Advertisement

ನೀರಿನ ಸಮಸ್ಯೆ ಎದುರಾಗದಿರಲಿ

11:13 AM Jan 29, 2019 | Team Udayavani |

ಸುರಪುರ: ಸಾರ್ವಜನಿಕರಿಗೆ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕುಡಿವ ನೀರಿಗಾಗಿ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿ ಶೋಷಿತರ ಪರ ಹೋರಾಟ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಸೋಮವಾರ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಧರಣಿ, ರಸ್ತೆ ತಡೆ ನಡೆಸಿದರು.

Advertisement

ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ಈಗಾಗಲೇ ಅನೇಕ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಸ್ಕೇರ್‌ಸಿಟಿ ಯೋಜನೆಯಲ್ಲಿ ನೀರು ಸರಬರಾಜು ಮಾಡಲು ಸಾಕಷ್ಟು ಅನುದಾನ ಬಂದಿದೆ. ಆದರೆ ಸಮರ್ಪಕ ನೀರು ಸರಬರಾಜು ಮಾಡುವಲ್ಲಿ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು.

ಅನುದಾನ ದುರುಪಯೋಗವಾಗದಿರಲಿ: ಕಳೆದ ವಾರ ಕುಡಿವ ನೀರಿಗೆ ಅನುದಾನ ಬಿಡುಗಡೆ ಮಾಡಲು ಪ್ರತಿಭಟನೆ ಮೂಲಕ ಮುಖ್ಯಮಂತ್ರಿಗೆ ಮನವಿ ಮಾಡಲಾಗಿತ್ತು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಬರಗಾಲ ಪೀಡಿತ ನಗರಸಭೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಕುಡಿಯುವ ನೀರಿನ ಸಂಬಂಧ 50 ಕೋಟಿ ಅನುದಾನ ಬಿಡುಗಡೆ ಮಾಡಿರುವುದು ಸ್ವಾಗತಾರ್ಹ. ಅನುದಾನ ದುರುಪಯೋಗವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದರು.

ಕ್ರಮ ಕೈಗೊಳ್ಳದ ಅಧಿಕಾರಿಗಳು: ಜೆಡಿಎಸ್‌ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ್‌ ವಜಾಹತ್‌ ಹುಸೇನ್‌ ಮಾತನಾಡಿ, ನಗರಸಭೆ ಕಾರ್ಯವೈಖರಿಗೆ ಜನ ಬೇಸತ್ತಿದ್ದಾರೆ. ಮೂಲ ಸೌಕರ್ಯ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಬೇಸಿಗೆಯಲ್ಲಿ ಕುಡಿವ ನೀರಿನ ಸಮಸ್ಯೆ ಇನ್ನಷ್ಟು ಹೆಚ್ಚಾಗಲಿದ್ದು, ಅಧಿಕಾರಿಗಳು ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿದರು.

ಅಗತ್ಯ ಸಿದ್ಧತೆ ಮಾಡಿಕೊಳ್ಳಿ: ಜೆಡಿಎಸ್‌ ತಾಲೂಕು ಘಟಕ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಭಕ್ರಿ ಮಾತನಾಡಿ, ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಶೆಳ್ಳಗಿ ಸಮೀಪದ ಕೃಷ್ಣಾ ನದಿಗೆ ರಿಂಗ್‌ಬಾಂಡ್‌ಗಳನ್ನು ಹಾಕಿ ನೀರು ತಡೆದು ಶೇಖರಿಸಿಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ನೀರಿನ ಪರಿಸ್ಥಿತಿ ಚಿಂತಾಜನಕವಾಗಲಿದೆ. ಐತಿಹಾಸಿಕ ಬಾವಿಗಳನ್ನು ಹೊಳೆತ್ತಿ ಕಿರು ನೀರು ಸರಬರಾಜು ವ್ಯವಸ್ಥೆ ಮಾಡಬೇಕು. ಅವಶ್ಯವಿದ್ದ ಕಡೆಗಳಲ್ಲಿ ಬೋರ್‌ವೆಲ್‌ ಕೊರೆಸಬೇಕು ಎಂದು ಹೇಳಿದರು.

Advertisement

ಸರ್ಕಾರದಿಂದ ಬಿಡುಗಡೆಯಾದ ಅನುದಾನ ನಿಯಮದಂತೆ ಬಳಕೆ ಮಾಡಬೇಕು. ಕುಡಿವ ನೀರಿನ ಅವಶ್ಯಕತೆಗೆ ತಕ್ಕಂತೆ ಕ್ರಿಯಾ ಯೋಜನೆ ರೂಪಿಸಬೇಕು. ಶಾಸಕರ ಅಧ್ಯಕ್ಷತೆಯ ಟಾಸ್ಕ್ ಫೋರ್ಸ್‌ಗೆ ಸಂಘ-ಸಂಸ್ಥೆಗಳ ಹಿರಿಯರು, ಸಮಾಜ ಚಿಂತಕರನ್ನು ಆಹ್ವಾನಿಸಿ ಸಲಹೆ ಪಡೆಯಬೇಕೆಂಬ ಬೇಡಿಕೆಗಳ ಮನವಿ ಪತ್ರವನ್ನು ತಹಶೀಲ್ದಾರ್‌ ಮೂಲಕ ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು.

ಬಸವರಾಜ ಕವಡಿಮಟ್ಟಿ, ಗೋಪಾಲ ಬಾಗಲಕೋಟೆ, ಕೇಶಣ್ಣ ದೊರೆ, ತಿರುಪತಿ ದೊರೆ, ದೇವಪ್ಪ ದೇವರಮನೆ, ಮಾನಯ್ಯ ದೊರೆ, ಅಂಬಯ್ಯ ವೆಂಕಟಾಪುರ ಇತರರು ಇದ್ದರು.

ಈ ವರ್ಷ ಮುಂಗಾರು-ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಬೇಸಿಗೆ ವೇಳೆ ಕುಡಿಯುವ ನೀರಿನ ಸಮಸ್ಯೆ ತಲೆದೋರಲಿದ್ದು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು.
• ವೆಂಕೋಬ ದೊರೆ, ಶೋಷಿತರ ಪರ ಹೋರಾಟ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next