ಬೆಂಗಳೂರು: “ಮಂತ್ರಕ್ಕೆ ಮಾವಿನ ಕಾಯಿ ಉದುರಲ್ಲ’ ಎಂಬ ಮಾತು ಬಿಬಿಎಂಪಿ ಅಧಿಕಾರಿಗಳಿಗೆ ಹೆಚ್ಚು ಸೂಕ್ತವಾಗಲಿದೆ! ಹೌದು, ಕಳೆದ ಐದು ದಿನಗಳ ಹಿಂದೆ ಧಾರಾಕಾರವಾಗಿ ಸುರಿದಿದ್ದ ಮಳೆಯಿಂದಾಗಿ ಮನೆಯ ಸೆಲ್ಲಾರ್‌ನಲ್ಲಿ ತುಂಬಿಕೊಂಡಿದ್ದ ನೀರು ಹೊರಹಾಕಲು ಅಮೆರಿಕಾ ಮೂಲದ ಮಹಿಳೆ ಹಲವು ಬಾರಿ ಮನವಿ ಮಾಡಿದ್ದರೂ, ಕ್ಯಾರೇ ಅನ್ನದ ಪಾಲಿಕೆ ಅಧಿಕಾರಿಗಳು ಅಮೆರಿಕಾ ರಾಯಭಾರಿ ಕಚೇರಿಯಿಂದ ದೂರವಾಣಿ ಕರೆ ಬಂದ ಕೂಡಲೇ ನೆರವಿಗೆ ಧಾವಿಸಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸೆಪ್ಟೆಂಬರ್ 26ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದ ಎಚ್‌ಎಸ್‌ಆರ್ ಲೇಔಟ್‌ನ ಅಪಾರ್ಟ್‌ಮೆಂಟ್‌ವೊಂದರಲ್ಲಿ ತನ್ನ ಇಬ್ಬರು ಮಕ್ಕಳ ಜೊತೆ ವಾಸಿಸುತ್ತಿರುವ ಮೀನಾಗುಪ್ತಾ ಅವರ ನಿವಾಸದ ಸೆಲ್ಲಾರ್‌ನಲ್ಲಿ ನೀರು ತುಂಬಿಕೊಂಡಿದ್ದಲ್ಲದೆ, ಬೇಸ್‌ಮೆಂಟ್‌ನಲೂ ಯಥೇಚ್ಚವಾಗಿ ನೀರು ತುಂಬಿಕೊಂಡಿತ್ತು.
ಹೀಗಾಗಿ ನೀರು ತೆರವುಗೊಳಿಸುವಂತೆ ಮೀನಾ ಗುಪ್ತಾ, ಮುಂಜಾನೆ 4 ಗಂಟೆ ಸುಮಾರಿಗೆ ಸ್ಥಳೀಯ ಶಾಸಕರು, ಬಿಬಿಎಂಪಿ ಪಾಲಿಕೆ ಜಂಟಿ ಆಯುಕ್ತರು ಹಾಗೂ ಅಧಿಕಾರಿಗಳ ಹಲವು ಬಾರಿ ದೂರವಾಣಿ ಕರೆ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಆದರೆ, ಯಾವೊಬ್ಬ ಅಧಿಕಾರಿಯೂ ಸಹಾಯಕ್ಕೆ ಸಿಬ್ಬಂದಿಯನ್ನು ನಿಯೋಜಿಸದೇ ಉಡಾಫೆ ತೋರಿದ್ದಾರೆ.
ಇದರಿಂದ ಬೇಸತ್ತ ಮೀನಾಗುಪ್ತಾ, 8 ಗಂಟೆ ಸುಮಾರಿಗೆ ಅಮೆರಿಕಾ ರಾಯಭಾರ ಕಚೇರಿಗೆ ತನ್ನ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಮಹಿಳೆಯ ನಿವಾಸದ ಮಾಹಿತಿ ಸಂಗ್ರಹಿಸಿದ ಅಲ್ಲಿನ ಅಧಿಕಾರಿಗಳು ಪಾಲಿಕೆಯ ಉನ್ನತ ಅಧಿಕಾರಿಗಳಿಗೆ ಬಿಸಿಮುಟ್ಟಿಸಿದ್ದಾರೆ. ಇದಾದ ಕೇವಲ ಎರಡು ಗಂಟೆಗಳಲ್ಲಿಯೇ ಸುಮಾರು 15 ಮಂದಿ ಎನ್‌ಡಿಆರ್‌ಎಫ್ ಸಿಬ್ಬಂದಿ ಬೋಟ್‌ಗಳ ಮೂಲಕ ಸ್ಥಳಕ್ಕಾಗಮಿಸಿ ನೀರು ಹೊರಹಾಕಿ ಮಹಿಳೆ ಹಾಗೂ ಆಕೆಯ ಮಕ್ಕಳನ್ನು ರಕ್ಷಿಸಿದ್ದಾರೆ.
ಈ ಬಗ್ಗೆ ಅಭಿಪ್ರಾಯವ್ಯಕ್ತಪಡಿಸಿರುವ ಮೀನಾಗುಪ್ತಾ, ಸ್ಥಳೀಯ ಅಧಿಕಾರಿಗಳ ಸೂಕ್ತ ಸ್ಪಂದನೆ ದೊರೆಯಲಿಲ್ಲ. ಇಲ್ಲಿನ ಆಡಳಿತ ವ್ಯವಸ್ಥೆ ಬಗ್ಗೆ ನನಗೆ ನಂಬಿಕೆಯಿಲ್ಲ. ಹೀಗಾಗಿ ಅನಿವಾರ್ಯವಾಗಿ ಅಮೆರಿಕಾ ರಾಯಭಾರಿ ಕಚೇರಿಗೆ ಕರೆ ಮಾಡಬೇಕಾಯಿತು ಎಂದು ತಿಳಿಸಿದ್ದಾರೆ. ಸಿವಿಕ್ ಆ್ಯಕ್ಷನ್ ಫೋರಂ ಹೆಸರಿನ ಸಂಘಟನೆಯನ್ನು ಕಟ್ಟಿಕೊಂಡಿರುವ ಮೀನಾಗುಪ್ತಾ, ನಾಗರೀಕರ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಜಾಗೃತಿ ಮೂಡಿಸುವ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.