Advertisement
ನಗರದಲ್ಲಿರುವ 4 ತ್ಯಾಜ್ಯ ನೀರು ಸಂಸ್ಕರಣ ಘಟಕಗಳ ಪೈಕಿ ಕಾವೂರು ಹಾಗೂ ಪಚ್ಚನಾಡಿ ಘಟಕದ ಭಾಗಶಃ ನೀರನ್ನು ಮರು ಬಳಕೆ ಮಾಡಲಾಗುತ್ತಿದ್ದು, ಉಳಿದ ನೀರು ಶುದ್ಧೀಕರಣವಾಗಿ ನದಿ ಸೇರುತ್ತಿದೆ. ಇದನ್ನು ಪೂರ್ಣವಾಗಿ ಮರುಬಳಕೆ ಮಾಡುವುದು ಈಗಿನ ಯೋಚನೆ. ಜತೆಗೆ, ಸುರತ್ಕಲ್, ಜಪ್ಪಿನಮೊಗರು ಘಟಕದ ನೀರನ್ನೂ ಶುದ್ಧಗೊಳಿಸಿ ಬಳಸುವುದು ಚಿಂತನೆ.
Related Articles
Advertisement
ಸುರತ್ಕಲ್, ಜಪ್ಪಿನಮೊಗರಿಗೆ ಯೋಜನೆ16 ಎಂಎಲ್‌ಡಿ ಸಾಮರ್ಥ್ಯದ ಸುರತ್ಕಲ್ ಎಸ್‌ಟಿಪಿ ಹಾಗೂ 20 ಎಂಎಲ್‌ಡಿಯ ಜಪ್ಪಿನಮೊಗರು ಎಸ್‌ಟಿಪಿ ನೀರಿನ ಮರು ಬಳಕೆ ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಇಲ್ಲಿಂದ ಕಾವೂರಿಗೆ ಪೈಪ್‌ಲೈನ್ ಹಾಕಿ ಶುದ್ದೀಕರಿಸಿದ ನೀರನ್ನು ಮರು ಬಳಕೆಗೆ ಲಭ್ಯವಾಗುವಂತೆ ಮಾಡುವ ಬಗ್ಗೆ ಪಾಲಿಕೆ ಮನಸ್ಸು ಮಾಡಿತಾದರೂ ಫಲಪ್ರದವಾಗಿಲ್ಲ. ಪೈಪ್‌ಲೈನ್ ವೆಚ್ಚ ನಿಭಾಯಿಸುವುದೇ ಪಾಲಿಕೆಗೆ ಹೊರೆಯಾಗಿ ಯೋಜನೆ ಬಾಕಿಯಾಗಿದೆ. ಮಂಗಳೂರಿನಲ್ಲಿ ಬೇಸಗೆ ಬಂದಾಗ ಕುಡಿಯುವ ನೀರಿನ ಸಮಸ್ಯೆ ದೊಡ್ಡ ಮಟ್ಟದಲ್ಲಿ ಕಾಡುತ್ತದೆ. ಒಂದು ವೇಳೆ ಕೊಳಚೆ ನೀರು ಶದ್ಧೀಕರಣಕ್ಕೆ ಒತ್ತು ನೀಡಿ ಕುಡಿಯಲು ಹೊರತುಪಡಿಸಿದ ಕಾರ್ಯಕ್ಕೆ ಈ ನೀರು ಬಳಕೆ ಮಾಡಿದರೆ ಶೇ.30ರಷ್ಟು ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಲಿದೆ. ಆದರೆ ಇದಕ್ಕೆ ಬಳಕೆ ಮಾಡುವ ಯಂತ್ರಗಳು, ನೀರಿನ ಶುದ್ಧತೆ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕಾಗಿದೆ. ಪ್ರಾರಂಭಿಕವಾಗಿ ಸಣ್ಣ ಮಟ್ಟದಲ್ಲಿ ಆರಂಭಿಸಿ ಇದು ಯಶಸ್ವಿಯಾದಾಗ ದೊಡ್ಡ ಮಟ್ಟಕ್ಕೆ ವಿಸ್ತರಣೆ ಮಾಡಲು ಸುಲಭವಾಗಲಿದೆ ಎಂಬುದು ಸದ್ಯದ ಲೆಕ್ಕಾಚಾರ. ಕೈಗಾರಿಕೆಗಳ ಬಳಕೆಗೆ ನೀರು ಅಗತ್ಯ
ಕೈಗಾರಿಕೆ, ಕಟ್ಟಡ ನಿರ್ಮಾಣ, ಪಾರ್ಕ್, ಉದ್ಯಾನವನ ಸಹಿತ ವಿವಿಧ ಕಡೆಗಳಲ್ಲಿ ಶುದ್ದೀಕರಿಸಿದ ಕೊಳಚೆ ನೀರು ಬಳಕೆಗೆ ಅವಕಾಶವಿದೆ. ಆದರೆ ಆ ನೀರನ್ನು ಘಟಕದಿಂದ ಕೊಂಡೊಯ್ಯುವುದು ಮಾತ್ರ ಸವಾಲು. ಸದ್ಯದ ಮಾಹಿತಿ ಪ್ರಕಾರ ಎಂಆರ್‌ಪಿಎಲ್ ಸಂಸ್ಥೆಗೆ ಶುದ್ದೀಕರಿಸಿದ ಕೊಳಚೆ ನೀರು ಇನ್ನಷ್ಟು ಅಗತ್ಯವಿದೆ. ಸೂಕ್ತ ವ್ಯವಸ್ಥೆ ಕಲ್ಪಿಸಿದರೆ ಹೆಚ್ಚುವರಿ ನೀರು ಎಂಆರ್‌ಪಿಎಲ್ ಪಡೆಯುವ ಸಾಧ್ಯತೆ ಇದೆ. ಎಂಆರ್‌ಪಿಎಲ್ ರಿಫೈನರಿಯನ್ನು ಚಲಾಯಿಸುವುದಕ್ಕೆ ಪ್ರತಿದಿನ 6 ಎಂಜಿಡಿಯಷ್ಟು ನೀರು ಬೇಕಾಗುತ್ತದೆ. ಇದರಲ್ಲಿರುವ ಕ್ಯಾಪ್ಟಿವ್ ಪವರ್ ಪ್ಲಾಂಟ್ ಮೂಲಕ ವಿದ್ಯುತ್ ಉತ್ಪಾದಿಸಲು ನೀರು ಬೇಕು. ಅತ್ಯಧಿಕ 300, 400 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಕಚ್ಚಾ ತೈಲವನ್ನು ಸಂಸ್ಕರಿಸಲಾಗುತ್ತಿದ್ದು ಅದನ್ನು ತಣಿಸುವುದಕ್ಕೆ ಮತ್ತೆ ಭಾರೀ ಪ್ರಮಾಣದ ನೀರಿನ ಅಗತ್ಯವಿದೆ. ಸದ್ಯ ಕಾವೂರು ಒಳಚರಂಡಿ ಸಂಸ್ಕರಣಾ ಘಟಕದಿಂದ ನೀರು ಪಡೆಯಲಾಗುತ್ತಿದೆ. ನೀರು ಮರು ಬಳಕೆ ಅಗತ್ಯ
ನಾಗ್ಪುರ ಮಾದರಿಯಲ್ಲೇ ಮಂಗಳೂರಿನಲ್ಲೂ ಕೊಳಚೆ ನೀರನ್ನು ಆಧುನಿಕ ತಂತ್ರಜ್ಞಾನ ಬಳಸಿ ಮರುಬಳಕೆಗೆ ಸಿಗುವಂತೆ ಯೋಜನೆ ರೂಪಿಸಬೇಕಾಗಿದೆ. ಶುದ್ಧೀಕರಿಸಿದ ಈ ನೀರನ್ನು ಕಟ್ಟಡ ಕಾಮಗಾರಿ, ಕೈಗಾರಿಕೆ ಗಳಿಗೆ ಬಳಕೆ ಮಾಡಬಹುದಾ ಗಿದೆ. ಮಹಾನಗರಪಾಲಿಕೆ ಈ ಯೋಜನೆಯನ್ನು ಕೈಗೆತ್ತಿ ಕೊಂಡರೆ ಎಂಆರ್‌ಪಿಎಲ್ ತನ್ನ ಕೈಗಾರಿಕೆಗೆ ಬಳಸಿಕೊಳ್ಳಲು ತಯಾರಿದೆ. ಜತೆಗೆ ಪಾರ್ಕ್, ಕೈಗಾರಿಕೆ, ಕಟ್ಟಡ ಕಾಮಗಾರಿಗೆ ನೀಡಲು ಅವಕಾಶವಿದೆ.
– ಡಾ| ಭರತ್ ಶೆಟ್ಟಿ ವೈ., ಶಾಸಕರು, ಮಂಗಳೂರು ಉ. ಎಂಆರ್‌ಪಿಎಲ್ ಜತೆಗೆ ಸಭೆ
ಕೊಳಚೆ ನೀರು ಶುದ್ಧೀಕರಣ ನಡೆಸಿ ಅದರ ಮರುಬಳಕೆಗೆ ಅವಕಾಶ ಇರುವ ಹಿನ್ನೆಲೆಯಲ್ಲಿ ಮುಂದಿನ ವಾರದಲ್ಲಿ ಎಂಆರ್‌ಪಿಎಲ್ ಜತೆಗೆ ವಿಶೇಷ ಸಭೆ ನಡೆಸಲು ಉದ್ದೇಶಿಸಲಾಗಿದೆ. ಹೆಚ್ಚುವರಿ ನೀರು ಅವರಿಗೆ ಆವಶ್ಯಕತೆ ಇದೆ. ಕೊಳಚೆ ನೀರು ಸಾಗಾಟಕ್ಕೆ ವೆಚ್ಚ ಅಧಿಕವಾಗಲಿದೆ; ಹೀಗಾಗಿ ಇದನ್ನು ಯಾರು ನಿಭಾಯಿಸುವುದು ಹಾಗೂ ನಿರ್ವಹಣೆ ಯಾರು ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು.
– ಆನಂದ್ ಸಿ.ಎಲ್, ಆಯುಕ್ತರು, ಮನಪಾ -ದಿನೇಶ್ ಇರಾ