Advertisement

ತಪ್ಪದೇ ಮಾಡಿ ಮತದಾನ: ಇಂದು ಮತದಾನ ಹಬ್ಬ

12:44 AM Apr 18, 2019 | Team Udayavani |

ಬೆಂಗಳೂರು: ಪ್ರಜಾತಂತ್ರ ಹಬ್ಬಕ್ಕೆ ಈಗ ಕ್ಷಣಗಣನೆ. ಈ ಹಬ್ಬದಲ್ಲಿ ನಗರದ ಎಲ್ಲ ವರ್ಗದ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಒಗ್ಗೂಡಿಸುವ ಕೆಲಸ “ಉದಯವಾಣಿ’ಯಿಂದ ಕಳೆದ ಒಂದು ತಿಂಗಳು ನಡೆಯಿತು. ಗುರುವಾರ ಆ ಪ್ರಯತ್ನದ ಸಾರ್ಥಕತೆಗೆ ಸಕಾಲ.

Advertisement

ಈ ಹಬ್ಬದಿಂದ ದೂರ ಉಳಿಯಲು ನಿರ್ಧರಿಸಿದ್ದ ಮತದಾರರನ್ನು ಹತ್ತಿರಕ್ಕೆ ಕರೆತರುವ ವೇದಿಕೆಯಾಗಿ, ಮತದಾರ ಎದುರಿಸುತ್ತಿರುವ ಸಮಸ್ಯೆಗಳಿಗೆ ದನಿಯಾಗಿ, ಈ ಕ್ರಿಯೆಯಲ್ಲಿ ಸಕ್ರಿಯವಾಗಿರುವ ಸಂಘ-ಸಂಸ್ಥೆಗಳು, ವ್ಯಕ್ತಿಗಳ ಪರವಾಗಿ ತಿಂಗಳಿಂದ ನಿರಂತರವಾಗಿ ಪತ್ರಿಕೆ ಕೆಲಸ ಮಾಡಿದೆ.

ಇದಕ್ಕಾಗಿಯೇ ಪುಟ ಮೀಸಲಿಟ್ಟು, ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿತು. ಕಾರ್ಮಿಕರು, ಯುವಕರು, ಪ್ರತಿಷ್ಠಿತರು, ಮಹಿಳೆಯರು, ಅಂಗವಿಕಲರು ಸೇರಿದಂತೆ ವಿವಿಧ ವರ್ಗಗಳ ಮತದಾರರನ್ನು ಸೇರಿಸುವ ಪ್ರಯತ್ನ ಈ ಮೂಲಕ ನಡೆಯಿತು.

ನಗರದಲ್ಲಿ ಸಾಕ್ಷರರ ಸಂಖ್ಯೆ ಗಣ್ಯವಾಗಿದ್ದರೂ, ಮತದಾನ ಮಾತ್ರ ನಗಣ್ಯವಾಗಿದೆ. ಇದರಲ್ಲಿ ಅಪಾರ್ಟ್‌ಮೆಂಟ್‌ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಬಗ್ಗೆ ಬೆಳಕು ಚೆಲ್ಲಲಾಯಿತು. “ಕಡ್ಡಾಯ ಮತದಾನ ನಾವೆಲ್ಲ ಕೈಜೋಡಿಸೋಣ’ ಅಭಿಯಾನದಡಿ ವಾಸ್ತವವಾಗಿ ಒಂದು ಮತದ ಮೌಲ್ಯ,

ಮಕ್ಕಳಿಗೂ ಒಂದು ಪ್ರಣಾಳಿಕೆ ಆಗಲಿ ಎಂಬ ಬೇಡಿಕೆ, ಮತದಾನ ಜಾಗೃತಿಗೆ ಆಯೋಗ ರಚಿಸಿದ ಒಂದು ನಿಮಿಷದ ಸಿನಿಮಾ, ವೋಟಿಂಗ್‌ಗೆ ಚಕ್ಕರ್‌ ಹಾಕಿ ಔಟಿಂಗ್‌ಗೆ ಹೊರಟವರಿಗೆ ವಸತಿ ಸೌಲಭ್ಯ ನೀಡವುದಿಲ್ಲ ಎಂಬ ದಿಟ್ಟ ನಿರ್ಧಾರ ಕೈಗೊಂಡ ಅಧಿಕಾರಿಗಳು, ಮದ್ಯ ನಿಷೇಧ ಮಾಡದಿರುವ ಜನಪ್ರತಿನಿಧಿಗಳ ವಿರುದ್ಧ “ನೋಟಾ’ ಅಸ್ತ್ರಕ್ಕೆ ಮುಂದಾದ ಮಹಿಳೆಯರ ಬಗ್ಗೆ,

Advertisement

ಯುವಜನ ಆಯೋಗದ ಒತ್ತಾಯ ಮುಂದಿಟ್ಟ ಯುವಪಡೆ, ರೈತ ಮಹಿಳೆಯರಿಗೆ ಮತದಾನದ ಪಾಠ ಹೀಗೆ ಹತ್ತುಹಲವು ರೀತಿಯಲ್ಲಿ ಮತದಾರರ ಜಾಗೃತಿ ಮೂಡಿಸಲಾಯಿತು. ಮತದಾರರನ್ನು ಪ್ರೋತ್ಸಾಯಿಸಲು ಹಲವು ರೀತಿಯ ಆಫ‌ರ್‌ಗಳು, ರಿಯಾಯ್ತಿಗಳ ಬಗ್ಗೆಯೂ ಗಮನಸೆಳೆಯಲಾಯಿತು.

ಅಲ್ಲದೆ, ಶಾಂತಿಯುತ ಮತದಾನದಲ್ಲಿ ಪ್ರಮುಖ ಪಾತ್ರ ವಹಿಸುವ ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆಯೊಂದಿಗೆ ಕೈಜೋಡಿಸಿ, ನಗರದ ಪ್ರಮುಖ ಭಾಗಗಳಲ್ಲಿ ಸೈಕಲ್‌ ಜಾಥಾ ಮೂಲಕ ಅರಿವು ಕಾರ್ಯಕ್ರಮ ನಡೆಸಲಾಯಿತು. 50ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ಇದರಲ್ಲಿ ಭಾಗವಹಿಸಿದ್ದರು. ಅಲ್ಲದೆ, ಸ್ವತಃ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಅವರಿಗೆ ವಿಶೇಷ ಅತಿಥಿಯಾಗಿ ಉದಯವಾಣಿ ಪತ್ರಿಕೆ ಕಚೇರಿಗೆ ಆಹ್ವಾನಿಸಲಾಗಿತ್ತು.

ಐಪಿಎಲ್‌ ಕ್ರಿಕೆಟ್‌ ಪಂದ್ಯದಲ್ಲಿ ಒಂದೊಂದು ರನ್‌ ಕೂಡ ನಿರ್ಣಾಯಕ. ಅದೇ ರೀತಿ, ಚುನಾವಣೆಯಲ್ಲಿ ಕೂಡ ಒಂದೊಂದು ಮತವೂ ನಿರ್ಣಾಯಕವಾದುದು. ಆದ್ದರಿಂದ ತಪ್ಪದೇ ಮತ ಚಲಾಯಿಸಿ.
-ಸಂಜೀವ್‌ ಕುಮಾರ್‌, ರಾಜ್ಯ ಮುಖ್ಯ ಚುನಾವಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next