಲ್ಲರೂ ಒಟ್ಟಾಗಿ ಸೇರಿ ಸಂಭ್ರಮಿಸಿದ್ದು ಮತ್ತೂ ವಿಶೇಷವಾದುದು.
-ವಿನಯಾ, ಅಶೋಕನಗರ

ನಾವು ಪ್ರತಿ ವರ್ಷವೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಹಬ್ಬದ ಮೆರಗನ್ನು ರೇಷ್ಮೆ ಜತೆ ದೀಪಾವಳಿ ಇನ್ನಷ್ಟು ಹೆಚ್ಚಿದೆ.
-ಅಮೃತಾ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next