ಬೆಂಗಳೂರು: ಗೊರಗುಂಟೆಪಾಳ್ಯದ ಅರವಿಂದ್ ಗಾರ್ಮೆಂಟ್ಸ್ ಬಳಿಯ ಜ್ಯೋತಿ ಬಾಯಿ ಫುಲೆ ನಗರ ಕೊಳೆಗೇರಿಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ನಾಲ್ಕೈದು ತಿಂಗಳಿಂದ ಇಲ್ಲಿನ ನಿವಾಸಿಗಳು ಖಾಲಿ ಕೊಡಗಳನ್ನು ಹಿಡಿದು ಗಲ್ಲಿ ಗಲ್ಲಿ ಅಲೆಯುತ್ತಿದ್ದಾರೆ.
ಈ ಕುರಿತು ಆರೋಪಿಸಿರುವ ಮಲ್ಲೇಶ್ವರದ ಬೆಂಗಳೂರು ಉಳಿಸಿ ಸಮಿತಿ, ಹಲವು ವರ್ಷಗಳಿಂದ ಕೊಳೆಗೇರಿ ನಿವಾಸಿಗಳಿಗೆ ನೀರಿಗೆ ಆಸರೆಯಾಗಿದ್ದ ಕೊಳವೆಬಾವಿ ಭತ್ತಿದೆ. ಹೊಸದಾಗಿ ಕೊರೆಯಿಸಿರುವ ಬೋರ್‌ವೆಲ್‌ಗೆ ಸಂಪರ್ಕ ಒದಗಿಸದೇ ನಿಷ್ಪ್ರಯೋಜಕವಾಗಿದೆ ಎಂದಿದೆ.
ಇನ್ನು ಕುಡಿಯುವ ನೀರಿಗಾಗಿ 150 ಕುಟುಂಬ ಗಳಿರುವ ಈ ಪ್ರದೇಶಕ್ಕೆ ಕೇವಲ 2 ನಲ್ಲಿಗಳು ಇವೆ. ಇದರಲ್ಲಿ ಎರಡು ಅಥವಾ ನಾಲ್ಕು ದಿನಕ್ಕೊಮ್ಮೆ ಒಂದು ಗಂಟೆ ಮಾತ್ರ ನೀರು ಬಿಡಲಾಗುತ್ತಿದೆ. ಇದಕ್ಕಾಗಿ ಇಡಿರಾತ್ರಿ ಕಾಯಬೇಕು.
ಬಿಟ್ಟ ನೀರನ್ನು ಬೆರಳೆಣಿಕೆ ಕುಟುಂಬಗಳು, 3-4 ಕೊಡ ತುಂಬಿಸುವ ಹೊತ್ತಿಗೆ ಹೈರಾಣಾಗಿ ಹೋಗುತ್ತಾರೆ ಎಂದು ದೂರಿದೆ.
ಜಲಮಂಡಳಿಗೆ ಮನವಿ: ಇಲ್ಲಿ ವಾಸವಿರುವ ಬಹುತೇಕ ಮಂದಿ ಗಾರೆ ಕೆಲಸ ಮಾಡುವ, ಗಾರ್ಮೆಂಟ್ಸ್, ಮನೆ ಕೆಲಸ ಮಾಡುವ ಬಡ ಕೂಲಿ ಕಾರ್ಮಿಕರಾಗಿದ್ದಾರೆ. ರಾತ್ರಿಯಿಡೀ ನೀರಿಗಾಗಿ ನಿದ್ದೆ ಇಲ್ಲದೆ ಕಾದು ಕುಳಿತುಕೊಳ್ಳಬೇಕು. ಮತ್ತೆ ಬೆಳಗ್ಗೆ ದುಡಿಯಲು ಹೋಗಬೇಕು.
ಸಾವಿರಾರು ರೂ. ನೀಡಿ ಟ್ಯಾಂಕರ್ ನೀರು ಖರೀದಿಸುವ ಸ್ಥಿತಿವಂತರಲ್ಲ. ಆದ್ದರಿಂದ ಈ ಕೂಡಲೇ ಇಲ್ಲಿನ ನೀರಿನ ಸಮಸ್ಯೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಮಿತಿಯೊಂದಿಗೆ ಇಲ್ಲಿನ ನಾಗರಿಕರು ಜಲಮಂಡಳಿಗೆ ಮನವಿ ಮಾಡಿದ್ದಾರೆ. ಸಿಟ್ಟಿಗೆದ್ದ ನಾಗರಿಕರು ಸ್ಥಳದಲ್ಲಿಯೇ ಕೊಡಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಬೆಂಗಳೂರು ಉಳಿಸಿ ಸಮಿತಿಯು ಆರೋಪಿಸಿದೆ.