ವಾಡಿ: ಪಟ್ಟಣದಲ್ಲಿರುವ ಸರಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೋಮವಾರ ಮಧ್ಯಾಹ್ನ ದಿಢೀರ್ ಭೇಟಿ ನೀಡಿದ ಪುರಸಭೆ ಸದಸ್ಯ ಕಾಂಗ್ರೆಸ್‌ನ ದೇವಿಂದ್ರ ಕರದಳ್ಳಿ ನೇತೃತ್ವದ ಪರಿಶೀಲನಾ ತಂಡ, ಆಸ್ಪತ್ರೆ ದುಸ್ಥಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ಆರೋಗ್ಯ ಕೇಂದ್ರದಲ್ಲಿ ಅನಾರೋಗ್ಯದಿಂದ ನರಳುತ್ತಿದ್ದ ರೋಗಿಗಳಿಗೆ ಚಿಕಿತ್ಸೆ ನೀಡಲು ಮಧ್ಯಾಹ್ನದ ನಂತರ ಯಾವೊಬ್ಬ ವೈದ್ಯರಿಲ್ಲದಿರುವುದು ಜನಪ್ರತಿನಿ ಧಿಗಳ ಆಕ್ರೋಶಕ್ಕೆ ಕಾರಣವಾಯಿತು. ಚಿಕಿತ್ಸಾ ಕೋಣೆ, ಔಷಧ ಕೇಂದ್ರ, ಚುಚ್ಚುಮದ್ದು ಕೋಣೆ, ಕ್ಷ-ಕಿರಣ, ರಕ್ತ ಪರೀಕ್ಷೆ ಹಾಗೂ ಒಳ ರೋಗಿಗಳ ಕೋಣೆಗಳಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳ ಅನುಪಸ್ಥಿತಿ ಕಂಡು ಸಿಡಿಮಿಡಿಗೊಂಡರು.
ನಿರ್ವಹಣೆಯಿಲ್ಲದೆ ಗಬ್ಬೆದ್ದ ಶೌಚಗೃಹ ಕಂಡು ಅಸಮಾಧಾನಗೊಂಡರು. ಈ ವೇಳೆ ದೂರವಾಣಿ ಮೂಲಕ ಜಿಲ್ಲಾ ವೈದ್ಯಾಧಿ ಕಾರಿ ಸಂಪರ್ಕಿಸಿ, ಆಸ್ಪತ್ರೆ ದುಸ್ಥಿತಿ ವಿವರಿಸಿದ ಕರದಳ್ಳಿ, ಸಮುದಾಯ ಆರೋಗ್ಯ ಕೇಂದ್ರಲ್ಲಿ ಐವರು ವೈದ್ಯರಿರಬೇಕು. ಒಬ್ಬ ದಂತ ವೈದ್ಯ ನೇಮಕವಾಗಿದ್ದಾರೆ. ಬೆಳಗ್ಗೆ ಇದ್ದು ಮಧ್ಯಾಹ್ನ ಇರುವುದಿಲ್ಲ.
ನಾಲ್ಕು ವೈದ್ಯರ ಹುದ್ದೆಗಳು ಖಾಲಿ ಇವೆ. ವೈದ್ಯಕೀಯ ಸಿಬ್ಬಂದಿಗಳ ಕೊರತೆಯಿದೆ. ಮಾತ್ರೆ ಮತ್ತು ಔಷಧ ವಿತರಕರು ಮಧ್ಯಾಹ್ನ ಇರುವುದಿಲ್ಲ. ಶಸ್ತ್ರಚಿಕಿತ್ಸೆಗೆ ಒಳಗಾದ ಬಾಣಂತಿಯರ ಆರೋಗ್ಯದ ಸ್ಥಿತಿಗತಿ ಕೇಳ್ಳೋರಿಲ್ಲ. ರೋಗಿಗಳಿಗೆ ಕುಡಿಯುವ ನೀರಿನ ಸೌಲಭ್ಯವಿಲ್ಲ. ನಾಯಿ ಕಡಿತದ ಔಷಧವಿಲ್ಲದೆ ಗೋಳಾಡುವಂತಾಗಿದೆ.
ಇಲ್ಲಿ ಕೇವಲ ಪ್ರಾಥಮಿಕ ಚಿಕಿತ್ಸೆ ಮಾತ್ರ ಲಭ್ಯವಾಗುತ್ತಿದೆ ಎಂದು ದೂರಿದರು. ಮಂಗಳವಾರ ತಾವು ಆಸ್ಪತ್ರೆಗೆ ಭೇಟಿ ನೀಡಿ ಇಲ್ಲಿನ ಸಮಸ್ಯೆ ಅರಿತುಕೊಳ್ಳಬೇಕು. ನಿರ್ಲಕ್ಷ ವಹಿಸಿದರೆ ಆಸ್ಪತ್ರೆ ಎದುರು ಧರಣಿ ಕೂಡುವುದಾಗಿ ಹೇಳಿದರು.
ಪುರಸಭೆ ಸದಸ್ಯರಾದ ಮಲ್ಲಯ್ಯ ಗುತ್ತೇದಾರ, ಮರೆಪ್ಪ ಭೋವಿ, ಪಕ್ಷೇತರ ಸದಸ್ಯ ಮಹಮದ್ ಗೌಸ್, ಕಾಂಗ್ರೆಸ್ ಯುವ ಮುಖಂಡರಾದ ನಾಗೇಂದ್ರ ಜೈಗಂಗಾ, ವಿಜಯಕುಮಾರ ಸಿಂಗೆ, ತುಕಾರಾಮ ರಾಥೋಡ, ರಾಜಾ ಪಟೇಲ, ಮಹಮದ ಅಶ್ರಫ್, ಸಂತೋಷ ಗುತ್ತೇದಾರ ನಿಯೋಗದಲ್ಲಿ ಇದ್ದರು.