“ಈ ಕಪಿ ಮಿತಿಮೀರಿ ಮಾತನಾಡುತ್ತಿದೆ. ಕೊಂದುಬಿಡಿ’ ಎಂದು ರಾವಣ ಹೇಳುವುದು ರಾಮಾಯಣದಲ್ಲಿದೆ. “ಹಾಗೆಲ್ಲ ಹೇಳುವುದು ಸರಿಯಲ್ಲ. ಯಾರು ಹೇಳಿಕೊಟ್ಟಿದ್ದಾರೋ ಅದನ್ನು ಹೇಳುತ್ತಿದ್ದಾನೆ. ಈತ ದೂತನ ಕರ್ತವ್ಯ ಮಾಡಿದ್ದಾನೆ. ಹೇಳಿದವನನ್ನು ಹೊಡೆಯಿರಿ. ಈತನಿಗೇಕೆ ಪೆಟ್ಟು? ಹೀಗೆ ಮಾಡಿದರೆ ನಿನ್ನ ಮರ್ಯಾದೆ ಹೋಗುತ್ತದೆ’ ಎಂದು ರಾವಣನಿಗೆ ವಿಭೀಷಣ ಹೇಳುತ್ತಾನೆ. ಸಮಸ್ಯೆಯ ಮೂಲ ಅರಿಯಬೇಕು ಎಂಬ ಸಂದೇಶ ವಿಭೀಷಣನಿಂದ ನಮಗೆ ಸಿಗುತ್ತದೆ. ಆದ್ದರಿಂದ ಕೃಷ್ಣ ಹೇಳುತ್ತಾನೆ ಸಮಸ್ಯೆ ಎಲ್ಲಿಂದ ಬಂತು ಎಂದು. ಕಾಲದಲ್ಲಿ ಎರಡು ಬಗೆ ಸಮಕಾಲ ಮತ್ತು ವಿಷಮಕಾಲ. ಸಮಕಾಲ ಗಡಿಬಿಡಿ ಇಲ್ಲದ ಕಾಲ. ಯುದ್ಧ ಶುರು ಮಾಡುವ ಮೊದಲೇ ಹಿರಿಯರನ್ನು ಕೊಲ್ಲುವುದು ಸರಿಯಲ್ಲ ಎಂದು ಹೇಳಿದ್ದರೆ ಅದನ್ನು ಒಪ್ಪಬಹುದಿತ್ತು. ನಿರ್ಧಾರ ಮಾಡುವ ಕಾಲ ಇದಲ್ಲ. ಈಗ ವಿಷಮಕಾಲ. ಅಜ್ಞಾತವಾಸ ಕಾಲದಲ್ಲಿ ನಪುಂಸಕನಾಗಿದ್ದವ (ವೇಷ ಧರಿಸಿ) ಅರ್ಜುನ. ಈಗ ಅರ್ಜುನನ್ನು ನಪುಂಸಕ (ಕ್ಲೈಬ್ಯ) ಎಂದು ಕೃಷ್ಣ ಟೀಕಿಸುತ್ತಾನೆ. ಇದು ದೈಹಿಕವಾದದ್ದಲ್ಲ. ಮಾನಸಿಕ/ ವೈಚಾರಿಕವಾದ ನಪುಂಸಕತನ. ಕ್ಷತ್ರಿಯರು ಪರಾಕ್ರಮಿಗಳು. ನಪುಂಸಕರಾಗುವುದು ಹೇಗೆ? ವಿಚಾರಗಳಲ್ಲಿಯೂ ಸ್ತ್ರೀತ್ವ, ಪುರುಷತ್ವ ಎಂಬ ಬಗೆ ಇರುತ್ತದೆ. ಯುದ್ಧಕ್ಕೆ ಸಾಮಾನ್ಯವಾಗಿ ಸ್ತ್ರೀಯರು ಸಮ್ಮತಿಸುವುದಿಲ್ಲ. ಪೌರುಷತನದಿಂದ ನಪುಂಸಕತನಕ್ಕೆ ಹೋಗುತ್ತಿದ್ದೀ ಎಂಬ ಎಚ್ಚರವನ್ನು ಕೃಷ್ಣ ಕೊಡುತ್ತಾನೆ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ
– ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ ಗೀತಾ ಮಂದಿರ,
ಉಡುಪಿ ಸಂಪರ್ಕ ಸಂಖ್ಯೆ: 8055338811