ಬೆಂಗಳೂರು: ನಗರದ ಮಾಲ್, ಕಾಲೇಜು, ಮಾರುಕಟ್ಟೆ ಸೇರಿದಂತೆ ಹೆಚ್ಚು ಜನ ಸೇರುವ ಪ್ರದೇಶಗಳಲ್ಲಿ ಮತದಾನದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಬಿಬಿಎಂಪಿ ಆಯುಕ್ತರೂ ಆಗಿರುವ ನಗರ ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವತಿಯಿಂದ ಬುಧವಾರ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಮತದಾನ ಮಹತ್ವದ ಕುರಿತು ಜನರಿಗೆ ತಿಳಿಸುವ ಉದ್ದೇಶದಿಂದ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದೇ ವೇಳೆ ಮತದಾರರ ಪಟ್ಟಿಯಿಂದ ಹೊರಗುಳಿದವರು ಪಟ್ಟಿಗೆ ಸೇರುವಂತೆಯೂ ಸಲಹೆ ನೀಡಲಾಗುವುದು ಎಂದು ಹೇಳಿದರು.
ಮತದಾರರ ಪಟ್ಟಿಗೆ ಹೆಸರು ಸೇರಿಸಲು ಏಪ್ರಿಲ್ 14ರವರೆಗೆ ಅವಕಾಶ ಕಲ್ಪಿಸಲಾಗಿದ್ದು, ಮತದಾರರ ಪಟ್ಟಿಗೆ ಸೇರಿಸಬಯಸುವವರು ಪಾಲಿಕೆಯ ವಾರ್ಡ್, ಕಂದಾಯ ಕಚೇರಿ ಅಥವಾ ವೆಬ್‌ಸೈಟ್‌ಗಳ ಮೂಲಕ ಅರ್ಜಿ ಪಡೆದು ಮತ ಪಟ್ಟಿಗೆ ಸೇರಿಸಬಹುದಾಗಿದೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯಾಗಿರುವುದನ್ನು ಸಹ ನಾಗರಿಕರು ಆನ್‌ಲೈನ್ ಮೂಲಕ ಪರಿಶೀಲಿಸಬಹುದಾಗಿದೆ ಎಂದು ಹೇಳಿದರು.
ಚುನಾವಣೆಗೆ ಏಳು ದಿನಗಳ ಮುಂಚಿತವಾಗಿ ಚುನಾವಣಾ ಸಿಬ್ಬಂದಿ ಎಲ್ಲ ಮನೆಗಳಿಗೆ ತೆರಳಿ ಭಾವಚಿತ್ರವುಳ್ಳ ಮತದಾರರ ಸ್ಲಿಪ್ ವಿತರಿಸಲಿದ್ದು, ನಗರದಲ್ಲಿ ಒಟ್ಟು 8,787 ಮತಗಟ್ಟೆಗಳ ಬಳಿ ಸಹ ಸ್ಲಿಪ್‌ಗ್ಳನ್ನು ಮತದಾರರು ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.
ಜಾಗೃತಿ ರಾಯಭಾರಿಗಳಾಗಿ: ಸ್ಕೌಟ್ಸ್ ಮತ್ತು ಗೈಡ್ಸ್ ಕೆಡೆಟ್ಸ್, ಎನ್‌ಸಿಸಿ ಸ್ವಯಂ ಸೇವಕರು, ರೇಂಜರ್ಸ್‌ಗಳು ತಮ್ಮ ವ್ಯಾಪ್ತಿಗಳಲ್ಲಿ ಮತದಾನ ಜಾಗೃತಿಯ ರಾಯಭಾಗಿಗಳಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕು. ಜತೆಗೆ ಮತದಾನ ಮಾಡುವಂತೆ ನಾಗರಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಆಯುಕ್ತರು ತಿಳಿಸಿದರು. ಈ ವೇಳೆ ನೋಡಲ್ ಅಧಿಕಾರಿ ಎಸ್.ಜಿ.ರವೀಂದ್ರ, ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಆನಂದ, ಪ್ರಾಧ್ಯಾಪಕರಾದ ವನುಜಾ, ಎಂ.ಎ.ಚಲ್ಲಯ್ಯ ಉಪಸ್ಥಿತರಿದ್ದರು.
ಇವಿಎಂ ಹ್ಯಾಕ್ ಸಾಧ್ಯವಿಲ್ಲ: ಇವಿಎಂ ಮತಯಂತ್ರಗಳನ್ನು ಹ್ಯಾಕ್ ಮಾಡಲಾಗುತ್ತದೆ ಎಂಬುದು ತಪ್ಪು ಕಲ್ಪನೆ. ಇವಿಎಂಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂಬುದ ಕುರಿತು ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಹಲವಾರು ಭಾಗಗಳಲ್ಲಿ ಅಣಕು ಮತದಾನ ಅಭಿಯಾನ ನಡೆಸಲಾಗುತ್ತಿದೆ. ಜತೆಗೆ ಜನರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ವಿವಿಪ್ಯಾಟ್‌ಗಳನ್ನು ಅಳವಡಿಸಲಾಗಿದ್ದು, ಇದರಿಂದಾಗಿ ನಾವು ಯಾವ ಪಕ್ಷಕ್ಕೆ ಮತ ಹಾಕಿದ್ದೇವೆ ಎಂಬುದು ತಿಳಿಯಲಿದೆ ಎಂದು ಮಂಜುನಾಥ ಪ್ರಸಾದ್ ಹೇಳಿದರು.