Advertisement
ಹುಬ್ಬಳ್ಳಿ: ಹು-ಧಾ ಮಹಾನಗರದಲ್ಲಿ ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚಿದಂತೆ ಕುಡಿಯುವ ನೀರಿಗಾಗಿ ಮಲಪ್ರಭಾ ಜಲಾಶಯದ ಮೇಲಿನ ಅವಲಂಬನೆ ಹಾಗೂ ನೀರು ಪಡೆಯುವಿಕೆ ಪ್ರಮಾಣ ಹೆಚ್ಚುತ್ತಲೇ ಸಾಗುತ್ತಿದೆ. 2023ರಕ್ಕೆ ಅವಳಿನಗರಕ್ಕೆ 216.24 ದಶಲಕ್ಷ ಲೀಟರ್ ನೀರು ಪೂರೈಕೆ ಮಾಡಬೇಕಾಗಿದ್ದು, 2053ರ ವೇಳೆಗೆ ಅವಳಿನಗರಕ್ಕೆ ಕುಡಿಯುವ ನೀರಿನ ಬೇಡಿಕೆ ಅಂದಾಜು 4.20 ಟಿಎಂಸಿ ಅಡಿ ಎಂದು ಹೇಳಲಾಗುತ್ತಿದೆ. ಪರ್ಯಾಯ ನೀರಿನ ಲಭ್ಯತೆ ಇಲ್ಲವಾದರೆ ಮಲಪ್ರಭಾ ನೀರು ನೀರಾವರಿಗಿಂತ ಕುಡಿಯುವ ನೀರಿನ ಉದ್ದೇಶಕ್ಕೆ ಹೆಚ್ಚಿನ ಬಳಕೆ ಆಗುವ ಸಾಧ್ಯತೆ ಇದೆ.
Related Articles
Advertisement
ಹು-ಧಾ ಮಹಾನಗರ ಬೆಳೆದಂತೆಯೇ ಕುಡಿಯುವ ನೀರಿನ ವಿಚಾರದಲ್ಲಿ ಬಕಾಸುರನ ರೂಪ ತಾಳತೊಡಗಿದೆ. ಅವಳಿನಗರದಲ್ಲಿ 2011ರ ಜನಗಣತಿ ಆಧಾರದಲ್ಲಿ 9.43ಲಕ್ಷ ಜನಸಂಖ್ಯೆ ಇತ್ತು. ಪ್ರಸ್ತುತದ ಜನಸಂಖ್ಯೆ 11.85 ಲಕ್ಷ ಎಂದು ಅಂದಾಜಿಸಲಾಗುತ್ತಿದೆ. ಅಲ್ಲದೆ ಪ್ರತಿನಿತ್ಯ ಅವಳಿನಗರಕ್ಕೆ ವ್ಯಾಪಾರ, ವಾಣಿಜ್ಯ, ಆರೋಗ್ಯ, ಶಿಕ್ಷಣ ಇನ್ನಿತರ ಉದ್ದೇಶದೊಂದಿಗೆ ಸುಮಾರು 65,000 ಸಾವಿರ ಜನರು ಬಂದು ಹೋಗುತ್ತಿದ್ದಾರೆ. ಅವಳಿನಗರಕ್ಕೆ ಕುಡಿಯುವ ನೀರಿಗೆ ಜಲಮೂಲವೆಂದರೆ ಮಲಪ್ರಭಾ ಜಲಾಶಯ ಹಾಗೂ ನೀರಸಾಗರ ಜಲಾಶಯವಾಗಿದೆ. ಅವಳಿನಗರವಷ್ಟೇ ಅಲ್ಲದೆ ಕುಂದಗೋಳ ಪಟ್ಟಣ ವಿವಿಧ ಗ್ರಾಮಗಳಿಗೂ ಮಲಪ್ರಭಾ ಜಲಾಶಯದ ನೀರು ಪೂರೈಕೆ ಆಗುತ್ತಿದೆ. ಜತೆಗೆ ಸರಕಾರ ಅವಳಿನಗರದ ಎಲ್ಲ 82 ವಾರ್ಡ್ ಗಳಿಗೆ 24/7 ನೀರು ಪೂರೈಕೆಗೆ ಮುಂದಾಗಿದೆ. ಧಾರವಾಡ ಜಿಲ್ಲೆಯ ಎಲ್ಲ ಗ್ರಾಮಗಳ ಪ್ರತಿ ಮನೆಗೂ ನೀರು ನೀಡುವ ಜಲಜೀವನ ಮಿಷನ್‌ಗೆ ಮುಂದಾಗಿದೆ. ಅವಳಿನಗರದಲ್ಲಿ ಉದ್ಯಮಗಳ ಪ್ರಮಾಣವೂ ಹೆಚ್ಚತೊಡಗಿದೆ. ಉದ್ಯಮಗಳು ಬಂದರೆ ನೀರಿಗಾಗಿ ಅವಲಂಬನೆ ಆಗುವುದು ಇದೇ ಮಲಪ್ರಭಾ ಜಲಾಶಯದ್ದೇ ಆಗಿದೆ. ಬರುವ ದಿನಗಳಲ್ಲಿ ಮಲಪ್ರಭಾ ಜಲಾಶಯದ ಮೇಲಿನ ಕುಡಿಯುವ ನೀರಿನ ಒತ್ತಡ ಹೆಚ್ಚುವುದು ಸ್ಪಷ್ಟ. ಪ್ರಸ್ತುತ ಅವಳಿನಗರಕ್ಕೆ ಮಲಪ್ರಭಾ ಜಲಾಶಯದಿಂದ ನಿತ್ಯ 220 ದಶಲಕ್ಷ ಲೀಟರ್ ನೀರು ಪಡೆಯಲಾಗುತ್ತಿದ್ದು, ಇದರಲ್ಲಿ 7.55 ದಶಲಕ್ಷ ಲೀಟರ್ ಮಾರ್ಗಮಧ್ಯದಲ್ಲಿನ 12 ಗ್ರಾಮಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಉಳಿದ 212.45 ದಶಲಕ್ಷ ಲೀಟರ್ ನೀರನ್ನು ಅಮ್ಮಿನಭಾವಿ ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಿಸಿ ಅಮ್ಮಿನಬಾವಿಯಿಂದ ಬಹುಗ್ರಾಮ ಯೋಜನೆಯಡಿ 14 ಗ್ರಾಮಗಳು, ಮೊರಬ ಹಾಗೂ ತಲೆಮೊರಬ ಗ್ರಾಮಗಳು ಸೇರಿ ನಿತ್ಯ 6ರಿಂದ 6.5 ದಶಲಕ್ಷ ಲೀಟರ್ ನೀರು ನೀಡಲಾಗುತ್ತಿದೆ. ಹುಬ್ಬಳ್ಳಿಗೆ 120 ದಶಲಕ್ಷ ಲೀಟರ್, ಧಾರವಾಡಕ್ಕೆ 80 ದಶಲಕ್ಷ ಲೀಟರ್ ನೀರು ನೀಡಲಾಗುತ್ತಿದೆ.
ನೀರಿನ ಬೇಡಿಕೆ ಲೆಕ್ಕಾಚಾರ
ಅವಳಿನಗರ ಬೆಳೆದಂತೆ ನೀರಿನ ಬೇಡಿಕೆಯಲ್ಲೂ ಹೆಚ್ಚಳವಾಗುತ್ತಲೇ ಸಾಗುತ್ತದೆ. ಅಂದಾಜಿನ ಪ್ರಕಾರ 2023ಕ್ಕೆ ಯೋಜಿತ ಜನಸಂಖ್ಯೆ 11.86 ಲಕ್ಷ ಜನಸಂಖ್ಯೆ ಇರಲಿದ್ದು, ಗೃಹ ಬೇಡಿಕೆಯಡಿ ಪ್ರತಿಯೊಬ್ಬರಿಗೆ 135 ಲೀಟರ್‌ನಂತೆ ಅಂದಾಜು 160 .10 ದಶಲಕ್ಷ ಲೀಟರ್ ನೀರು ಬೇಕಾಗುತ್ತದೆ. ಸೋರಿಕೆ ಶೇ.10ರಷ್ಟು ಎಂದಾದರೂ 19.89 ದಶಲಕ್ಷ ಲೀಟರ್ ಎಂದು ಪರಿಗಣಿಸಿದರೂ ಒಟ್ಟಾರೆಯಾಗಿ 216.24 ದಶಲಕ್ಷ ಲೀಟರ್ ನೀರು ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೇನೆ ಬೇಕಾಗುತ್ತದೆ. 2031ರ ವೇಳೆಗೆ ಅವಳಿನಗರದ ಜನಸಂಖ್ಯೆ 13.54ಲಕ್ಷ ಎಂದು ಯೋಜಿಸಲಾಗಿದ್ದು, ಆಗ 242.94 ದಶಲಕ್ಷ ಲೀಟರ್ ಬೇಕಾಗುತ್ತದೆ. 2038ಕ್ಕೆ ಜನಸಂಖ್ಯೆ 15.10 ಲಕ್ಷ ಎಂದು ಯೋಜಿಸಲಾಗಿದ್ದು, 267.84 ದಶಲಕ್ಷ ಲೀಟರ್ ನೀರು ಬೇಕಾಗುತ್ತದೆ. 2041ಕ್ಕೆ 15.80 ಲಕ್ಷ ಜನಸಂಖ್ಯೆ ಎಂದು ಯೋಜಿಸಲಾಗಿದ್ದು, 278.97 ದಶಲಕ್ಷ ಲೀಟರ್‌ಎಂದು, 2053ಕ್ಕೆ 18.77ಲಕ್ಷ ಜನಸಂಖ್ಯೆ ಎಂದು ಅಂದಾಜಿಸಲಾಗುತ್ತಿದ್ದು, ಅಲ್ಲಿಗೆ 326.08 ದಶಲಕ್ಷ ಲೀಟರ್ ನೀರು ಬೇಕು ಎಂದು ಅಂದಾಜಿಸಲಾಗುತ್ತಿದೆ. ಅಲ್ಲಿಗೆ ಮಲಪ್ರಭಾ ಜಲಾಶಯದಿಂದ ಪ್ರಸ್ತುತ ಪ್ರತಿ ವರ್ಷ 2.83 ಟಿಎಂಸಿ ಅಡಿ ನೀರು ಪಡೆಯಲಾಗುತ್ತಿದ್ದು, ಅವಳಿನಗರ, ವಿವಿಧ ಪಟ್ಟಣ-ಗ್ರಾಮಗಳಿಗಾಗಿ ರಾಜ್ಯ ಸರಕಾರದ ಉಲ್ಲೇಖದಂತೆ ಮಲಪ್ರಭಾ ಜಲಾಶಯದಿಂದ 3.9 ಟಿಎಂಸಿ ಅಡಿ ನೀರು ಹಂಚಿಕೆಯಾಗಿದ್ದರೂ, ಕೇಂದ್ರ ಜಲ ಆಯೋಗ ಇದಕ್ಕೆ ಸಮ್ಮಿತಿ ನೀಡಬೇಕಾಗಿದೆ. 2053ರ ಜನಸಂಖ್ಯೆ ಆಧಾರದಲ್ಲಿ ನೋಡುವುದಾದರೆ ಅವಳಿನಗರಕ್ಕೆ 4.20 ಟಿಎಂಸಿ ಅಡಿ ನೀರು ಬೇಕಾಗುತ್ತದೆ. ಇದನ್ನು ಮಲಪ್ರಭಾ ಜಲಾಶಯವೇ ಪೂರೈಸಬೇಕಾಗುತ್ತದೆ!
ಮಲಪ್ರಭಾ ಜಲಾಶಯ ನಂಬಿದ ರೈತರಿಗೆ ಹೆಚ್ಚಿದ ಆತಂಕ: ಮಲಪ್ರಭಾ ಜಲಾಶಯ ವ್ಯಾಪ್ತಿಯಲ್ಲಿ ಒಂದು ಕಡೆ ಕಾಲುವೆ ವಿಸ್ತರಣೆ, ನೀರು ಬಾರದ ಪ್ರದೇಶಗಳಿಗೆ ಏತ ನೀರಾವರಿ ಯೋಜನೆ ಮೂಲಕ ನೀರಾವರಿ ಪ್ರದೇಶ ವಿಸ್ತರಣೆ ಮಾಡಲಾಗುತ್ತಿದೆ. ಮತ್ತೂಂದು ಕಡೆ ಇದೇ ಮಲಪ್ರಭಾ ಜಲಾಶಯದ ನೀರನ್ನು ಕುಡಿಯುವ ನೀರಿನ ಉದ್ದೇಶದಿಂದ ಹೆಚ್ಚು ಹೆಚ್ಚು ಬಳಕೆ ಮಾಡಲಾಗುತ್ತಿದೆ. ಕುಡಿಯುವ ನೀರಿಗೆ ಮೊದಲ ಆದ್ಯತೆ ಅತ್ಯವಶ್ಯವಾಗಿದೆ. ಆದರೆ ಸಮಸ್ಯೆಗೀಡಾಗುವುದು ಜಲಾಶಯ ನಂಬಿದ ಕೃಷಿಕರು. ಜಲಾಶಯದಲ್ಲಿ ಹೂಳು ಹೆಚ್ಚಿ ನೀರಿನ ಸಂಗ್ರಹ ಕುಸಿಯುತ್ತಿದೆ. ರಾಜ್ಯ ಸರಕಾರ ಕಳಸಾ-ಬಂಡೂರಿ ನಾಲಾ ಯೋಜನೆಗೆ ಒತ್ತು ನೀಡಬೇಕಾಗಿತ್ತು. ಇದುವರೆಗೂ ಆಗಿಲ್ಲ. ಬಿಜೆಪಿಯವರು ಒಂದು ವೇಳೆ ಮುಂಬುವ ಚುನಾವಣೆ ವೇಳೆ ಯೋಜನೆ ಕಾರ್ಯಾರಂಭ ಮಾಡಿದರಾಯಿತು ಎಂದು ಚುನಾವಣೆ ಲೆಕ್ಕಾಚಾರಕ್ಕಾಗಿಯೇ ಯೋಜನೆ ವಿಳಂಬ ಮಾಡಿದರೆ ಅದಕ್ಕಿಂತ ದೌರ್ಭಾಗ್ಯ ಮತ್ತೂಂದಿಲ್ಲ. –ವಿಕಾಸಸೊಪ್ಪಿನ, ಆಮ್ ಆದ್ಮಿ ಪಕ್ಷದ ಗ್ರಾಮೀಣ ಜಿಲ್ಲಾಧ್ಯಕ್ಷ
-ಅಮರೇಗೌಡ ಗೋನವಾರ