Advertisement
ಏನಿದು ಯೂನಿಯನ್ ಕಾರ್ಬೈಡ್ ತ್ಯಾಜ್ಯ ಅನಿಲ?ಯೂನಿಯನ್ ಕಾರ್ಬೈಡ್ ಇಂಡಿಯಾ ಲಿ.(ಯುಸಿಐಎಲ್) ಎಂಬುದು ಅಮೆರಿಕ ಮೂಲದ ಸಂಸ್ಥೆಯೊಂದಕ್ಕೆ ಸೇರಿದ ಕೀಟನಾಶಕ ತಯಾರಿಕ ಕಾರ್ಖಾನೆ. ಇದು ಮಧ್ಯಪ್ರದೇಶದ ಭೋಪಾಲ್ನಲ್ಲಿದ್ದು, 40 ವರ್ಷಗಳ ಹಿಂದೆ ಭೋಪಾಲ್ನಲ್ಲಿ ಸಂಭವಿಸಿದ ಅತೀದೊಡ್ಡ ಅನಿಲ ದುರಂತಕ್ಕೆ ಈ ಕೈಗಾರಿಕೆಯಲ್ಲಿ ಸೋರಿಕೆಯಾದ ವಿಷಕಾರಿ ಅನಿಲವೇ ಕಾರಣ. ಆ ದುರಂತದ ಬಳಿಕ ಈ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚಲಾಯಿತು. ಅಂದಿನಿಂದಲೂ ಅಲ್ಲಿದ್ದ ಕೈಗಾರಿಕ ತ್ಯಾಜ್ಯ ಕಾರ್ಖಾನೆಯಲ್ಲೇ ಸಂಗ್ರಹ ವಾಗಿದೆ. ಇಷ್ಟು ವರ್ಷಗಳಿಂದ ಸಂಗ್ರಹವಾದ ಈ ತ್ಯಾಜ್ಯವನ್ನು ವಿಲೇವಾರಿ ಮಾಡಲು ಮಧ್ಯಪ್ರದೇಶ ಸರಕಾರ ಹರಸಾಹಸ ಪಡುತ್ತಿದೆ.
ಪೀಥಂಪುರದಲ್ಲಿ ವಿಲೇವಾರಿಗೆ ಸಜ್ಜು
40 ವರ್ಷಗಳಿಂದಲೂ ಕಾರ್ಖಾನೆಯಲ್ಲೇ ಉಳಿದಿರುವ ವಿಷಕಾರಿ ತ್ಯಾಜ್ಯವನ್ನು ಮಧ್ಯಪ್ರದೇಶದ ಧಾರ್ ಜಿಲ್ಲೆಯ ಪೀಥಂಪುರದಲ್ಲಿ ವಿಲೇವಾರಿ ಮಾಡಲು ರಾಜ್ಯ ಸರಕಾರ ಸಜ್ಜಾಗಿತ್ತು. ತಾಜ್ಯವನ್ನು 12 ಟ್ರಕ್ಗಳಲ್ಲಿ ಸಂಗ್ರ ಹಿಸಿ ಪೀಥಂಪುರಕ್ಕೆ ತರಲಾಗಿತ್ತು ಸಹ. ಆದರೆ ಈ ವಿಚಾರ ತಿಳಿಯುತ್ತಿ ದ್ದಂತೆಯೇ ಪೀಥಂಪುರದ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ “ಪೀಥಂಪುರ ಬಚಾವೋ’ ಎಂಬ ಸಮಿತಿಯನ್ನೂ ರಚಿಸಲಾಗಿದ್ದು, ಜನವರಿ 3ರಂದು ಪೀಥಂಪುರ ಬಂದ್ಗೆ ಕರೆ ನೀಡಲಾಗಿತ್ತು. ವಿಲೇವಾರಿ ವಿಚಾರವಾಗಿ ಸಾಕಷ್ಟು ಗಲಭೆಯುಂಟಾಗಿ, ಇಬ್ಬರು ಪ್ರತಿಭಟನಕಾರರು ಆತ್ಮಾಹುತಿಗೂ ಪ್ರಯತ್ನಿಸಿದರು. ದಿನದಿಂದ ದಿನಕ್ಕೆ ಇಲ್ಲಿ ಪ್ರತಿಭಟನೆಗಳು ಹೆಚ್ಚುತ್ತಲೇ ಇದ್ದು, ಸರಕಾರಕ್ಕೆ ಈ ಕೈಗಾರಿಕ ತ್ಯಾಜ್ಯ ವಿಲೇವಾರಿ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಈ ವಿಷಕಾರಿ ತ್ಯಾಜ್ಯಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವ ಸಾಮರ್ಥ್ಯವುಳ್ಳ ಅತ್ಯಾಧುನಿಕ ತಂತ್ರಜ್ಞಾನ ಪೀಥಂಪುರದಲ್ಲಿರುವ ಕೈಗಾರಿಕ ಪ್ರದೇಶದಲ್ಲಿದೆ. ಈ ಪ್ರದೇಶ ಬಿಟ್ಟರೆ ರಾಜ್ಯದ ಬೇರ್ಯಾವ ಕೈಗಾರಿಕ ಪ್ರದೇಶಕ್ಕೆ ಈ ತ್ಯಾಜ್ಯ ಕೊಂಡೊಯ್ದರೂ ಅದು ಮತ್ತೂಂದು ಅಪಾಯವನ್ನು ತಂದೊಡ್ಡಲಿದೆ ಎಂಬುದು ಮಧ್ಯಪ್ರದೇಶ ಸರಕಾರದ ವಾದ. ದೇಶದ ಅತ್ಯಂತ ಸ್ವತ್ಛ ನಗರ ಇಂಧೋರ್ನಿಂದ 30 ಕಿ.ಮೀ ದೂರದಲ್ಲಿ ಈ ಪೀಥಂಪುರ ಇದೆ. ಇಲ್ಲಿ 1.75 ಲಕ್ಷದಷ್ಟು ಜನಸಂಖ್ಯೆಯಿದ್ದು, ಕೈಗಾರಿಕ ಪ್ರದೇಶದಲ್ಲಿ 3 ವಿಭಾಗಗಳಲ್ಲಿ 700 ಕಾರ್ಖಾನೆಗಳಿವೆ.
ಕಾರ್ಖಾನೆಯಲ್ಲಿ 337 ಟನ್ ತ್ಯಾಜ್ಯ
ಭೋಪಾಲ್ನ ಕಾರ್ಖಾನೆಯಲ್ಲಿ ಬರೋಬ್ಬರಿ 337 ಟನ್ ತ್ಯಾಜ್ಯ ಸಂಗ್ರಹವಾಗಿತ್ತು. ಇದನ್ನು 12 ಟ್ರಕ್ಗಳಲ್ಲಿ ತುಂಬಿ ಸೀಲ್ ಮಾಡಲಾಗಿತ್ತು. ಇದಕ್ಕಾಗಿ 100 ಮಂದಿ ಕಾರ್ಮಿಕರು ಕಾರ್ಯನಿರ್ವಹಿಸಿದ್ದರು. ಬಳಿಕ 250 ಕಿ.ಮೀ.ದೂರದಲ್ಲಿರುವ ಪೀಥಂಪುರಕ್ಕೆ ಜೀರೋ ಟ್ರಾಫಿಕ್ ಮೂಲಕ ಸುಮಾರು 7 ಗಂಟೆಗಳಲ್ಲಿ ತಲುಪಿಸಲಾಗಿತ್ತು. ಈ ಕ್ಲಿಷ್ಟ ಕಾರ್ಯಾಚರಣೆಯನ್ನು ಭೋಪಾಲ್ ಅನಿಲ ದುರಂತ ಪರಿಹಾರ ಮತ್ತು ಪುನರ್ವಸತಿ ಇಲಾಖೆ ನಿರ್ವಹಣೆ ಮಾಡಿದೆ.
2015ರಲ್ಲಿ ಪರೀಕ್ಷಾರ್ಥ ವಿಲೇವಾರಿ
ಈ ಮುನ್ನ 2015ರಲ್ಲೂ ಇಲ್ಲಿನ 10 ಟನ್ನಷ್ಟು ತ್ಯಾಜ್ಯವನ್ನು ಇದೇ ಪೀಥಂಪುರದಲ್ಲಿ ವಿಲೇವಾರಿ ಮಾಡಲಾಗಿತ್ತು. ಆ ಸಂದ ರ್ಭದಲ್ಲಿ ತ್ಯಾಜ್ಯವು ಭೂಮಿ ಹಾಗೂ ನೀರಿಗೆ ಸೇರಿ ಸುತ್ತಲ ಗ್ರಾಮಗಳ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಹಾಗೂ ಮಾಲಿನ್ಯ ಉಂಟಾಗಿದೆ ಎಂದು ಕೆಲವು ಪರಿಸರವಾದಿ ಗಳು ಆರೋಪಿಸಿದ್ದರು. ಆದರೆ ಅದನ್ನು ಅಧಿಕಾರಿಗಳು ನಿರಾಕರಿಸಿದ್ದರು.
ಮ.ಪ್ರ. ಸರಕಾರಕ್ಕೆ ಹೈಕೋರ್ಟ್ ತರಾಟೆ
ದುರಂತ ನಡೆದು 40 ವರ್ಷಗಳಾದರೂ ಸರಕಾರದಿಂದ ಇನ್ನೂ ಜಡತ್ವ ನೀತಿ ಅನುಸರಣೆ ಮಾಡುತ್ತಿದೆ. ಸುಪ್ರೀಂ ಸೇರಿ ಹಲವು ಕೋರ್ಟ್ ಪದೇ ಪದೆ ಸೂಚನೆ ನೀಡಿದ್ದರೂ ರಾಜ್ಯ ಸರಕಾರ ತ್ಯಾಜ್ಯವನ್ನು ವಿಲೇವಾರಿ ಮಾಡಿಲ್ಲ ಎಂದು ಮಧ್ಯಪ್ರದೇಶದ ಹೈಕೋರ್ಟ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೇ ತಾಜ್ಯ ವಿಲೇವಾರಿಗೆ 2024ರ ಡಿ.3ರಂದು ಕಟ್ಟುನಿಟ್ಟಿನ ಆದೇಶ ನೀಡಿ, ಮುಂದಿನ 4 ವಾರಗಳ ಕಾಲಾವಕಾಶದಲ್ಲಿ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿತು. ಅದಾಗ್ಯೂ ಆದೇಶ ಪಾಲನೆಯಾಗದಿದ್ದಲ್ಲಿ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿತ್ತು. ಇಷ್ಟು ವರ್ಷವಾದರೂ ತ್ಯಾಜ್ಯ ವಿಲೇವಾರಿ ಏಕಿಲ್ಲ?
1984ರಲ್ಲಿ ಅತೀ ದೊಡ್ಡ ದುರಂತ ಸಂಭವಿಸುತ್ತಿದ್ದಂತೆ ಯೂನಿಯನ್ ಕಾರ್ಬೈಡ್ ಕಾರ್ಖಾನೆಯನ್ನು ಮುಚ್ಚಲಾಯಿತು. ಅಲ್ಲಿರುವ ತ್ಯಾಜ್ಯವನ್ನು ಹೊರತೆಗೆಯುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅಲ್ಲದೇ ಕಾನೂನು ಹೋರಾಟಗಳೂ ಸಾಕಷ್ಟು ನಡೆಯುತ್ತಿತ್ತು. ಜತೆಗೆ ಅದನ್ನು ಅಲ್ಲಿಂದ ಹೊರತೆಗೆದರೂ ವಿಲೇವಾರಿ ಎಲ್ಲಿ ಎಂಬ ಪ್ರಶ್ನೆ ಇತ್ತು. ಈ ಹಲವು ಕಾರಣಗಳಿಂದ ಅಧಿಕಾರಿಗಳು ಅದರ ತಂಟೆಗೆ ಹೋಗಿರಲಿಲ್ಲ. ಅದಾಗ್ಯೂ ಈ ತ್ಯಾಜ್ಯವು ಸುತ್ತಲ ಪರಿಸರದಲ್ಲಿ ನಿಧಾನವಾಗಿ ಬೆರೆಯುತ್ತಿದ್ದು ಪರಿಸರ ಮಲಿನವಾಗುತ್ತಿದೆ ಎಂದು ಪರಿಸರವಾದಿಗಳು ಕೋರ್ಟ್ಗೆ ಅರ್ಜಿ ಸಲ್ಲಿಸುತ್ತಲೇ ಇದ್ದರು. ಸುಪ್ರೀಂ ಕೋರ್ಟ್ ಸೇರಿ ಹಲವು ಕೋರ್ಟ್ಗಳಲ್ಲಿ ಪ್ರಕರಣದ ವಿಚಾರಣೆ ನಡೆದು, ಶೀಘ್ರವಾಗಿ ವಿಲೇವಾರಿ ನಡೆಸಬೇಕೆಂದು ಅಧಿಕಾರಿಗಳಿಗೆ ಕೋರ್ಟ್ ಹೇಳಿಯೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಅಲ್ಲದೆ ಸರಕಾರ ವಿಲೇವಾರಿಗೆ ಸ್ಥಳ ನಿಗದಿ ಮಾಡಿದರೆ ಅಲ್ಲಿನ ಸ್ಥಳೀಯರ ವಿರೋಧ ವ್ಯಕ್ತವಾಗುತ್ತಿತ್ತು. ಈ ವಿರೋಧದ ನಡುವೆ ಈ ತ್ಯಾಜ್ಯ ಅಪಾಯಕಾರಿಯಲ್ಲ ಎಂದು ಒಪ್ಪಿಸಲು ಸರಕಾರ ಪ್ರಯತ್ನಿಸುತ್ತಲೇ ಇದೆ.
Related Articles
1 ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮೊದಲು ತ್ಯಾಜ್ಯ ಸುಡುವಿಕೆ
2 ಸುಟ್ಟಾಗ ಉಂಟಾಗುವ ಮಾಲಿನ್ಯ ತಡೆಗೆ 4 ಹಂತದ ಸಂಸ್ಕರಣೆ
3 ಸಂಸ್ಕರಿತ ಅನಿಲವನ್ನು ಪರೀಕ್ಷೆ ಮಾಡಿ ಬಳಿಕ ಬಿಡುಗಡೆ
4 ಸುಟ್ಟ ತ್ಯಾಜ್ಯದ ಬೂದಿಯೂ ಮತ್ತೊಮ್ಮೆ ಪರೀಕ್ಷೆ
5 ತ್ಯಾಜ್ಯ ಬೂದಿಯನ್ನು ಸಾಕಷ್ಟು ಆಳದಲ್ಲಿ ಹೂಳುವಿಕೆ
6 ಮಣ್ಣು ಅಥವಾ ನೀರಿಗೆ ಬೂದಿ ಸೇರದಂತೆ ತಡೆಯಲು ಈ ಕ್ರಮ
7 ಪ್ರಕ್ರಿಯೆ ಸುಗಮವಾಗಿ ಆದಲ್ಲಿ 3 ತಿಂಗಳಲ್ಲಿ ವಿಲೇವಾರಿ ಮುಕ್ತಾಯ
8 ಇಲ್ಲವಾದರೆ 9 ತಿಂಗಳಿಗೂ ಹೆಚ್ಚು ಕಾಲ ಬೇಕಾಗಬಹುದು
9 ಪ್ರಕ್ರಿಯೆಯಲ್ಲಿ ಭಾಗಿಯಾಗುವ ಸಿಬಂದಿ ಆರೋಗ್ಯದ ಮೇಲೆ ನಿಗಾ
10 ಮಾಲಿನ್ಯ ನಿಯಂತ್ರಣ ಮಂಡಳಿ ಉಸ್ತುವಾರಿಯಲ್ಲೇ ಪ್ರಕ್ರಿಯೆ
Advertisement
ಅನಿಲ ಸೋರಿಕೆ: ಜಗತ್ತು ಕಂಡ ಭೀಕರ ದುರಂತ1984ರ ಡಿ.2ರ ಮಧ್ಯರಾತ್ರಿ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಲ್ಲಿ ಸಂಗ್ರಹವಾಗಿದ್ದ ಅತೀ ವಿಷಕಾರಿ ಅನಿಲ ಮೀಥೈಲ್ ಐಸೋಸೈನೇಟ್(ಎಂಐಸಿ) ಸೋರಿಕೆಯಾಗಿ ಸುತ್ತಲ 8-10 ಕಿ.ಮೀ. ವ್ಯಾಪ್ತಿಯ ಗಾಳಿಯಲ್ಲಿ ಮಿಶ್ರಿತವಾಯಿತು. ಬೆಳಗಾಗುವ ವೇಳೆಗೆ ಸಾವಿರಾರು ಮಂದಿ ಉಸಿರುಕಟ್ಟಿ, ಕೆಮ್ಮಿನಿಂದ, ವಾಂತಿ ಮಾಡಿಕೊಂಡು ಹೀಗೆ ಹಲವು ಆರೋಗ್ಯ ಸಮಸ್ಯೆಯಿಂದ ಸಾವಿಗೀಡಾದರು. ಪರಿಸ್ಥಿತಿ ಏನು ಎಂದು ಅರಿತುಕೊಳ್ಳುವ ವೇಳೆಗಾಗಲೇ ಲಕ್ಷಾಂತರ ಜೀವಗಳ ದೇಹಕ್ಕೆ ಈ ವಿಷಾನಿಲ ಹೊಕ್ಕಿತ್ತು. ಇಡೀ ಊರಿಗೆ ಊರೇ ಆಸ್ಪತ್ರೆಗೆ ದೌಡಾಯಿಸಿತ್ತು. ಚಿಕಿತ್ಸೆ ನೀಡಲೂ ಸೌಲಭ್ಯ ಸಾಲದಷ್ಟು ಮಂದಿ ಆಸ್ಪತ್ರೆಯಲ್ಲಿದ್ದರು. ಸರಕಾರದ ದಾಖಲೆಯ ಪ್ರಕಾರ 5 ಲಕ್ಷಕ್ಕೂ ಹೆಚ್ಚು ಮಂದಿ ಈ ವಿಷಾನಿಲ ಸೇವನೆ ಮಾಡಿದ್ದರು. 5,000ಕ್ಕೂ ಹೆಚ್ಚು ಮಂದಿ ಮೃತಪಟ್ಟರು. ಇದು ಸರಕಾರದ ದಾಖಲೆಯಾದರೆ ಇನ್ನೂ ಕೆಲವು ಸಂಸ್ಥೆಗಳು ಹೇಳುವುದು ಈ ಸಂಖ್ಯೆಯ ದುಪ್ಪಟ್ಟು ಸಾವಾಗಿದೆ ಎಂದು. ಒಟ್ಟಿನಲ್ಲಿ ವಿಶ್ವ ಕಂಡ ಅತೀ ಕರಾಳ ಕೈಗಾರಿಕ ದುರಂತದಲ್ಲಿ ಇದು ಸಹ ಒಂದು. -ತೇಜಸ್ವಿನಿ.ಸಿ. ಶಾಸ್ತ್ರಿ