Advertisement

ವಾರಕ್ಕೊಮ್ಮೆ ನೀರು ಅದೂ ಒಂದು ಗಂಟೆ ಮಾತ್ರ!

10:35 AM Mar 11, 2018 | |

ಮೂಲ್ಕಿ: ಇಲ್ಲಿನ ನಗರ ಪಂಚಾಯತ್‌ ಮೂಲ್ಕಿಯ ಬಹುತೇಕ ಪ್ರದೇಶಗಳು ನಳ್ಳಿ ನೀರಿನ ವ್ಯವಸ್ಥೆಯನ್ನೇ ಆಶ್ರಯಿಸುತ್ತಿವೆ. ಆ ಮೂಲಕ ತಮ್ಮ ಆವಶ್ಯಕತೆಯನ್ನು ಪೂರೈಸಿಕೊಳ್ಳುತ್ತಿವೆ.

Advertisement

ಎಪ್ರಿಲ್‌ ತಿಂಗಳ ಅನಂತರ ಇಲ್ಲಿಯ ಹೆಚ್ಚಿನ ವಾರ್ಡುಗಳ ಮನೆ ಬಾವಿಗಳಲ್ಲೂ ನೀರಿನ ಒರತೆ ಕಡಿಮೆ ಆಗಿ ನೀರಿನ ಬವಣೆ ಉಂಟಾಗುತ್ತಿರುವುದು ಪ್ರತಿವರ್ಷದ ಸಮಸ್ಯೆಯಾಗಿದೆ. ಮೂಲ್ಕಿ ನಗರ ಪಂಚಾಯತ್‌ನ ಮಾಜಿ ಅಧ್ಯಕ್ಷ ಬಿ.ಎಂ.ಆಸೀಫ್‌ ಅವರು ನಗರ ಪಂಚಾಯತ್‌ನ ಪ್ರತಿನಿಧಿಸುತ್ತಿರುವ ಕೆ.ಎಸ್‌.ರಾವ್‌ ನಗರ ಮೂಲ್ಕಿಯ 15ನೇ ವಾರ್ಡಿ ನಲ್ಲಿ ಸುಮಾರು 350ರಷ್ಟು ಮನೆಗಳಿದ್ದು, 1,500 ಜನರು ವಾಸವಾಗಿದ್ದಾರೆ. ಇಲ್ಲಿ ಬಾವಿ ಇರುವ ಮನೆಗಳ ಸಂಖ್ಯೆ ಬಹಳಷ್ಟು ಕಡಿಮೆ.

ಮೂಲ್ಕಿ ನಗರ ಪಂಚಾಯತ್‌ಗೆ ಮಹಾನಗರ ಪಾಲಿಕೆಯ ನೀರಿನ ಘಟಕ ತುಂಬೆಯಿಂದ ಬರುವ ನೀರು ಕುಳಾಯಿಯ ನೀರು ವಿತರಣಾ ಕೇಂದ್ರದಿಂದ ಸುರತ್ಕಲ್‌,ಮುಕ್ಕಾ ಮತ್ತು ಹಳೆಯಂಗಡಿ ಮಾರ್ಗವಾಗಿ ಬರುವ ಪೈಪ್‌ ಲೈನ್‌ಗಳ ಮೂಲಕ ಬರುವ ನೀರನ್ನು ಈ ವಾರ್ಡ್‌ನ ನಿವಾಸಿಗಳು ಅವಲಂಬಿಸಿದ್ದಾರೆ.

ಪಾಲಿಕೆಯಿಂದ ನೀರು
ಇಲ್ಲಿ ನೀರು ಸರಬರಾಜು ಮಂಗಳೂರು ಮಹಾನಗರ ಪಾಲಿಕೆಯಿಂದ ಪೂರೈಕೆಯಾಗುತ್ತದೆ. ಮೂಲ್ಕಿ ನಗರ ಪಂಚಾಯತ್‌ ನೀರಿನ ಮೊತ್ತವನ್ನು ಭರಿಸಬೇಕಾಗುತ್ತದೆ. ಆದರೆ ನೀರು ಬರುವುದು ಮಾತ್ರ ವಾರಕ್ಕೆ ಒಮ್ಮೆ. ಅದು ಕೂಡ ಒಂದು ಗಂಟೆ ಮಾತ್ರ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ.

ಬೋರ್‌ವೆಲ್‌ಗಿಲ್ಲ ಅನುಮತಿ
ಜನರು ಬೋರ್‌ವೆಲ್‌ಗ‌ಳಲ್ಲಿ ತಾತ್ಕಾಲಿಕ ನೀರು ಪಡೆಯುವ ಹಂಬಲ ಬಯಸಿ ಬೋರ್‌ ಕೊರೆದ ಪರಿಣಾಮ ಬಾವಿಗಳಿಗೆ ಹಾನಿ ಉಂಟಾಗಿ ಬಾವಿಯ ನೀರಿನ ಒರತೆ ಬತ್ತಿ ಹೋಗಿರುವುದರಿಂದ ಬೋರ್‌ ಗೆ ಅನುಮತಿ ಕೊಡುವುದನ್ನು ನ.ಪಂ. ನಿಲ್ಲಿಸಿದೆ. ಮೂಲ್ಕಿಗೆ ಪೂರ್ಣಪ್ರಮಾಣದ ನೀರು ಸರಬರಾಜು ಆಗುವವರೆಗೆ ಒಳಚರಂಡಿ ಯೋಜನೆಯೂ ಕೂಡ ಆಗುವುದು ಸಾಧ್ಯವಾಗದು ಎಂಬ ಸತ್ಯವನ್ನು ಈಗಾಗಲೇ ಒಳಚರಂಡಿ ಮಂಡಳಿಯ ಅಧಿಕಾರಿಗಳ ವರದಿ ತಿಳಿಸಿದೆ.

Advertisement

ಕೆರೆಗಳ ಅಭಿವೃದ್ಧಿಯಾಗಬೇಕಿದೆ
ಮೂಲ್ಕಿಯಲ್ಲಿ ಹಲವು ಕೆರೆಗಳಿವೆ. ಅವುಗಳನ್ನು ಗುರುತಿಸಿಕೊಂಡು ನೀರಿನ ಒರತೆಗೆ ಪೂರಕವಾಗಿ ಬಳಸಿಕೊಳ್ಳುವ ಯೋಜನೆಗೆ ಸ್ಥಳೀಯಾಡಳಿತ ಮುಂದಾದರೆ ಇಲ್ಲಿ ನೀರಿನ ಸಮಸ್ಯೆ ಬಹುತೇಕ ನಿವಾರಣೆಯಾಗಲಿದೆ. ಈಗಾಗಲೇ ಶಾಸಕ ಕೆ.ಅಭಯಚಂದ್ರ ಅವರು ಕಾರ್ನಾಡು ಗ್ರಾಮದ ಮಡಿವಾಳ ಕೆರೆಯನ್ನು ಅಭಿವೃದ್ಧಿಗೊಳಿಸುವಲ್ಲಿ ಸರಕಾರದಿಂದ ಕೋಟಿ ರೂ. ಅನುದಾನ ದೊರಕಿಸಿ ಕಾಮಗಾರಿಗೆ ಚಾಲನೆ ಕೊಟ್ಟಿರುವುದು ಆ ಪ್ರದೇಶದ ಕೆಲವು ಬಾವಿಗಳಲ್ಲಿ ನೀರಿನ ಒರತೆ ಹೆಚ್ಚಿಸುವಲ್ಲಿ ಪೂರಕವಾಗಲಿದೆ

ವೆಂಟೆಡ್‌ ಡ್ಯಾಮ್‌ ಅಗತ್ಯ
ಮೂಲ್ಕಿಗೆ ಶಾಶ್ವತವಾಗಿ ನೀರು ನಿರಾತಂಕವಾಗಿ ಪಡೆಯಲು ಈಗಾಗಲೇ ಆರಂಭಗೊಂಡಿರುವ 15 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಯೋಜನೆಯ ಮೂಲಕ ಸಾಧ್ಯ ಎಂದು ಹೇಳಲಾಗುತ್ತಿದೆ. ಈ ಊರಿನ ಸುತ್ತಲಿನ ಪ್ರದೇಶದಲ್ಲಿರುವ ವಿವಿಧ ನದಿಗಳಿಗೆ ವೆಂಟೆಡ್‌ ಡ್ಯಾಮ್‌ ರಚಿಸಿ ಬಾವಿಗಳಲ್ಲಿ ನೀರಿನ ಒರತೆ ಹೆಚ್ಚಿಸುವುದು ಹಾಗೂ ಬಹುಗ್ರಾಮ ಮಾದರಿಯ ನೀರಿನ ವ್ಯವಸ್ಥೆಯಾದರೆ ಉಪಯೋಗಕ್ಕೆ ಬೇಕಾದ ನೀರು ಸಿಗಬಹುದು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ಟ್ಯಾಂಕರ್‌ ಮೂಲಕ ಸರಬರಾಜು
ಈ ಎಲ್ಲ ಸಮಸ್ಯೆಗಳ ಜಂಜಾಟವೇ ಬೇಡವೆಂದು ಪರ್ಯಾಯ ಮುಲ್ಕಿ ನಗರಪಂಚಾಯತ್‌ ಮನೆ, ಮನೆಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿದೆ. ಈ ಪ್ರಕ್ರಿಯೆ ಸುಮಾರು ವರ್ಷಗಳಿಂದ ನಡೆಯುತ್ತಿದೆ. ಟ್ಯಾಂಕರ್‌ಗಳ ಮೂಲಕ ತಂದ ನೀರನ್ನು ಟ್ಯಾಂಕಿಗೆ ಸುರಿದು ಪಂಪ್‌ ಮಾಡಿ ನಳ್ಳಿಗಳ ಮೂಲಕ ವಿತರಣೆ ಮಾಡಲಾಗುತ್ತದೆ. ಈ ಬಾರಿ ಆ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಟೆಂಡರ್‌ ಪ್ರಕ್ರಿಯೆ ಆರಂಭವಾಗಿದೆಯಷ್ಟೇ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ನಿವಾರಣೆಗೆ ಕ್ರಮ
ಕಾರ್ನಾಡು ಸದಾಶಿವರಾವ್‌ ವ್ಯಾಪ್ತಿಯ ನೀರಿನ ಸಮಸ್ಯೆ ನಿವಾರಣೆಗೆ ಮೂಲ್ಕಿ ನಗರ ಪಂಚಾಯತ್‌ ಪ್ರಥಮ ಆದ್ಯತೆ ನೀಡಿ ಶ್ರಮಿಸುತ್ತಿದೆ. ಸರಕಾರದ 15 ಕೋಟಿ ರೂ. ವೆಚ್ಚದ ನೀರಿನ ಯೋಜನೆಯಿಂದ ಮೂಲ್ಕಿಯ ಎಲ್ಲ ಪ್ರದೇಶದ ನೀರಿನ ಸಮಸ್ಯೆಗೆ ಉತ್ತರ ಸಿಗಬಹುದೆಂಬ ನಿರೀಕ್ಷೆ ನಮ್ಮೆಲ್ಲರದ್ದಾಗಿದೆ. ತಾತ್ಕಾಲಿಕವಾಗಿ ನೀರು ಒದಗಿಸುವಲ್ಲಿ ಟ್ಯಾಂಕರ್‌ ಮೂಲಕ ಸರಬರಾಜು ಮಾಡುವ ಟೆಂಡರು ಪ್ರಕ್ರಿಯೆ ಮುಗಿಸಿ ಮುಂದಿನ ತಿಂಗಳಿನಿಂದ ಕಾರ್ಯಾರಂಭವಾಗಬೇಕಾಗಿದೆ.
ಸುನೀಲ್‌ ಆಳ್ವ, ಅಧ್ಯಕ್ಷರು
   ನ.ಪಂ. ಮೂಲ್ಕಿ

ಸರ್ವೋತ್ತಮ ಅಂಚನ್‌

Advertisement

Udayavani is now on Telegram. Click here to join our channel and stay updated with the latest news.

Next