Advertisement

Water: 782 ಗ್ರಾಮ, ನಗರದ 1,193 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ: ಕೃಷ್ಣ ಬೈರೇಗೌಡ

11:39 PM Feb 11, 2024 | Pranav MS |

ಬೆಂಗಳೂರು: ಮುಂಬರುವ ದಿನಗಳಲ್ಲಿ ರಾಜ್ಯದ 782 ಗ್ರಾಮ ಹಾಗೂ ನಗರ ಪ್ರದೇಶದ 1,193 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂದು ರಾಜ್ಯ ಸರಕಾರ ಅಂದಾಜಿಸಿದ್ದು, ಈ ಪ್ರದೇಶಗಳಲ್ಲಿ ಸಮಸ್ಯೆ ಕಂಡುಬಂದ 24 ಗಂಟೆಗಳಲ್ಲಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಜ್ಜಾಗುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

Advertisement

ಸೋಮವಾರದಿಂದ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದ್ದು, ಇದರ ಬೆನ್ನಲ್ಲೇ ರವಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯ ಸರಕಾರ ಕೈಗೊಂಡಿರುವ ಬರ ಪರಿಹಾರ ಕಾಮಗಾರಿಗಳ ಕುರಿತು ವಿವರಣೆ ನೀಡಿದರು. ಮುಂಗಾರು ಅವಧಿಯಲ್ಲಿ ಮಳೆ ಕೊರತೆ ಎದುರಿಸಿದ 223 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿದ್ದು, ಈ ತಾಲೂಕುಗಳಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ 431 ಸಭೆಗಳನ್ನು ನಡೆಸಲಾಗಿದೆ. ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾಮಟ್ಟದ ಕಾರ್ಯಪಡೆ ಕೂಡ 236 ಸಭೆಗಳನ್ನು ನಡೆಸಿ ಬರ ಪರಿಸ್ಥಿತಿಯ ಅವಲೋಕನ ಮಾಡಿದೆ.

2,654 ಖಾಸಗಿ ಬೋರ್‌ವೆಲ್‌ ಬಾಡಿಗೆಗೆ ಒಪ್ಪಂದ
ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ 156 ಹಳ್ಳಿಗಳಲ್ಲಿ 182 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಒದಗಿಸಲಾಗುತ್ತಿದೆ. 46 ಗ್ರಾಮಗಳಿಗೆ 60 ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. 2654 ಖಾಸಗಿ ಬೋರ್‌ವೆಲ್‌ಗ‌ಳನ್ನು ಸರಕಾರ ಬಾಡಿಗೆಗೆ ಪಡೆಯುವ ಸಲುವಾಗಿ ಒಪ್ಪಂದ ಮಾಡಿಕೊಂಡಿದೆ. ಟ್ಯಾಂಕರ್‌ಗಳ ವ್ಯವಸ್ಥೆಯನ್ನೂ ಮಾಡಿಕೊಳ್ಳುತ್ತಿದೆ. ನೀರಿನ ಸಮಸ್ಯೆ ನಿರ್ವಹಣೆಗಾಗಿ ಅಗತ್ಯ ಬಿದ್ದರೆ ಹೊಸ ಕೊಳವೆಬಾವಿ ಕೊರೆಯಲು ಕ್ರಮ ವಹಿಸುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಮುಖ್ಯಮಂತ್ರಿಗಳೇ ಸಲಹೆ ನೀಡಿದ್ದಾರೆ ಎಂದರು.

7 ಲಕ್ಷ ಹೆಚ್ಚುವರಿ ಮೇವಿನ ಕಿಟ್‌ ಉಚಿತ ವಿತರಣೆ
ಜಾನುವಾರುಗಳಿಗೆ ಮೇವಿನ ಸಮಸ್ಯೆ ಸೃಷ್ಟಿಯಾಗಬಾರದು ಎಂಬ ಕಾರಣದಿಂದ ಕಳೆದ ನವೆಂಬರ್‌ನಲ್ಲಿ 7 ಲಕ್ಷ ಮೇವಿನ ಕಿಟ್‌ಗಳನ್ನು ರೈತರಿಗೆ ಉಚಿತವಾಗಿ ವಿತರಣೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮತ್ತೆ 7 ಲಕ್ಷ ಕಿಟ್‌ಗಳನ್ನು ಕೊಡಲು ಪಶುಸಂಗೋಪನ ಇಲಾಖೆಗೆ ಅನುದಾನ ಮೀಸಲಿಡಲಾಗಿದೆ. ಬರ ಪರಿಹಾರ ಕಾಮಗಾರಿಗಳಿಗಾಗಿ 2 ಸಾವಿರ ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ ಎಂದರು.

33 ಲಕ್ಷ ರೈತರಿಗೆ 628 ಕೋಟಿ ರೂ.

Advertisement

ಬರಪೀಡಿತ ತಾಲೂಕುಗಳಲ್ಲಿ ಕೋಟ್ಯಂತರ ರೂ. ಮೌಲ್ಯದ ಲಕ್ಷಾಂತರ ಹೆಕ್ಟೇರ್‌ ಬೆಳೆ ನಷ್ಟವಾಗಿದ್ದು, ಸಂಕಷ್ಟದಲ್ಲಿದ್ದ ರೈತರ ನೆರವಿಗೆ ಕೇಂದ್ರ ಸರಕಾರ ಧಾವಿಸುತ್ತದೆ ಎನ್ನುವ ನಿರೀಕ್ಷೆ ಇತ್ತು. ಬರ ಘೋಷಣೆಯಾಗಿ, ಕೇಂದ್ರ ಅಧ್ಯಯನ ತಂಡದ ವರದಿ ಸಲ್ಲಿಕೆಯಾದರೂ ಎನ್‌ಡಿಆರ್‌ಎಫ್ ನಿಧಿಯಿಂದ ಇದುವರೆಗೆ ಹಣ ಬಿಡುಗಡೆಯಾಗಿಲ್ಲ. ಹೀಗಾಗಿ ಮೊದಲ ಹಂತದ ಪರಿಹಾರವಾಗಿ ಬರಬಾಧಿತ ಪ್ರದೇಶದ 33 ಲಕ್ಷ ರೈತರ ಬ್ಯಾಂಕ್‌ ಖಾತೆಗೆ ತಲಾ 2 ಸಾವಿರ ರೂ.ಗಳಂತೆ 628 ಕೋಟಿ ರೂ.ಗಳನ್ನು ಜಮೆ ಮಾಡಲಾಗಿದೆ. ಈ ಪೈಕಿ 1.60 ಲಕ್ಷ ರೈತರಿಗೆ ತಾಂತ್ರಿಕ ಕಾರಣಗಳಿಂದ ಹಣ ತಲುಪಿಲ್ಲ. ಬ್ಯಾಂಕ್‌ ಖಾತೆಯ ಮಾರ್ಪಾಟು ಸೇರಿದಂತೆ ಇನ್ನಿತರ ಸಮಸ್ಯೆ ಪರಿಹರಿಸಿ ಅವರ ಖಾತೆಗಳಿಗೂ ಹಣ ಹಾಕಲು ಕ್ರಮ ವಹಿಸಲಾಗಿದೆ ಎಂದು ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next