ಮುಂಬೈ: ಭಾರತದ ಪ್ರಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾಗೆ ಈಗ 34 ವರ್ಷ. ತಮ್ಮ ವೃತ್ತಿಬದುಕಿನ ಏರುಕಾಲದಲ್ಲಿ ಅವರು ಆಟದೊಂದಿಗೆ ಸೌಂದರ್ಯದಿಂದಲೂ ಜನಪ್ರಿಯರಾಗಿದ್ದರು. ಅಂತಹ ಆಟಗಾರ್ತಿಗೆ ಮಗುವಿಗೆ ಜನ್ಮ ನೀಡಿದ ನಂತರ, ತಮ್ಮ ಮುಂದಿನ ಟೆನಿಸ್ ಭವಿಷ್ಯದ ಬಗ್ಗೆಯೇ ಗೊಂದಲವುಂಟಾಗಿತ್ತಂತೆ! ತಾನು ಮತ್ತೆ ಅಂಗಣಕ್ಕಿಳಿಯುತ್ತೇನೋ ಇಲ್ಲವೋ ಎಂದು ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.
ಅವರ ಅಂತರಂಗದ ಮಾತುಗಳು ಹೊರಹೊಮ್ಮಿದ್ದು ಸೆರೆನಾ ವಿಲಿಯಮ್ಸ್ ಕುರಿತ ಬೀಯಿಂಗ್ ಸೆರೆನಾ ಎಂಬ ಸಾಕ್ಷ್ಯಚಿತ್ರ ನೋಡಿದ ನಂತರ. ಅವರು “ಎಲ್ಲ ತಾಯಂದರಿಗೆ ಒಂದು ಪತ್ರ’ ಬರೆದಿದ್ದಾರೆ. ಅದರಲ್ಲಿ ತಾನು ತಾಯಿಯಾಗಿ ಬಹಳ ಆನಂದ ಅನುಭವಿಸಿದ್ದೇನೆ. ಗರ್ಭಿಣಿಯಾಗಿ ಮಗು ಹೆತ್ತ ನಂತರ ಇನ್ನೂ ಯೋಗ್ಯಳಾಗಿ ಬೆಳೆದಿದ್ದೇನೆ. ಗರ್ಭವತೀಯಾಗುವುದು ಒಬ್ಬ ವ್ಯಕ್ತಿಯಾಗಿ ನಿಮ್ಮನ್ನು ಬದಲಿಸುತ್ತದೆ ಎಂದು ಸಾನಿಯಾ ಹೇಳಿದ್ದಾರೆ. ಒಂದು ಮಗುವಿನ ತಾಯಿಯಾಗಿ ಮರಳಿ ಅದೇ ರೂಪ ಪಡೆಯುವುದು, ದೈಹಿಕ ಸಾಮರ್ಥ್ಯ ಗಳಿಸುವುದು ಒಂದು ಸವಾಲು. ನಾನು ಸೆರೆನಾ ವಿಲಿಯಮ್ಸ್‌ಗೆ ನನ್ನನ್ನು ಹೋಲಿಸಿಕೊಂಡಿದ್ದೇನೆ. ಆದರೆ ನಮ್ಮ ಶರೀರ ನಂತರ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದು ಗೊತ್ತಾಗುವುದಿಲ್ಲ. ಗರ್ಭಿಣಿಯಾಗಿದ್ದಾಗ 23 ಕೆಜಿ ತೂಕ ಹೆಚ್ಚಾಗಿತ್ತು. ಅನಂತರ ಕಠಿಣ ಪರಿಶ್ರಮದಿಂದ 26 ಕೆಜಿ ತೂಕ ಇಳಿಸಿಕೊಂಡೆ ಎಂದು ಸಾನಿಯಾ ಹೇಳಿದ್ದಾರೆ.
ಸಾನಿಯಾ 2010ರಲ್ಲಿ ಪಾಕಿಸ್ತಾನಿ ಕ್ರಿಕೆಟಿಗ ಶೋಯಿಬ್ ಮಲಿಕ್‌ರನ್ನು ವಿವಾಹವಾಗಿದ್ದರು. 2018 ಅಕ್ಟೋಬರ್‌ನಲ್ಲಿ ಇಝಾನ್‌ಗೆ ಜನ್ಮನೀಡಿದ್ದರು. 2020 ಜನವರಿಯಲ್ಲಿ ಟೆನಿಸ್‌ಗೆ ಮರಳಿದ್ದ ಅವರು, ಹೋಬರ್ಟ್ ಮಹಿಳಾ ಡಬಲ್ಸ್ ಪ್ರಶಸ್ತಿಯನ್ನು ಉಕ್ರೇನ್ ಜೊತೆಗಾತಿ ನಾಡಿಯಾ ಕಿಚೆನಾಕ್ ಜೊತೆ ಸೇರಿ ಗೆದ್ದಿದ್ದರು.