Advertisement
ಲೇಡಿಗೋಷನ್ ಆಸ್ಪತ್ರೆಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೆನ್ಲಾಕ್ ಆಸ್ಪತ್ರೆಯಲ್ಲಿ ಸುಮಾರು 24 ಕೋಟಿ ರೂ. ವೆಚ್ಚದಲ್ಲಿ ಕ್ರಿಟಿಕಲ್ ಕೇರ್ ವಿಭಾಗ ಕಾಮಗಾರಿ ಆರಂಭವಾಗಲಿದೆ. ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಐಪಿಎಚ್‌ಎಲ್ ಪ್ರಯೋಗಾಲಯ ತೆರೆಯಲಾಗುವುದು. ಟ್ರಾಮಾ ಸೆಂಟರ್ ಲ್ಯಾಬ್-ಉಪಕರಣ ಖರೀದಿ ಮಾಡಲಾಗುವುದು. ಅಲ್ಲದೆ ಶವಾಗಾರ, ಪಾರಾ ಮೆಡಿಕಲ್ ಕಟ್ಟಡ, ಪೋಸ್ಟ್ ಮಾರ್ಟಂ ಕೊಠಡಿ, ಅಡುಗೆ ಕೋಣೆ, ಎರಡೂ ಕಟ್ಟಡದ ನಡುವಣ ಸಂಪರ್ಕಕ್ಕೆ ಸೇತುವೆ ನಿರ್ಮಾಣ ಮಾಡಲಾಗುತ್ತದೆ. ಅಂದಾಜು ಮೂಲ ಕಾಮಗಾರಿಗಳಿಗೆ ವಿವಿಧ ಸಂಸ್ಥೆಗಳ ಸಿಎಸ್‌ಆರ್ ಫಂಡ್‌ನಿಂದ ಪಡೆಯುವ ಜತೆಗೆ ಇಲಾಖೆಯಿಂದಲೂ ಅನುದಾನ ಒದಗಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಡ್ಡೂರು- ಪೊಳಲಿ ಸೇತುವೆಯನ್ನು 6.10 ಕೋ. ರೂ. ಹಾಗೂ ಉಳಾಯಿಬೆಟ್ಟು ಸೇತುವೆಯನ್ನು 5 ಕೋ. ರೂ. ವೆಚ್ಚದಲ್ಲಿ ದುರಸ್ತಿಗೊಳಿಸುವ ಬಗ್ಗೆ ಅಂದಾಜು ಪಟ್ಟಿ ತಯಾರಿಸಲಾಗಿದೆ. ಈ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿಯವರ ಜತೆಗೂ ಚರ್ಚಿಸಲಾಗಿದೆ. ಪೊಳಲಿಯಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಲು ಸುಮಾರು 60 ಕೋಟಿ ರೂ. ಅಗತ್ಯವಿದೆ. ಇದಕ್ಕೂ ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
Related Articles
ವೆನ್ಲಾಕ್ನಲ್ಲಿ ಅಗತ್ಯತೆಗೆ ಅನುಗುಣವಾಗಿ ನೂತನ ಒಪಿಡಿ ಬ್ಲಾಕ್ ಆರಂಭಿಸುವ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಕೆಎಂಸಿ ಆಸ್ಪತ್ರೆಯ ಆಡಳಿತ ವಿಭಾಗದ ಜತೆ ಮಾತುಕತೆ ನಡೆಸಲಾಗಿದೆ. ಸದ್ಯದಲ್ಲೇ ಮುಖ್ಯಮಂತ್ರಿಗಳ ಜತೆ ವಿಚಾರ ಪ್ರಸ್ತಾವಿಸಲಾಗುವುದು ಎಂದು ಹೇಳಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ| ತಿಮ್ಮಯ್ಯ, ಲೇಡಿಗೋಶನ್ ಅಧೀಕ್ಷಕ ಡಾ| ದುರ್ಗಾಪ್ರಸಾದ್, ವೆನ್ಲಾಕ್ ಅಧೀಕ್ಷಕ ಡಾ| ಶಿವಕುಮಾರ್, ಪಾಲಿಕೆ ಸದಸ್ಯರಾದ ವಿನಯರಾಜ್, ಅನಿಲ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.
Advertisement
ವೆನ್ಲಾಕ್ ನಲ್ಲಿ ಡೇ ಕೇರ್ ಕಿಮೋಥೆರಪಿ ವಿಭಾಗರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ 10 ಹಾಸಿಗೆಯ ಕಿಮೋಥೆರಪಿ ವಿಭಾಗ ತೆರೆಯಲು ರಾಜ್ಯ ಸರಕಾರ ನಿರ್ಧರಿಸಿದ್ದು, ಅದರಂತೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಆರಂಭಗೊಳ್ಳಲಿದೆ. ಈ ಸೆಂಟರ್‌ನಲ್ಲಿ ಬೆಳಗ್ಗಿನಿಂದ ಸಂಜೆಯ ಅವಧಿಯಲ್ಲಿ ಕಿಮೋಥೆರಪಿ ಸೌಲಭ್ಯ ಪಡೆಯಬಹುದು. ಜಿಲ್ಲಾಸ್ಪತ್ರೆಗಳಲ್ಲಿ ಆಂಕಾಲಜಿಸ್ಟ್‌ಗಳು ಇಲ್ಲದ ಕಾರಣ ಖಾಸಗಿ ವೈದ್ಯಕೀಯ ಕಾಲೇಜುಗಳ ಸಹಕಾರವನ್ನು ಪಡೆಯಲಾಗುತ್ತಿದ್ದು, ವೆನ್‌ಲಾಕ್‌ನಲ್ಲಿ ಯೇನೆಪೊಯ ಆಸ್ಪತ್ರೆಯ ಸಹಯೋಗದೊಂದಿಗೆ ಸೆಂಟರ್ ಕಾರ್ಯಾಚರಿಸಲಿದೆ. ಮುಖ್ಯಮಂತ್ರಿಗಳು ಮುಂದಿನ ತಿಂಗಳು ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ದಿನೇಶ್ ಗುಂಡೂರಾವ್ ಅವರು ಹೇಳಿದರು.