ಕೆರೂರ: ಬ್ರಿಟಿಷರ ಕಾಲದ ಆಡಳಿತ ಅವಧಿಯಲ್ಲಿ ನಿರ್ಮಾಣಗೊಂಡ ಕಟ್ಟಡದಲ್ಲಿರುವ ನಾಡಕಚೇರಿ ಶಿಥಿಲಾವಸ್ಥೆಗೆ ತಲುಪಿದೆ. ಮಳೆಗೆ ಮೇಲ್ಛಾವಣಿ ಸೋರುತ್ತಿದ್ದು, ಸರ್ಕಾರಿ ಕಡತಗಳು, ಯಂತ್ರೋಪಕರಣಗಳು ಹಾಳಾಗುತ್ತಿವೆ. ಮಳೆ ನೀರಿನಿಂದ ರಕ್ಷಿಸುವುದು ತಲೆನೋವಾಗಿದೆ. ಕಂದಾಯ ಇಲಾಖೆ ಅಧಿ ಕಾರಿಗಳಿಗೆ ಸುಸಜ್ಜಿತ ಕಟ್ಟಡ ಇಲ್ಲದಂತಾಗಿದೆ.
ನಾಡಕಚೇರಿಯಲ್ಲಿ ಉಪತಹಶೀಲ್ದಾರ್, ಕಂದಾಯ ನಿರೀಕ್ಷಕ, 7 ಜನ ಗ್ರಾಮ ಆಡಳಿತ ಅ ಧಿಕಾರಿಗಳು, ಖಾತೆ ನಿರ್ವಾಹಕಿ, ಅಟಲ್‌ಜಿ ಜನಸ್ನೇಹಿ ಕೇಂದ್ರದ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿಥಿಲಾವಸ್ಥೆಯ ಕಟ್ಟಡದಲ್ಲಿ ಮೇಲ್ಛಾವಣಿ ಹಂಚು ಯಾವಾಗ ತಲೆ ಮೇಲೆ ಬೀಳುತ್ತದೆ ಎಂಬ ಆತಂಕದಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ಬ್ರಿಟಿಷ ಸೈನಿಕರಿಗೆ ನಿರ್ಮಿಸಿದ ಕಟ್ಟಡ: ಬ್ರಿಟಿಷ್ ಸೈನಿಕರು ತಂಗಲು ಹಾಗೂ ಅವರ ಕುದುರೆಗಳನ್ನು ಕಟ್ಟಲು ಈ ಕಟ್ಟಡ ನಿರ್ಮಿಸಿದ್ದರಂತೆ. ಆದರೀಗ ಈ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಮೇಲ್ಛಾವಣಿಯ ಹಂಚು ಒಡೆದು ಹೋಗಿವೆ.
ಅವೈಜ್ಞಾನಿಕ ಕಟ್ಟಡ: ಸಿಎಂ ಸಿದ್ದರಾಮಯ್ಯನವರು ಹಿಂದೆ ಬಾದಾಮಿ ಶಾಸಕರಾದ ಅವಧಿಯಲ್ಲಿ ನಾಡ ಕಚೇರಿ ಕಟ್ಟಡ ನಿರ್ಮಿಸಲು ಹುಲ್ಮನಿ ಪೆಟ್ರೋಲ್ ಬಳಿ ಮೀಸಲಿಟ್ಟ ಚಿಕ್ಕ ಪ್ರದೇಶದಲ್ಲಿ ನೂತನ ಕಟ್ಟಡ ನಿರ್ಮಾಣವಾಗಿದೆ. ಹೊಸ ಕಟ್ಟಡದಲ್ಲೂ ನೀರು ನೆರಳು, ಆವರಣ, ತಡೆಗೋಡೆ, ಗೇಟ್, ವ್ಯವಸ್ಥೆ ಇಲ್ಲದೆ ಮೂಲ ಸೌಕರ್ಯ ಕೊರತೆಯಿಂದ ಕೂಡಿದೆ. ಉಪತಹಶೀಲ್ದಾರ್ ಮತ್ತು ಅಟಲ್‌ಜಿ ಜನಸ್ನೇಹಿ ಕೇಂದ್ರಕ್ಕೆ ಹೊಸ ಕಟ್ಟಡ ಚಿಕ್ಕದಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನು ಮಳೆಗೆ ಸೋರುವ ಅದೇ ಹಳೆಯ ಬ್ರಿಟಿಷ್ ಕಾಲದ ಕಟ್ಟಡದಲ್ಲಿ ಮತ್ತು ಅಧಿಕಾರಿಗಳ ವಸತಿ ಗೃಹಗಳಲ್ಲಿ ಸುಮಾರು 20ಗ್ರಾಮಗಳ 7 ಜನ ಗ್ರಾಮ ಆಡಳಿತ ಅಧಿಕಾರಿಗಳ ಮತ್ತು ಗ್ರಾಮ ಸಹಾಯಕರು ಕರ್ತವ್ಯ ನಿರ್ವಹಣೆ ಮುಂದುವರಿಯಲಿದೆ.
ಸೌಲಭ್ಯ ವಂಚಿತ ನಾಡಕಚೇರಿ: ನಾಡ ಕಚೇರಿಗೆ ಬರುವ ರೈತರಿಗೆ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಸುಸಜ್ಜಿತ ಶೌಚಾಲಯಗಳಿಲ್ಲ. ಸೊಳ್ಳೆಗಳ ಕಾಟ, ಪೀಠೊಪಕರಣಗಳ, ಸಮರ್ಪಕ ಆಸನಗಳ ಕೊರತೆ ಸೇರಿದಂತೆ ಹಲವಾರು ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದ್ದು, ಅವ್ಯವಸ್ಥೆಗಳ ಆಗರವಾಗಿದೆ.
ಉಪತಹಶೀಲ್ದಾರ್ ಕಾಳಜಿ: ಉಪ ತಹಶೀಲ್ದಾರ್ ರಾಜಶೇಖರ್ ಸತಿಹಾಳ ಅಧಿಕಾರ ವಹಿಸಿಕೊಂಡ ಬಳಿಕ ಕಚೇರಿಯ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ. ಕಚೇರಿ ಸುತ್ತಲೂ ಬೇವು, ಹುಣಸೆ, ಮಾವು, ಸೀತಾಫಲ, ಪೇರಲೆ ಹಣ್ಣು ಮತ್ತಿತರೆ ಸಸಿ ನೆಟ್ಟಿದ್ದಾರೆ. ಧ್ವಜ ಕಟ್ಟೆ ಸುತ್ತಲೂ ಸುಂದರ ಗಿಡಗಳನ್ನು ಹಚ್ಚಿ ಪರಿಸರ ಕಾಳಜಿ ತೋರಿದ್ದಾರೆ.
*ನಾಡಕಚೇರಿ ಕಟ್ಟಡ ಪಪಂಗೆ ಸೇರಿದ್ದು ಪಪಂನವರಿಗೆ ದುರಸ್ತಿ ಮಾಡಲು ತಿಳಿಸುತ್ತೇನೆ. ಹೊಸ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು ಮೂಲಭೂತ ಸೌಕರ್ಯ ಒದಗಿಸುತ್ತೇವೆ.
ಜೆ.ಬಿ. ಮಜ್ಜಗಿ, ತಹಶೀಲ್ದಾರ್, ಬಾದಾಮಿ
ರೈತರ, ಸಾರ್ವಜನಿಕರ ದಾಖಲೆಗಳು ಕಚೇರಿಯಲ್ಲಿ ಇರುತ್ತವೆ. ಮಳೆಯ ನೀರಿಗೆ ಕಡತಗಳು ಹಾಳಾದರೆ ಯಾರು ಹೊಣೆಗಾರರು.
ಸುಸಜ್ಜಿತ ಕಟ್ಟಡದಲ್ಲಿ ನಾಡಕಚೇರಿ ನಡೆಯಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
*ರಾಜೇಸಾಬ್ ರಾಗಾಪುರ, ರೈತ ಸಂಘದ ಹೋರಾಟಗಾರ
*ಶ್ರೀಧರ ಚಂದರಗಿ