Advertisement

“ಅಮೂಲ್ಯ ಸಮಯ ಗಂಭೀರ ಚರ್ಚೆ ಇಲ್ಲದೆ ಹಾಳು’

12:32 PM Feb 04, 2017 | Team Udayavani |

ಮೈಸೂರು: ಶಾಸನ ಸಭೆಗಳಲ್ಲಿ ಗಂಭೀರ ವಿಷಯಗಳ ಚರ್ಚೆ ನಡೆಯುತ್ತಿಲ್ಲ. ಬದಲಿಗೆ ಪ್ರತಿಷ್ಠೆಗೆ ಬಿದ್ದು ಸಣ್ಣಪುಟ್ಟ ವಿಷಯಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿರುವುದರಿಂದ ಸದನದ ಸಮಯ ಹಾಳಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಎಚ್‌.ಕೆ.ಪಾಟೀಲ್‌ ಬೇಸರ ವ್ಯಕ್ತಪಡಿಸಿದರು.

Advertisement

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಮೈಸೂರಿನ ಅಬ್ದುಲ್‌ ನಜೀರ್‌ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಯಲ್ಲಿ ಆಯೋಜಿಸಿರುವ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಪರಿಚಯಾತ್ಮಕ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ವಿಧಾನಪರಿಷತ್‌ ಸದಸ್ಯರಿಗೆ ಮಾಹಿತಿ ಕೊರತೆ ಇದ್ದರೆ, ಸರ್ಕಾರಕ್ಕೆ ವಾಸ್ತವ ಸ್ಥಿತಿಯ ಕೊರತೆ ಇದೆ ಎಂದ ಅವರು, ಈ ರೀತಿಯ ವಾಸ್ತವ ಸ್ಥಿತಿಯ ಕೊರತೆಯಿಂದ ಸರ್ಕಾರ ಯಾವುದೇ ಕಾಯಿದೆ, ನಿಯಮಾವಳಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ. ವಾಸ್ತವ ಸ್ಥಿತಿಯ ಅರಿವಿನ ಕೊರತೆಯಿಂದ ಯಾರ ಮಾತಿಗೂ ಬಲ ಬರುವುದಿಲ್ಲ.

ಸಣ್ಣಪುಟ್ಟ ವಿಷಯಗಳೇ ಸದನದ ಸಮಯವನ್ನು ಹಾಳು ಮಾಡುವ ಸಂದರ್ಭದಲ್ಲಿ ಸಭಾಪತಿಯವರು ಮತ್ತು ಸಭಾಧ್ಯಕ್ಷರು ಸಂಯಮ ಕಳೆದುಕೊಂಡರೆ ಎಂತಹ ಗಂಭೀರ ವಿಷಯವಿದ್ದರೂ ಸದನದಲ್ಲಿ ಚರ್ಚೆ ನಡೆಸಲು ಸಾಧ್ಯವಾಗದು ಎಂದು ಹೇಳಿದರು. ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಓಂಬುಡ್ಸ್‌ಮನ್‌ ನೇಮಕ ಮಾಡಿದರೂ ಸೂಕ್ತ ನಿಯಮಾವಳಿ ರೂಪಿಸಿರಲಿಲ್ಲ.

ನಮ್ಮ ಸರ್ಕಾರ ಹೊಸದಾಗಿ 60 ನಿಯಮಾವಳಿ ರೂಪಿಸುತ್ತಿದ್ದು, ಈ ಪೈಕಿ 30 ನಿಯಮಾವಳಿ ಪ್ರಕಟಿಸಿ, ಆಕ್ಷೇಪಣೆ ಆಹ್ವಾನಿಸಲಾಗಿದೆ. ಇನ್ನು 10 ನಿಯಮಾವಳಿಗಳು ಪ್ರಕಟಣೆ ಹಂತದಲ್ಲಿವೆ, ಇನ್ನುಳಿದ 20 ನಿಯಮಾವಳಿಗಳನ್ನು ಸಂಸದೀಯ ವ್ಯವಹಾರಗಳ ಇಲಾಖೆ ರೂಪಿಸುತ್ತಿದ್ದು, ಮಾರ್ಚ್‌ 15ರೊಳಗೆ ಈ ಎಲ್ಲಾ ನಿಯಮಾವಳಿಗಳನ್ನು ಜಾರಿಗೊಳಿಸುವುದಾಗಿ ತಿಳಿಸಿದರು.

Advertisement

ಶೇ.80 ರಷ್ಟು ಯೋಜನೆಗಳು ನಮ್ಮ ಇಲಾಖೆಯಡಿಯೇ ಬರುವುದರಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಮೇಲಿನ ಚರ್ಚೆಗೆ ವಿಧಾನಪರಿಷತ್‌ನಲ್ಲಿ ಸಭಾಪತಿಗಳು ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಇಲಾಖೆಯಲ್ಲಿ ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶವನ್ನು ಅಳವಡಿಕೆ ನಂತರ ಸಾಕಷ್ಟು ಭ್ರಷ್ಟಾಚಾರ ಕಡಿಮೆಯಾಗಿದೆ. ಈಗ ಕೆಲಸ ಆಗದೆ ಬಿಲ್‌ ಮಾಡುವಂತಿಲ್ಲ. ಕೆಲಸ ಆಗಿರುವ ಛಾಯಾಚಿತ್ರವನ್ನು ಈ ತಂತ್ರಾಂಶದಲ್ಲಿ ಸೇರಿದ ಮೇಲೆಯೇ ಬಿಲ್‌ ಮಂಜೂರಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಮಾತನಾಡಿ, ಶಾಸಕರೆಂದರೆ ಮೇಲ್ಮಟ್ಟದವರೆಂದು ತಿಳಿದುಕೊಂಡಿದ್ದೇವೆ. ಆದರೆ, ನಾವುಗಳೂ ಸಹ ತಿಳಿದುಕೊಳ್ಳುವುದು ಬಹಳ ಇದೆ. ಇಂದು ನಮ್ಮ ಹಕ್ಕಿನ ಬಗ್ಗೆ ಮಾತನಾಡುತ್ತೇವೇಯೇ ವಿನಾ ಕರ್ತವ್ಯದ ಬಗ್ಗೆ ಮಾತನಾಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎರಡು ವರ್ಷಗಳ ಹಿಂದೆ ವಿಧಾನಪರಿಷತ್‌ನಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಮೂರುವರೆ ಗಂಟೆಗಳ ಕಾಲ ಚರ್ಚೆ ಮಾಡಿರುವುದನ್ನು ಪ್ರಶಂಸಿಸಿ ಯುನೆಸ್ಕೋ ತಮ್ಮ ಕಚೇರಿಗೆ ಪತ್ರ ಬರೆದು, ಮಕ್ಕಳ ಹಕ್ಕುಗಳ ಬಗ್ಗೆ ಚುನಾಯಿತ ಪ್ರತಿನಿಧಿಗಳು ಇಷ್ಟು ದೊಡ್ಡ ಚರ್ಚೆ ನಡೆಸಿರುವುದು ಶ್ಲಾಘನೀಯ ಎಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಸ್ತುತ ಸಂದರ್ಭದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ, ಬರಗಾಲ, ರೈತರ ಸಾಲ ಮುಂತಾದ ವಿಷಯ ಚರ್ಚೆಗೆ ಬರುತ್ತಿದೆ ಎಂದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಾಗಲಾಂಬಿಕಾ ದೇವಿ, ನಿರ್ದೇಶಕ ಪ್ರಾಣೇಶರಾವ್‌ ಹಾಜರಿದ್ದರು.

ವಿಧಾನಪರಿಷತ್‌ನ 75 ಮಂದಿ ಸದಸ್ಯರಲ್ಲಿ 25 ಮಂದಿಯ ಒಂದು ಗುಂಪಿನಂತೆ ಮೂರು ತಂಡದಲ್ಲಿ ಕಾರ್ಯಾಗಾರ ಆಯೋಜಿಸಲಾಗುತ್ತಿದೆ. ಮೊದಲ ಕಾರ್ಯಾಗಾರಕ್ಕೆ ಏಳು ಮಂದಿ ಬಂದಿರುವುದು ಸ್ವಾಗತಾರ್ಹ. ಎರಡು ದಿನಗಳ ಕಾಲ ಇವರಿಗೆ ಪಂಚಾಯತ್‌ ರಾಜ್‌ ಇಲಾಖೆ ಕುರಿತು ಮಾಹಿತಿ ನೀಡಲಾಗುವುದು. ಉಳಿದವರಿಗೆ ಬೆಂಗಳೂರು ಸೇರಿದಂತೆ ವಿವಿಧೆಡೆ ನಡೆಯುವ ಕಾರ್ಯಾಗಾರದಲ್ಲಿ ಭಾಗವಹಿಸುವ ಅವಕಾಶ ಇದೆ.
-ಎಚ್‌.ಕೆ. ಪಾಟೀಲ್‌, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ.

ಬಜೆಟ್‌ ಮೇಲಿನ ಚರ್ಚೆ ವೇಳೆ ತುಂಬಾ ಬೇಸರವಾಗುತ್ತದೆ. ಒಂದು ವಿಷಯದ ಬಗ್ಗೆ ತಯಾರಾಗಿ ಬಂದು ಮಾತನಾಡುವ ಬದಲಿಗೆ ಇಡೀ ಬಜೆಟ್‌ ಅನ್ನೇ ಟೀಕೆ ಮಾಡಲಾಗುತ್ತಿದೆ. 8ರಿಂದ 10 ನಿಮಿಷದೊಳಗೆ ಎಲ್ಲವನ್ನೂ ಹೇಳುವಂತೆ ತಯಾರಾಗಿ ಬಂದರೆ ಸದನದ ಚರ್ಚೆಯ ಗುಣಮಟ್ಟ ಹೆಚ್ಚುತ್ತದೆ.
-ಡಿ.ಎಚ್‌.ಶಂಕರಮೂರ್ತಿ, ಸಭಾಪತಿ, ವಿಧಾನಪರಿಷತ್‌.

Advertisement

Udayavani is now on Telegram. Click here to join our channel and stay updated with the latest news.

Next