Advertisement

ಮೇವಿನ ಜಾಗದಲ್ಲಿ ತ್ಯಾಜ್ಯ

11:14 AM Apr 01, 2022 | Team Udayavani |

ಕುಂದಾಪುರ: ತಾಲೂಕಿನ ಕರ್ಕುಂಜೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಜಾನುವಾರುಗಳ ಮೇವು ತಾಣವಾದ ಚಿಟ್ಕಲ್‌ ಪಾರೆಯಲ್ಲಿ ಸ್ಥಳಿಯ ತ್ಯಾಜ್ಯ ವಿಲೇವಾರಿ ಘಟಕದವರು ತ್ಯಾಜ್ಯ ವಿಲೇವಾರಿ ಮಾಡುವುದನ್ನು ಆಕ್ಷೇಪಿಸಿದ ಸ್ಥಳೀಯರು ತ್ಯಾಜ್ಯ ವಿಲೇಗೆ ಬಂದಿದ್ದ ವಾಹನವನ್ನು ಹಿಂದಕ್ಕೆ ಕಳುಹಿಸಿದ್ದಾರೆ.

Advertisement

ಕಳೆದ ಕೆಲವು ದಿನಗಳಿಂದ ತ್ಯಾಜ್ಯ ವಿಲೇವಾರಿ ಘಟಕದವರು ಸಂಗ್ರಹಿಸಿದ ಘನ ಹಾಗೂ ದ್ರವ ತ್ಯಾಜ್ಯಗಳನ್ನು ಪಾರೆಯ ಮೇಲೆ ಸುರಿದು ಹೋಗುತ್ತಿರುವುದರಿಂದ, ಅಲ್ಲಿ ಮೇವನ್ನು ಅರಸಿ ಬರುವ ಜಾನುವಾರುಗಳು ಈ ತ್ಯಾಜ್ಯವನ್ನೆ ಆಹಾರವಾಗಿ ಬಳಸಿಕೊಳ್ಳುತ್ತಿದ್ದವು. ಜತೆಯಲ್ಲಿ ತ್ಯಾಜ್ಯ ಸಂಗ್ರಹದಿಂದ ಪರಿಸರದಲ್ಲಿ ದುರ್ವಾಸನೆಯೂ ಹರಡಿತ್ತು. ತ್ಯಾಜ್ಯ ವಿಲೇವಾರಿಗೆಂದು ಬಂದಿದ್ದ ವಾಹನದ ಕಾರ್ಯಾಚರಣೆಯನ್ನು ತಡೆದ ಸ್ಥಳೀಯರು ತ್ಯಾಜ್ಯ ವಿಲೇವಾರಿ ಘಟಕದವರ ಬೇಜವಾಬ್ದಾರಿತನದ ಬಗ್ಗೆ ಬಲವಾಗಿ ಆಕ್ಷೇಪ ವ್ಯಕ್ತಪಡಿಸಿದರು. ಪರಿಸರದ ಸ್ವತ್ಛತೆಯ ಬಗ್ಗೆ ಕಾಳಜಿ ವಹಿಸಬೇಕಾದವರೆ ಅರಣ್ಯ ಹಾಗೂ ಪರಿಸರವನ್ನು ನಾಶಪಡಿಸುತ್ತಿದ್ದಾರೆ. ಜಾನುವಾರಗಳ ಹೊಟ್ಟೆಗೆ ಪ್ಲಾಸ್ಟಿಕ್‌ ತುಂಬಿಸುತ್ತಿದ್ದಾರೆ. ಮೂಕ ಪ್ರಾಣಿಗಳು ಮೇವಿಗಾಗಿ ಬರುವ ಪವಿತ್ರ ತಾಣವನ್ನು ಮಲಿನಗೊಳಿಸುತ್ತಿದ್ದಾರೆ ಎಂದು ಆಕ್ಷೇಪಿಸಿದ ಸ್ಥಳೀಯರು, ಸಂಗ್ರಹವಾದ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಲು ಸಾಧ್ಯವಾಗದೆ ಇದ್ದಲ್ಲಿ ನಿಮ್ಮ ಮನೆ ಮುಂದೆ ರಾಶಿ ಹಾಕಿಕೊಳ್ಳಿ ಎಂದರು.

ಗ್ರಾಮ ಪಂಚಾಯತ್‌ ಅಧಿಕಾರಿಗಳು ಹೇಳಿದ್ದರಿಂದ ಇಲ್ಲಿ ತ್ಯಾಜ್ಯವನ್ನು ಸುರಿಯಲಾಗುತ್ತಿದೆ ಎಂದು ತ್ಯಾಜ್ಯ ವಿಲೇವಾರಿ ವಾಹನದೊಂದಿಗೆ ಬಂದ ಮೇಲ್ವಿಚಾರಕ ಸಮಜಾಯಿಷಿ ನೀಡಲು ಮುಂದಾದಾಗ ಅದನ್ನು ಆಕ್ಷೇಪಿಸಿದ ಅಧಿಕಾರಿ, ಮಳೆ ಬಂದ ತುರ್ತು ಸಂದರ್ಭದಲ್ಲಿ ಮಾತ್ರ ತಾತ್ಕಾಲಿಕವಾಗಿ ವಿಲೇವಾರಿಗೆ ಸೂಚನೆ ನೀಡಲಾಗಿತ್ತು. ಆದರೆ ಈ ಸ್ಥಳದಲ್ಲಿ ಖಾಯಂ ವಿಲೇವಾರಿಗೆ ಹೇಳಿರಲಿಲ್ಲ ಎಂದು ಸ್ವಷ್ಟನೆ ನೀಡಿದರು.

ವಾಗ್ವಾದಕ್ಕೆ ಮುಂದಾದ ತ್ಯಾಜ್ಯ ವಿಲೇವಾರಿ ವಾಹನದೊಂದಿಗೆ ಬಂದವರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ನೆಲಕ್ಕೆ ಸುರಿದ ತ್ಯಾಜ್ಯವನ್ನು ಮರಳಿ ವಾಹನಕ್ಕೆ ತುಂಬಿಸಿ, ವಾಹನವನ್ನು ಹಿಂದಕ್ಕೆ ಕಳುಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next