Advertisement

ತ್ಯಾಜ್ಯ ಸಮಸ್ಯೆಗೆ ಇನ್ನು ಸಿಗಲಿದೆ ಮುಕ್ತಿ 

03:37 PM Dec 24, 2018 | Team Udayavani |

ಶಹಾಬಾದ: ನಗರದ ಬಡಾವಣೆಗಳಲ್ಲಿ ಕಸದಿಂದ ಕೂಡಿದ ಉಪ್ಪರಿಗೆಗಳು ಕಾಣುತ್ತಿಲ್ಲ. ದುರ್ವಾಸನೆ ಬೀರುತ್ತಿಲ್ಲ. ಕಸದಲ್ಲಿ ಓಡಾಡಿಕೊಂಡಿರುವ ಹಂದಿ, ನಾಯಿಗಳ ಕಾಟವು ಕಾಣುತ್ತಿಲ್ಲ. ಇದಕ್ಕೆ ನಗರಸಭೆ ಕೈಗೊಂಡಿರುವ ಕಾರ್ಯವೇ ಸಾಕ್ಷಿ.

Advertisement

ನಗರದ ಒಟ್ಟು 27 ವಾರ್ಡ್ ಗಳಲ್ಲಿ ಟಂಟಂಗಳ ಮೂಲಕ ಕಸ ವಿಲೇವಾರಿ ಮಾಡುತ್ತಿರುವ ನಗರಸಭೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ನಗರದ ಬಹುತೇಕ ಬಡಾವಣೆಗಳಲ್ಲಿ ಪೌರಕಾರ್ಮಿಕರ ಕೊರತೆಯಿಂದ ಕಸ ವಿಲೇವಾರಿ ಸಮಸ್ಯೆ ತಲೆದೋರಿತ್ತು. ಪೌರಾಯುಕ್ತ ಬಿ.ಬಸಪ್ಪ ಹೊರಗುತ್ತಿಗೆಯಲ್ಲಿ 48 ಕಾರ್ಮಿಕರನ್ನು ತೆಗೆದುಕೊಂಡಿದ್ದಾರೆ. ಅದರಲ್ಲಿ 26 ಜನ ಲೋಡರ್, 14 ಜನ ಚಾಲಕರು, ಮೂವರು ಮೇಲ್ವಿಚಾರಕರು, ಇಬ್ಬರು ಸೆಕ್ಯೂರಿಟಿ ಗಾರ್ಡ್‌, ಒಬ್ಬ ಜೆಸಿಬಿ ಚಾಲಕ ಹಾಗೂ 45 ಜನ ನಗರಸಭೆ ಪೌರ ಕಾರ್ಮಿಕರನ್ನು ಬಳಸಿಕೊಂಡು ನಗರದ ಚರಂಡಿ ಹಾಗೂ ಕಸದ ತೊಟ್ಟಿಗಳನ್ನು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ.

ನಗರ ಸಭೆಯಲ್ಲಿ ಮೂಲೆ ಗುಂಪಾಗಿರುವ ಟಂಟಂಗಳನ್ನು ಬಳಸಿಕೊಂಡು ಕಸ ಸಂಗ್ರಹ ಮಾಡುತ್ತಿರುವುದರಿಂದ ಪ್ರತಿ ಬಡಾವಣೆಗಳಲ್ಲಿಯೂ ಕಸದ ಸಮಸ್ಯೆ ದೂರವಾಗಿದೆ. ಬೆಳಗ್ಗೆ 6:00ಕ್ಕೆ ಪೌರಕಾರ್ಮಿಕರು ಕಸ ವಿಲೇವಾರಿ ಮಾಡುವ ಟಂಟಂಗಳನ್ನು ಬಡಾವಣೆಗಳಲ್ಲಿ ತಂದ ಕೂಡಲೇ ನಿವಾಸಿಗಳು ಕಸ ಹಾಕುತ್ತಿದ್ದಾರೆ. ನಂತರ ನಗರಸಭೆ ಟ್ರ್ಯಾಕ್ಟರ್‌ಗಳ ಮೂಲಕ ಕಸವನ್ನು ನೇರವಾಗಿ ನಗರ ಹೊರವಲಯದ ಭಂಕೂರ ಗ್ರಾಮದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗುತ್ತಿದೆ.

ಕಸವಿಲೇವಾರಿ ಮಾಡಲು ಮೂಲೆ ಸೇರಿದ್ದ 10 ವಾಹನಗಳಲ್ಲಿ ಐದು ವಾಹನ ಬಳಕೆ ಮಾಡುತ್ತಿರುವುದರಿಂದ ನಗರದಲ್ಲಿ ರಸ್ತೆಗಳ ಪಕ್ಕದಲ್ಲಿ ವಿವಿಧ ಬಡಾವಣೆಗಳಲ್ಲಿ ಸಂಗ್ರಹವಾಗುತ್ತಿದ್ದ ಕಸ ಸದ್ಯ ಮಾಯವಾಗುತ್ತಿದೆ. ಅಲ್ಲದೇ ಸಾರ್ವಜನಿಕರು ರಸ್ತೆ ಬದಿಯಲ್ಲಿ ಕಸ ಚೆಲ್ಲುವುದನ್ನು ಕಡಿಮೆ ಮಾಡಿದ್ದಾರೆ. ಅಲ್ಲದೇ ನಗರಸಭೆಯಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ನೈರ್ಮಲ್ಯ ಹಾಗೂ ಪರಿಸರ ಅಭಿಯಂತರ ಅಭಯಕುಮಾರ ತಿಳಿಸಿದ್ದಾರೆ.

ಪೌರ ಕಾರ್ಮಿಕರ ಕೊರತೆಯಿಂದ ತಲೆದೋರಿದ್ದ ಸಮಸ್ಯೆಯಿಂದ ನಗರದಲ್ಲಿ ಸ್ವಚ್ಛತೆ ಮಾಯವಾಗಿತ್ತು. ಈಗ ಹೊರಗುತ್ತಿಗೆ ಮೂಲಕ ಕಾರ್ಮಿಕರನ್ನು ತೆಗೆದುಕೊಂಡು ಸುಮಾರು ಎರಡ್ಮೂರು ವರ್ಷಗಳಿಂದ ಸಂಗ್ರಹವಾದ ಕಸ ವಿಲೇವಾರಿ ಮಾಡುತ್ತಿದ್ದೇವೆ. ಜನವರಿ ಮೊದಲನೇ ವಾರದಲ್ಲಿ ಮನೆಮನೆಗೆ ತಳ್ಳೋ ಗಾಡಿ ಬಳಸಿಕೊಂಡು ಕಸ ಸಂಗ್ರಹ ಮಾಡಲಾಗುತ್ತದೆ. ಗೃಹ ಬಳಕೆ ಪ್ಲಾಸ್ಟಿಕ್‌, ಒಣ ಕಸ ರಸ್ತೆ ಮೇಲೆ ಎಸೆಯುವುದನ್ನು ಮಾಡದೇ ಸಾರ್ವಜನಿಕರು ಮನೆ ಹತ್ತಿರ ಬರುವ ವಾಹನದಲ್ಲಿ ಹಾಕಬೇಕು. ನಗರದ ಅಂದ ಹೆಚ್ಚಿಸುವ ಜವಾಬ್ದಾರಿ ನಮ್ಮ ಹೊಣೆ. ಇದಕ್ಕೆ ಸಾರ್ವಜನಿಕರ ಸಹಕಾರ ಮುಖ್ಯ.
. ಬಿ. ಬಸಪ್ಪ, ನಗರಸಭೆ ಪೌರಾಯುಕ್ತ 

Advertisement

ನಗರದಲ್ಲಿ ಎಲ್ಲಿ ನೋಡಿದರೂ ಕಸ ತುಂಬಿಕೊಂಡಿದ್ದ ಚರಂಡಿಗಳು ಸಿಗುತ್ತಿದ್ದವು. ಈಗ ನಗರಸಭೆಯವರು ಹೊರಗುತ್ತಿಗೆ ಮೂಲಕ ಕಾರ್ಮಿಕರನ್ನು ತೆಗೆದುಕೊಂಡು ಸ್ವಚ್ಛತೆ ನಡೆಸಿದ್ದಾರೆ. ಇದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜನರು ತಮ್ಮ ಮನೆ ಕಸವನ್ನು ರಸ್ತೆಗೆ, ಚರಂಡಿಯೊಳಗೆ ಎಸೆಯದೇ ದಿನಾಲೂ ಕಸ ಸಂಗ್ರಹಣೆ ಮಾಡಲು ಬರುವ ವಾಹಗಳಲ್ಲಿ ಹಾಕಿ. ನಗರಸಭೆ ಕಾರ್ಯಕ್ಕೆ ಸಹಕಾರ ನೀಡಿ.
.ಡಾ| ಅಹ್ಮದ್‌ ಪಟೇಲ್‌, ನಗರಸಭೆ ಸದಸ್ಯ

ಮಲ್ಲಿನಾಥ ಜಿ. ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next