ನಗರದ ಜನವಸತಿ ಪ್ರದೇಶವಾಗಿರುವ ಮಣ್ಣಗುಡ್ಡೆ, ಕಂಬ್ಳ, ಕೊಡಿಯಾಲಬೈಲ್, ಬಿಜೈ, ಶಿವಬಾಗ್ ಸಹಿತ ಬಹುತೇಕ ಭಾಗದ ನೈಜ ಸಮಸ್ಯೆ ಇದು. ರಾಜಕಾಲುವೆ, ಬೃಹತ್ ತೋಡಿನ ವ್ಯಾಪ್ತಿಯಲ್ಲಿ ಸೇತುವೆ ಇದ್ದರೆ ಪಿಲ್ಲರ್ ಮುಂದೆ ತ್ಯಾಜ್ಯ ರಾಶಿ ತುಂಬಿಕೊಂಡು ನೀರು ಹರಿಯುವಿಕೆಗೆ ತೊಡಕುಂಟಾಗುತ್ತಿದೆ.
ಜನತಾ ಡಿಲಕ್ಸ್ ಹೊಟೇಲ್ ಮುಂಭಾಗ ರಾಜಕಾಲುವೆಯ ಇಕ್ಕೆಲಗಳಲ್ಲಿ ತಡೆಗೋಡೆ ಕಾಮಗಾರಿ ನಡೆಯುತ್ತಿದೆ. ಇಲ್ಲಿ ಪ್ರತೀ ಮಳೆಗಾಲ ನೆರೆ ನೀರು ಉಕ್ಕಿ ರಸ್ತೆಯಲ್ಲಿ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತದೆ. ಕೆಲವು ಮನೆಗಳಿಗೂ ನೀರು ನುಗ್ಗುವ ಪರಿಸ್ಥಿತಿ ಇದೆ. ಟಿಎಂಎ ಪೈ ಸಭಾಂಗಣದ ಹೊರಭಾಗದಲ್ಲೂ ಇದೇ ಸಮಸ್ಯೆ.
ಕೊಡಿಯಾಲಬೈಲ್ ಭಾಗದ ಬೃಹತ್ ತೋಡು ಕುದ್ರೋಳಿ ಮತ್ತು ಮಣ್ಣಗುಡ್ಡ ರಸ್ತೆಯ ಅಡಿಯಿಂದ ಸಾಗುತ್ತದೆ. ಹೀಗಾಗಿ ಇಲ್ಲಿ ಎರಡು ಸಣ್ಣ ಸೇತುವೆಗಳಿವೆ. ಸೇತುವೆಗೆ ಪಿಲ್ಲರ್ ಇದೆ. ಮಳೆಗಾಲದಲ್ಲಿ ಸಮಸ್ಯೆಗೆ ಕಾರಣ ಇದೇ ಪಿಲ್ಲರ್. ಮೊದಲ ಮಳೆ ನೀರು ಹರಿದು ಬರುವಾಗ ತೋಡಿನಲ್ಲಿದ್ದ ಕಸ ಕಡ್ಡಿ ತ್ಯಾಜ್ಯಗಳೆಲ್ಲ ಬಂದು ಪಿಲ್ಲರ್‌ಗೆ ಸಿಲುಕಿಕೊಂಡು ಅಲ್ಲೇ ಬಾಕಿಯಾಗುತ್ತದೆ. ಮಳೆ ನೀರಿನ ಹರಿವಿಗೆ ತಡೆಯಾಗಿ ತೋಡಿನ ನೀರು ಉಕ್ಕುತ್ತದೆ.
ಪಿಲ್ಲರ್ ಕೆಳಗೆ ತ್ಯಾಜ್ಯ ನಿಂತು ನೀರು ಹರಿಯಲು ಸಮಸ್ಯೆ ಆಗುತ್ತಿರುವುದು ಹೌದು; ಬಳ್ಳಾಲ್‌ಬಾಗ್ ಕಡೆಯಿಂದ ಬರುವ ಮಳೆನೀರು ತೋಡಿನ ಬದಲು ರಸ್ತೆಯಲ್ಲೇ ಹರಿಯುವ ಪರಿಸ್ಥಿತಿ ಇದೆ’ ಎನ್ನುತ್ತಾರೆ ಇದೇ ಭಾಗದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರೊಬ್ಬರು.
ಬಿಜೈ, ಕುದ್ರೋಳಿ, ಶಿವಬಾಗ್ ಮತ್ತಿತರ ಕಡೆ ತುರ್ತಾಗಿ ತೋಡಿನ ಹೂಳು ತೆಗೆಯಬೇಕಿದೆ. ಇಲ್ಲಿ ಹುಲ್ಲು, ಗಿಡಗಂಟಿಗಳು ವ್ಯಾಪಿಸಿವೆ. ಭಾರೀ ಮಳೆಯಾದರೆ ನೀರಿನ ಹರಿವಿಗೆ ಸಮಸ್ಯೆ ಖಚಿತ.
ರಾಜಕಾಲುವೆ ಮತ್ತು ತೋಡಿನ ಹೂಳು ತೆಗೆಯುವ ಕೆಲಸ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ ಎಂದು ಪಾಲಿಕೆ ತಿಳಿಸಿದೆ. ಆದರೆ ಕೆಲವೆಡೆ ಮಾತ್ರ ಹೂಳು ತೆಗೆಯುವುದು ಆಗಬಾರದು. ತೋಡಿನುದ್ದಕ್ಕೂ ಶುಚಿಗೊಳಿಸಬೇಕು ಎನ್ನುತ್ತಾರೆ ಶಿವಬಾಗ್ ನಿವಾಸಿ ರಾಜೇಶ್.