ಅಹಮ್ಮದಾಬಾದ್: ಭಯೋತ್ಪಾದಕರ ಐಇಡಿ(ಸುಧಾರಿತ ಸ್ಫೋಟಕ ಸಾಧನ)ಗಿಂತ ವೋಟರ್ ಐಡಿ(ಮತ ಗುರುತು ಚೀಟಿ) ಹೆಚ್ಚು ಶಕ್ತಿಯುತವಾದದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಗುಜರಾತ್ ನ ಅಹಮ್ಮದಾಬಾದ್ ನಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡುತ್ತ ತಿಳಿಸಿದರು.
ತೆರೆದ ಜೀಪ್ ನಲ್ಲಿ ರೋಡ್ ಶೋ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತ, ಭಯೋತ್ಪಾದಕರಿಗೆ ಐಇಡಿ ಆಯುಧವಾಗಿದೆ, ಆದರೆ ಪ್ರಜಾಪ್ರಭುತ್ವದಲ್ಲಿ ವೋಟರ್ ಐಡಿ ಶಕ್ತಿಯುತವಾದದ್ದು. ಹಾಗಾಗಿ ಐಇಡಿಗಿಂತ ವೋಟರ್ ಐಡಿ ಹೆಚ್ಚು, ಹೆಚ್ಚು ಬಲಶಾಲಿ ಅಂತ ಹೇಳುತ್ತೇನೆ ಎಂದರು.
ಬುಲೆಟ್ ಪ್ರೂಫ್ ವಾಹನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾನಿಪ್ ನಲ್ಲಿರುವ ನಿಶಾನ್ ಹೈಯರ್ ಸೆಕೆಂಡರಿ ಸ್ಕೂಲ್ ಗೆ ಆಗಮಿಸಿದ್ದು, ಈ ವೇಳೆ ಪ್ರಧಾನಿಯನ್ನು ನೋಡಲು ಜನಸಮೂಹವೇ ನೆರೆದಿತ್ತು. ಪ್ರಧಾನಿ ಸುತ್ತಮುತ್ತ ಭದ್ರತಾಪಡೆ, ಅಂಗರಕ್ಷಕರು ನಿಂತಿದ್ದರು. ಪ್ರಧಾನಿ ಮೋದಿ ಜನರತ್ತ ಕೈಮುಗಿಯುತ್ತ ಸಾಗಿದ್ದರು.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಕುಟುಂಬದವರು ಪ್ರಧಾನಿ ಮೋದಿ ಅವರನ್ನು ಬರಮಾಡಿಕೊಂಡು ಅಭಿನಂದಿಸಿದರು. ಈ ವೇಳೆ ಮೋದಿ ಅವರು ಶಾ ಅವರ ಮೊಮ್ಮಗಳನ್ನು ಎತ್ತಿಕೊಂಡು ಜನಸಮೂಹದತ್ತ ಕೈಬೀಸಿದರು. ಬಳಿಕ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದರು.