Yearender 2024: ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆ ವೇಳೆ ದೇಶಾದ್ಯಂತ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಚುನಾವಣ ಪ್ರಚಾರ ನಡೆಸಿದ್ದರು. ಅಲ್ಲದೇ 2024ರಲ್ಲಿ ಪ್ರಧಾನಿ ಮೋದಿ ಅವರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ, ರಷ್ಯಾ, ಫ್ರಾನ್ಸ್, ಇಟಲಿ ಸೇರಿದಂತೆ ಹಲವು ದೇಶಗಳಿಗೆ ಭೇಟಿ ನೀಡಿದ್ದರು. ಈ ಭೇಟಿಯಿಂದಾಗಿ ಭಾರತದ ಭೌಗೋಳಿಕದ ಮೇಲೆ ಹೆಚ್ಚು ಗಮನಹರಿಸುವಂತೆ ಮಾಡಿತ್ತು. ಉಕ್ರೈನ್, ರಷ್ಯಾಕ್ಕೆ ಭೇಟಿ ನೀಡುವ ಮೂಲಕ ಭಾರತ ಶಾಂತಿಯ ಪ್ರತಿಪಾದಕ ಎಂಬ ಸಂದೇಶ ರವಾನಿಸಿದ್ದರು.
ಪ್ರಧಾನಿ ಮೋದಿ ಅಮೆರಿಕ ಭೇಟಿ:
2024ರ ಜೂನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಅಧಿಕೃತ ಭೇಟಿ ನೀಡಿದ್ದರು. ಇದು ಪ್ರಧಾನಿ ಮೋದಿ ಅವರ ಅಮೆರಿಕದ ಮೊದಲ ಭೇಟಿಯಾಗಿದೆ. ಯುಪಿಎ ಅವಧಿಯಲ್ಲಿ ಡಾ.ಮನಮೋಹನ್ ಸಿಂಗ್ ಅವರು ಅಮೆರಿಕ ಭೇಟಿ ನೀಡಿದ್ದ ವೇಳೆ ಯುಎಸ್ ಕಾಂಗ್ರೆಸ್ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ್ದರು.
ರಷ್ಯಾ ಭೇಟಿ:
ಅಮೆರಿಕ ಭೇಟಿಯ ನಂತರ ಪ್ರಧಾನಿ ಂೋದಿ ಅವರು ಜುಲೈನಲ್ಲಿ ರಷ್ಯಾಕ್ಕೆ ಭೇಟಿ ನೀಡಿದ್ದರು. ಈ ಮೂಲಕ ಭಾರತದ ಕಾರ್ಯತಂತ್ರದ ಸ್ವಾಯತ್ತತೆಯನ್ನು ಪ್ರದರ್ಶಿಸಿದಂತಾಗಿತ್ತು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಭಾರತ-ರಷ್ಯಾ ವಾರ್ಷಿಕ ಶೃಂಗದಲ್ಲಿ ಪಾಲ್ಗೊಂಡಿದ್ದರು.
ಪ್ರಧಾನಿ ಮೋದಿ ಉಕ್ರೈನ್ ಭೇಟಿ:
ಉಕ್ರೈನ್ ಅಧ್ಯಕ್ಷ ಜೆಲೆನ್ಸ್ಕಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ ನಲ್ಲಿ ಉಕ್ರೈನ್ ಗೆ ಭೇಟಿ ನೀಡಿದ್ದರು. ಸಾಂಪ್ರದಾಯಿಕವಾಗಿ ಭಾರತ ಮತ್ತು ರಷ್ಯಾ ಪಾರ್ಟನರ್ ದೇಶಗಳು ಎಂದೇ ಬಿಂಬಿತವಾಗಿದ್ದ ನಡುವೆಯೇ ಮೋದಿ ಅವರ ಈ ಭೇಟಿ ಹೆಚ್ಚಿನ ಮಹತ್ವ ಪಡೆದುಕೊಂಡಿತ್ತು. ರಷ್ಯಾ-ಉಕ್ರೈನ್ ನಡುವೆ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲೇ ಪ್ರಧಾನಿ ಮೋದಿ ಭೇಟಿ ನೀಡುವ ಮೂಲಕ ಭಾರತ ಶಾಂತಿ ಮಧ್ಯಸ್ಥಿಕೆಯ ಪಾತ್ರ ನಿರ್ವಹಿಸುವ ಸಂದೇಶ ರವಾನಿಸಿದಂತಾಗಿತ್ತು.
ಇಟಲಿ ಪ್ರವಾಸ:
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ಜೂನ್ ನಲ್ಲಿ ಇಟಲಿ ಪ್ರವಾಸ ಕೈಗೊಂಡಿದ್ದು, 50ನೇ ಜಿ7 ಶೃಂಗದಲ್ಲಿ ಭಾಗವಹಿಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಜಯ ಸಾಧಿಸಿದ ನಂತರದ ಪ್ರಧಾನಿ ಮೋದಿ ಅವರ ಮೊದಲ ಭೇಟಿ ಇದಾಗಿತ್ತು. ಈ ಶೃಂಗದಲ್ಲಿ ಅಲ್ಜೀರಿಯಾ, ಅರ್ಜೆಂಟೀನಾ, ಬ್ರೆಜಿಲ್, ಈಜಿಪ್ಟ್, ಕೀನ್ಯಾ, ಮಾರಿಷಸ್, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟ್ಯುನೆಷಿಯಾ ಮತ್ತು ಟರ್ಕಿ ನಾಯಕರು ಹಾಜರಾಗಿದ್ದರು.
ರಷ್ಯಾದಲ್ಲಿ ಕ್ಸಿ ಜಿಂಗ್ ಪಿಂಗ್, ಮೋದಿ ಭೇಟಿ:
ಅಕ್ಟೋಬರ್ ನಲ್ಲಿ ಪ್ರಧಾನಿ ಮೋದಿ ಅವರು ರಷ್ಯಾಕ್ಕೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ರಷ್ಯಾದ ಕಜ್ಹಾನ್ ನಲ್ಲಿ ಏರ್ಪಡಿಸಿದ್ದ ಬ್ರಿಕ್ಸ್ ಶೃಂಗದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿಂಗ್ ಪಿಂಗ್ ಭಾಗಿಯಾಗಿದ್ದರು. ಈ ವೇಳೆ ಪ್ರಧಾನಿ ಮೋದಿ ಮತ್ತು ಕ್ಸಿ ಭೇಟಿಯಾಗಿ ಲಡಾಖ್ ಪ್ರದೇಶದಲ್ಲಿ ಸೇನೆಯನ್ನು ಹಿಂಪಡೆಯುವ ಕುರಿತು ಉಭಯ ದೇಶಗಳು ನಿರ್ಧರಿಸಿದ್ದವು.