ಹೊಸದಿಲ್ಲಿ /ಟೋಕಿಯೋ: ಬೆಂಗಳೂರು ಮೂಲದ ದೇಶದ ಅತೀ ದೊಡ್ಡ ಇ-ಕಾಮರ್ಸ್ ಕಂಪೆನಿ ಫ್ಲಿಪ್‌ಕಾರ್ಟ್ ಅನ್ನು ಅಮೆರಿಕದ ದೈತ್ಯ ಕಂಪೆನಿ ವಾಲ್‌ಮಾರ್ಟ್ 1 ಲಕ್ಷ ಕೋಟಿ ರೂ. ಗೆ ಖರೀದಿಸಿದೆ. ವಾಲ್‌ಮಾರ್ಟ್ ಕಂಪೆನಿ ಫ್ಲಿಪ್‌ಕಾರ್ಟ್‌ನ ಶೇ. 77 ಷೇರುಗಳನ್ನು ಖರೀದಿಸಲಿದೆ. ಇದು ಭಾರತದ ಇ- ಕಾಮರ್ಸ್ ಕ್ಷೇತ್ರದಲ್ಲೇ ಅತೀ ದೊಡ್ಡ ಸ್ವಾಧೀನ ಯೋಜನೆ. ಇದರ ಬೆನ್ನಲ್ಲೇ ಸ್ಥಾಪಕ ಸಂಸ್ಥಾ ಪಕ ಸಚಿನ್ ಬನ್ಸಾಲ್ ಫ್ಲಿಪ್‌ಕಾರ್ಟ್‌ನಿಂದ ಹೊರ ನಡೆದಿದ್ದಾರೆ. ಹಾಗೆಯೇ ಸಾಫ್ಟ್ಬ್ಯಾಂಕ್ ಕೂಡ ತನ್ನ ಶೇ. 20 ಷೇರುಗಳನ್ನು ಮಾರಿದೆ. ಇದರ ಬದಲಾಗಿ ಗೂಗಲ್ ಮಾತೃಸಂಸ್ಥೆ ಅಲ್ಫಾಬೆಟ್ ಫ್ಲಿಪ್‌ಕಾರ್ಟ್‌ನಲ್ಲಿ ಶೇ. 15 ಹೂಡಿಕೆ ಮಾಡುವ ಸಂಭವವಿದೆ.
ಡೀಲ್ ಮುಗಿಯುತ್ತಿದ್ದಂತೆ ಫ್ಲಿಪ್‌ಕಾರ್ಟ್‌ನಲ್ಲಿ 13 ಸಾವಿರ ಕೋಟಿ ರೂ. ಹೆಚ್ಚುವರಿ ಹೂಡಿಕೆ ಮಾಡುವುದಾಗಿ ವಾಲ್‌ಮಾರ್ಟ್ ಹೇಳಿದೆ. ಸದ್ಯ ಒಪ್ಪಂದ ಅಂತ್ಯಗೊಳಿಸಲಾಗಿದ್ದು, ಇದಕ್ಕೆ ಭಾರತದ ಸ್ಪರ್ಧಾತ್ಮಕ ಆಯೋಗ ಒಪ್ಪಿಗೆ ನೀಡಬೇಕಾಗಿದೆ. ಇದು ಪೂರ್ಣಗೊಂಡ ಅನಂತರ ಸಂಪೂರ್ಣವಾಗಿ ವಾಲ್‌ಮಾರ್ಟ್ ಸ್ವಾಧೀನ ಮಾಡಿಕೊಳ್ಳಲಿದೆ.
ಉಳಿದ ಶೇ. 23ರಷ್ಟು ಷೇರುಗಳನ್ನು ಫ್ಲಿಪ್‌ಕಾರ್ಟ್ ಸಹಸಂಸ್ಥಾಪಕ ಬಿನ್ನಿ ಬನ್ಸಾಲ್, ಟೆನ್ಸೆಂಟ್, ಟೈಗರ್ ಗ್ಲೋಬಲ್ ಮತ್ತು ಮೈಕ್ರೋಸಾಫ್ಟ್ ಹೊಂದಿರಲಿದೆ. ಮತ್ತೋರ್ವ ಸಹಸಂಸ್ಥಾಪಕ ಸಚಿನ್ ಬನ್ಸಾಲ್ ಒಪ್ಪಂದ ಅಂತಿಮಗೊಂಡ ಅನಂತರ ಕಂಪೆನಿಯಿಂದ ಹೊರಬರಲಿದ್ದಾರೆ. ಈಗಿರುವಂತೆಯೇ ಎರಡೂ ಕಂಪೆನಿಗಳು ಪ್ರತ್ಯೇಕ ಬ್ರಾಂಡ್‌ನಡಿಯಲ್ಲೇ ಮುಂದುವರಿಯಲಿವೆ. ಫ್ಲಿಪ್‌ಕಾರ್ಟ್ ಭಾರತದಲ್ಲೇ ಪ್ರತ್ಯೇಕ ಆಡಳಿತ ಮಂಡಳಿ ಹೊಂದಲಿದ್ದು ಇದಕ್ಕೆ ಶೇ.5.5 ಷೇರು ಹೊಂದಿರುವ ಬಿನ್ನಿ ಬನ್ಸಾಲ್ ಅಧ್ಯಕ್ಷರಾಗಲಿದ್ದಾರೆ. ಹಾಗೆಯೇ ಕ್ರಿಶ್ ಅಯ್ಯರ್ ಅವರು ನೂತನ ಸಿಇಒ ಆಗಲಿದ್ದಾರೆ.
ಗ್ರಾಹಕರಿಗೇನು ಲಾಭ?
ದೇಶದಲ್ಲಿ ಒಟ್ಟು ವ್ಯಾಪಾರಕ್ಕೆ ಹೋಲಿಸಿದರೆ ಇ-ಕಾಮರ್ಸ್‌ನ ವಹಿವಾಟು ಶೇ. 15 ಆಗಿದೆ. ಈ ಪ್ರಮಾಣವನ್ನು ಹೆಚ್ಚಿಸಲು ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್ ಪ್ರಯತ್ನಿಸುತ್ತಲೇ ಇವೆ. ಹೆಚ್ಚು ಗ್ರಾಹಕರನ್ನು ಆಕರ್ಷಿಸಲು ಸಹಜ ವಾಗಿಯೇ ರಿಯಾಯಿತಿ ಗಳನ್ನು ನೀಡಬೇಕಿರುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಇನ್ನಷ್ಟು ರಿಯಾಯಿತಿ ಗಳು ಹಾಗೂ ಕಡಿಮೆ ದರದಲ್ಲಿ ಸಾಮಗ್ರಿಗಳು ಲಭ್ಯವಾಗುವ ನಿರೀಕ್ಷೆಯಿದೆ. ವರ್ಷಾಂತ್ಯದಲ್ಲಿ ಒಪ್ಪಂದ ಅಂತಿಮಗೊಂಡ ಬಳಿಕ ಅಮೆಜಾನ್ ಜತೆಗಿನ ಪೈಪೋಟಿ ಹೆಚ್ಚಲಿದೆ.