Advertisement

Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್‌’

01:05 PM Dec 21, 2024 | Team Udayavani |

ಮಹಾನಗರ: ಕ್ರಿಸ್ಮಸ್‌ ಹಬ್ಬ ಎಂದರೆ ನಕ್ಷತ್ರಗಳು, ಬೆಳಕಿನ ಮರಗಳ ಜತೆಗೆ ನೆನಪಾಗುವ ಮತ್ತೂಂದು ಸಂಗತಿಯೇ ವಿಶೇಷ ತಿನಸುಗಳ ಸಂಗಮವಾದ ಕುಸ್ವಾರ್‌. ಕುಸ್ವಾರ್‌ ಇಲ್ಲದೆ ಕ್ರಿಸ್ಮಸ್‌ಗೆ ಕಳೆ ಬರುವುದಿಲ್ಲ. ಹೀಗಾಗಿ ಕ್ರೈಸ್ತರ ಮನೆ ಮನೆಗಳಲ್ಲಿ ಕ್ರಿಸ್ಮಸ್‌ ಪೂರ್ವದಲ್ಲಿ ತಿಂಡಿತಿನಸುಗಳ ತಯಾರಿಯೇ ಒಂದು ಹಬ್ಬ. ಕರಾವಳಿಯಲ್ಲಿ ಆರಂಭವಾದ ಈ ಕುಸ್ವಾರ್‌ ತಯಾರಿಯ ಸುವಾಸನೆ ಈಗ ದೇಶಾದ್ಯಂತ ಹಬ್ಬಿದೆ, ವಿದೇಶಗಳಲ್ಲೂ ಕುಸ್ವಾದ್‌ ಸ್ವಾದವಿದೆ. ಕ್ರೈಸ್ತ ಧರ್ಮೀಯರು ಕುಸ್ವಾರ್‌ಗಳನ್ನು ಅನ್ಯ ಧರ್ಮೀಯರಿಗೂ ಹಂಚಿ ಸಹಬಾಳ್ವೆ ಬೆಸೆಯುವುದು ಇದರ ವಿಶೇಷ.

Advertisement

ಕುಸ್ವಾರ್‌ ತಯಾರಿಯೇ ಹಬ್ಬ
ಕ್ರಿಸ್ಮಸ್‌ಗೆ ಪೂರ್ವಭಾವಿಯಾಗಿ ಕುಸ್ವಾರ್‌ ತಯಾರಿಸುವುದೇ ಕುಟುಂಬಸ್ಥರಿಗೆ ಒಂದು ರೀತಿಯ ಹಬ್ಬ. ಸಾಕಷ್ಟು ಕೆಲಸವಿದ್ದರೂ ಬಿಡುವು ಮಾಡಿಕೊಂಡು, ರಜಾ ದಿನಗಳನ್ನು ಬಳಸಿಕೊಂಡು ತಿಂಡಿ ತಿನಸುಗಳ ತಯಾರಿ ನಡೆಸುತ್ತಾರೆ. ಮನೆಯ ಹಿರಿಯ ನಾಗರಿಕರು ಮತ್ತು ಮಕ್ಕಳು ಕೂಡಾ ಇದಕ್ಕೆ ಸಾಥ್‌ ನೀಡುತ್ತಾರೆ.

ಮಾರುಕಟ್ಟೆಯ ಮೊರೆ!
ಈಗೀಗ ಮನೆಯಲ್ಲೇ ಕುಸ್ವಾರ್‌ ತಯಾರಿಸುವುದು ಸ್ವಲ್ಪ ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿ ವಿವಿಧ ಕುಸ್ವಾರ್‌ಗಳು ಲಭಿಸುತ್ತವೆ. ಹಾಗಾಗಿ ತಿಂಡಿ ತಿನಸು ತಯಾರಿಸಲು ಬಿಡುವು ಇಲ್ಲದವರು ಅಂಗಡಿಗಳಿಂದ ಖರೀದಿ ಮಾಡುತ್ತಾರೆ. ಅಷ್ಟಾದರೂ ಮನೆಯಲ್ಲಿ ಒಂದೆರಡು ತಿನಸು ತಯಾರಿಸುವ ಪದ್ಧತಿ ಈಗಲೂ ಇದೆ.

ಪ್ರತಿವರ್ಷ ಮನೆಯಲ್ಲಿ ಕುಸ್ವಾರ್‌ ತಯಾರಿಸಿ ಮನೆಯಲ್ಲಿ ಬಳಸುವ ಜತೆಗೆ ನೆರೆ ಮನೆಯವರಿಗೂ ಹಂಚುತ್ತೇವೆ. ಇದರಲ್ಲಿ ಅತಿಯಾದ ಆನಂದ ಸಿಗುತ್ತದೆ. ಪರಸ್ಪರ ಪ್ರೀತಿ, ಬಾಂಧವ್ಯ ವೃದ್ಧಿಗೆ ಕಾರಣವಾಗುತ್ತದೆ. ಮಕ್ಕಳು ಶಾಲೆಯಿಂದ ಬಂದ ಬಳಿಕ ಕುಸ್ವಾರ್‌ ತಯಾರಿಕೆಯಲ್ಲಿ ವಿಶೇಷ ಆಸಕ್ತಿ ತೋರುತ್ತಾರೆ ಎನ್ನುತ್ತಾರೆ ಶಾಂತಿ ಲೋಬೋ ಉರ್ವ.

ರಾಜಿ ಸಂಧಾನಕ್ಕೂ ಇದು ದಾರಿ!
ಕುಟುಂಬದಲ್ಲಿ, ಸಮುದಾಯದಲ್ಲಿದ್ದ ಮನಸ್ತಾಪ ದೂರ ಮಾಡಿ ರಾಜಿಯಾಗುವುದಕ್ಕೂ ಕ್ರಿಸ್ಮಸ್‌ ಒಂದು ಅವಕಾಶವಾಗಿದೆ. ಸುದೀರ್ಘ‌ ಸಮಯದಿಂದ ನೆರೆ ಮನೆಯವ ರೊಂದಿಗೆ ಇದ್ದ ಅನೇಕರ ಮನಸ್ತಾ ಪಗಳು ಕುಸ್ವಾರ್‌ ಹಂಚುವ ಮೂಲಕ ದೂರವಾಗಿರುವ ಉದಾಹರಣೆಗಳಿವೆ ಎಂಬುವುದು ಕ್ರೈಸ್ತ ಮುಖಂಡರ ಮಾತು.

Advertisement

ಸೌಹಾರ್ದಕ್ಕಾಗಿ ಕುಸ್ವಾರ್‌!
ಶಾಂತಿಪ್ರಿಯ ಕ್ರೈಸ್ತ ಸಮುದಾಯದವರು ತಮ್ಮ ಹಬ್ಬಗಳನ್ನು ಕ್ರೈಸ್ತೇತರರ ಜತೆಗೂ ಆಚರಿಸುತ್ತಾರೆ. ತಮ್ಮ ಮನೆಗಳಲ್ಲಿ ಕುಸ್ವಾರ್‌ ತಯಾರಿಸಿ ತಮ್ಮವರಿಗೆ ಹಾಗೂ ನೆರೆಹೊರೆಯರಿಗೆ ಹಂಚುವ ಮೂಲಕ ಪರಸ್ಪರ ಬಾಂಧವ್ಯ ಬೆಸೆಯುತ್ತಾರೆ. ಸಹಬಾಳ್ವೆಯ ಸಂಕೇತವಾಗಿ ಕೆಲಸದ ಜಾಗಗಳಲ್ಲಿ ಸೇರಿದಂತೆ ವಿವಿಧೆಡೆಗಳಲ್ಲಿ ಕುಸ್ವಾರ್‌ಗಳನ್ನು ವಿತರಿಸಿ ಶುಭಾಶಯ ವಿನಿಮಯದ ಜತೆಗೆ ತಮ್ಮ ನಡುವಿನ ಬಾಂಧವ್ಯ ಗಟ್ಟಿಗೊಳಿಸಲು ವೇದಿಕೆಯಾಗಿದೆ.

ಬಡ ಕುಟುಂಬಗಳಿಗೆ ಕುಸ್ವಾರ್‌ ವಿತರಣೆ
ಕುಸ್ವಾರ್‌ ತಯಾರಿಸಲು ಸಾಧ್ಯವಾಗದೆ ಇರುವ ಚರ್ಚ್‌ ವತಿಯಿಂದ ಹಾಗೂ ವಿವಿಧ ಸಂಘ ಸಂಸ್ಥೆಗಳ ಮೂಲಕ ಕುಸ್ವಾರ್‌ ವಿತರಿಸಲಾಗುತ್ತದೆ. ಜತೆಗೆ ಆಯಾ ವಾಳೆಯ ಮುಖಂಡರ ಮೂಲಕ ಬಡಕುಟುಂಬಗಳಿಗೆ ಕುಸ್ವಾರ್‌ ಸೇರಿದಂತೆ ಇತರ ಅಗತ್ಯ ವಸ್ತುಗಳನ್ನು ವಿತರಿಸುವ ಮೂಲಕ ಅವರ ಕುಟುಂಬದಲ್ಲೂ ಸಂತಸದ ಕ್ರಿಸ್ಮಸ್‌ ಆಚರಣೆಗೆ ಬೆಳಕಾಗುವ ಸಂಪ್ರದಾಯವನ್ನು ಕ್ರೈಸ್ತರು ಮೈಗೂಡಿಸಿಕೊಂಡಿದ್ದಾರೆ.

ಕುಸ್ವಾರ್‌ ಎಂದರೆ ಏನು?
ಕುಸ್ವಾರ್‌ ಕ್ರಿಸ್ಮಸ್‌ ಸಂದರ್ಭ ತಯಾರಿಸುವ ವಿಶೇಷ ತಿಂಡಿ. ಕುಸ್ವಾರ್‌ನಲ್ಲಿ ಕಿಡಿಯೊ, ಗುಳಿಯೊ, ನೆವ್ರೋ , ಅಕ್ಕಿ ಲಡ್ಡು, ಕುಕ್ಕಿಸ್‌ ಪ್ರಮುಖವಾದವುಗಳು. ಇವೆಲ್ಲವನ್ನು ಅಕ್ಕಿ, ಮೈದಾ, ರಾಗಿ, ಗೋದಿ ಹಿಟ್ಟು ಬಳಿಸಿಕೊಂಡು ತಯಾರಿಸಲಾಗುತ್ತದೆ. ಅದರ ಜತೆಗೆ ಚಕ್ಕುಲಿ, ಚಂಪಾಕಲಿ, ಕಲ್‌ಕಲಾ, ಗುಲಾಬ್‌ ಜಾಮೂನ್‌, ನಿಪ್ಪಟ್ಟು, ಕ್ಯಾರೆಟ್‌ ಹಲ್ವ, ಅಕ್ಕಿ ಲಡ್ಡು, ಕೇಕ್‌, ಚಿಪ್ಸ್‌, ರವೆ ಉಂಡೆ, ಕರ್ಜಿ ಕಾಯಿ, ಒಣ ಹಣ್ಣುಗಳು ಇತ್ಯಾದಿ ಹಲವು ವಿಭಿನ್ನ ಖಾದ್ಯ ಗಳೂ ಒಳಗೊಂಡಿವೆ. ಈ ಎಲ್ಲ ತಿನಸುಗಳನ್ನು ಒಂದೇ ತಟ್ಟೆಯಲ್ಲಿ ಜೋಡಿಸಿ ವಿತರಿಸುವುದಕ್ಕೆ ಕುಸ್ವಾರ್‌ ಎನ್ನುತ್ತಾರೆ.

ಸಂತೋಷ್‌ ಮೊಂತೇರೊ

Advertisement

Udayavani is now on Telegram. Click here to join our channel and stay updated with the latest news.

Next