ನಿರ್ದೇಶಕ ಜಯತೀರ್ಥ ಇದೀಗ ಫುಲ್ ಹ್ಯಾಪಿಯಾಗಿದ್ದಾರೆ. ಅವರ ಆ ಸಂತಸಕ್ಕೆ ಕಾರಣ, ಅವರ ಕನಸಿನ ಚಿತ್ರ “ಬ್ಯೂಟಿಫುಲ್ ಮನಸುಗಳು’ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದೆ. ಅವರಿಗೆ “ಬ್ಯೂಟಿಫುಲ್ ಮನಸುಗಳು’ ಸಿನಿಮಾ ಮತ್ತೂಂದು ಹೊಸ ಇಮೇಜ್ ತಂದುಕೊಡಲಿದೆ ಎಂಬ ವಿಶ್ವಾಸವಿದೆ. ಸುಮಾರು 40 ದಿನಗಳ ಕಾಲ ಬೆಂಗಳೂರು ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಣ ನಡೆಸಿರುವ ಜಯತೀರ್ಥ, ಒಳ್ಳೆಯ ತಂಡ ಸಿಕ್ಕಿದ್ದರಿಂದಲೇ ಇಂಥದ್ದೊಂದು ಸಿನಿಮಾ ಮಾಡಲು ಸಾಧ್ಯವಾಗಿದೆ ಎನ್ನುತ್ತಾರೆ ಜಯತೀರ್ಥ.
ನಿರ್ಮಾಪಕರಾದ ಪ್ರಸನ್ನ ಮತ್ತು ಶಶಿಕಲಾ ಬಾಲಾಜಿ ಅವರಿಗೂ ಈ ಚಿತ್ರ ಗೆಲುವು ಕೊಡುತ್ತೆ ಎಂಬ ವಿಶ್ವಾಸವಿದೆ. ಅದಕ್ಕೆ ಕಾರಣ, ಕಥೆ. 2013 ರಲ್ಲಿ ನಡೆದಂತಹ ನೈಜ ಘಟನೆ ಸಿನಿಮಾ ಇದಾಗಿರುವುದರಿಂದ ಜನರಿಗೆ ಇಷ್ಟವಾಗುತ್ತೆ ಎಂಬ ನಂಬಿಕೆಯಲ್ಲೇ ಅವರು, ಎಷ್ಟೇ ಸಮಸ್ಯೆ ಎದುರಾದರೂ, ಚಿತ್ರವನ್ನು ನೀಟ್ ಆಗಿ ಪೂರ್ಣಗೊಳಿಸಿ, ಇದೀಗ ರಿಲೀಸ್ ಮಾಡಲು ತಯಾರಿ ನಡೆಸಿದ್ದಾರೆ. ಜನವರಿ 20 ರಂದು ಚಿತ್ರ ತೆರೆಗೆ ಬರಲಿದೆ. ಚಿತ್ರದ ನಾಯಕ ನೀನಾಸಂ ಸತೀಶ್‌ಗೆ “ಬ್ಯೂಟಿಫುಲ್ ಮನಸುಗಳು’ ಒಂದು ಹೊಸ ಬಗೆಯ ಸಿನಿಮಾವಂತೆ.
ಈ ಚಿತ್ರ ಬೇರೆಯೇ ಫೀಲ್ ಕೊಡಲಿದೆ ಎಂಬ ಮಾತು ಅವರದು. “ಜಯತೀರ್ಥ ಅವರಲ್ಲಿ ಹೊಸದ್ದನ್ನು ತೋರಿಸಬೇಕು ಎಂಬ ತುಡಿತವಿದೆ. ಅವರೊಳಗಿನ ತುಡಿತವೇ ಇಂಥಧೊoದು ಸಿನಿಮಾ ಮಾಡಲು ಸಾಧ್ಯವಾಗಿದೆ. ಇದು ಎಲ್ಲಾ ವರ್ಗದ ಜನರಿಗೂ ಇಷ್ಟವಾಗುತ್ತೆ’ ಎನ್ನುತ್ತಾರೆ ನೀನಾಸಂ ಸತೀಶ್.
ಶ್ರುತಿ ಹರಿಹರನ್‌ಗೆ ಒಳ್ಳೆಯ ಮನುಸುಗಳಿಗೆ ಈ ನಮ್ಮ ಸುಂದರ ಮನಸು ಇಷ್ಟವಾಗುತ್ತೆ ಎಂಬ ನಂಬಿಕೆ ಇದೆಯಂತೆ. “ಲೂಸಿಯಾ’ ಬಳಿಕ ಸತೀಶ್ ನೀನಾಸಂ ಜತೆ ನಟಿಸಿದ್ದೇನೆ.
ಒಂದು ಸಕ್ಸಸ್ ಸಿನಿಮಾದ ಜೋಡಿ, ಸಕ್ಸಸ್‌ಫುಲ್ ನಿರ್ದೇಶಕರ ಜತೆ ಕೆಲಸ ಮಾಡಿದೆ. ಈ ಸಿನಿಮಾ ಕೂಡ ಗೆಲುವು ಕೊಡಲಿದೆ ಎಂಬ ನಂಬಿಕೆ ನನ್ನದು ಎನ್ನುತ್ತಾರೆ ಶ್ರುತಿಹರಿಹನ್. ಸಂಗೀತ ನಿರ್ದೇಶಕ ಬಿ.ಜೆ. ಭರತ್‌ಗೆ ಇಲ್ಲಿ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆಯಂತೆ. ಅದರಲ್ಲೂ ಕಾಮಿಡಿ ದೃಶ್ಯಗಳಲ್ಲಿ ಸಂಗೀತ ಕೊಟ್ಟಿರುವುದು ತುಂಬಾನೇ ಸಂತಸವಾಗಿದೆಯಂತೆ. ಆ ದೃಶ್ಯಗಳಿಗೆ ಹಿನ್ನಲೆ ಸಂಗೀತ ಕೊಡುವುದು ಸುಲಭವಲ್ಲ.
ನಿರ್ದೇಶಕರ ಸಹಕಾರ, ನಿರ್ಮಾಪಕರ ಪ್ರೋತ್ಸಾಹ ಹಾಗೂ ಟೀಮ್ ಕೊಟ್ಟ ಪ್ರೀತಿಯಿಂದ ಒಳ್ಳೆಯ ಸಂಗೀತ ಕೊಡಲು ಸಾಧ್ಯವಾಗಿದೆ ಎಂದರು ಭರತ್. ಚಿತ್ರಕ್ಕೆ ಮದನ್ ಬರೆದಿರುವ ಟ್ರಾಕ್ ಸಾಂಗ್‌ಗೆ ಒಳ್ಳೆಯ ಪ್ರತಿಕ್ರಿಯೆಗಳು ಬಂದಿವೆಯಂತೆ. ಕಿರಣ್ ಹಂಪಾಪುರ್ ಕ್ಯಾಮೆರಾ ಹಿಡಿದರೆ, ಕೆ.ಎಂ.ಪ್ರಕಾಶ್ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ. ಕಲೈ ನೃತ್ಯ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಅಚ್ಯುತಕುಮಾರ್, ತಬಲಾನಾಣಿ, ಪ್ರಶಾಂತ್ ಸಿದ್ದಿ, ಸಂದೀಪ್, ಮಂಜುನಾಥ್ ಬಿಳಿಕೆರೆ, ರಾಧಾ ಜಯರಾಮ್, ಮೇಘಶ್ರೀ, ಸ್ವಾತಿ ಇತರರು ನಟಿಸಿದ್ದಾರೆ.