Advertisement

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

04:03 PM Apr 25, 2024 | Team Udayavani |

ನಾವು ವೋಟು ಹಾಕುತ್ತೇವೆ ನಮ್ಮ ಜನಪ್ರತಿನಿಧಿಗಳು ತಪ್ಪು ಮಾಡಿದರೆ ನಾವೇನು ಮಾಡಬೇಕು.? ಈ ಮಾತು ದೇಶದ ಪ್ರತಿಯೊಬ್ಬ ಮತದಾರನ ಮಾತು ಹೌದು.. ಪ್ರಜಾಪ್ರಭುತ್ವದಲ್ಲಿ ಇಂಥ ಮಾತುಗಳನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಮತದಾರನೇ ಮಹಾಪ್ರಭು ಎನ್ನಲಾಗುತ್ತದೆ.

Advertisement

ಅಭ್ಯರ್ಥಿಯ ಗೆಲುವಿಗೆ ಮತದಾರನ ನಿಲುವೇ ನಿರ್ಣಾಯಕ. ವೋಟು ಪಡೆದ ಗೆದ್ದ ಮಹಾಶಯ ಉನ್ನತ ಸ್ಥಾನದಲ್ಲಿ ಕುಳಿತು ಅಧಿಕಾರ ಚಲಾಯಿಸುತ್ತಾನೆ.. ರಾಜಕಾರಣದ ಚುಕ್ಕಾಣಿ ಹಿಡಿಯುತ್ತಾನೆ. ಆದರೆ ಮತದಾರ ನಿರ್ಣಾಯಕ ಎಂಬುದಂತೂ ಸತ್ಯ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಎಲ್ಲವೂ ಬದಲಾದಂತಿದೆ. ಪ್ರಜಾಪ್ರಭುತ್ವ ಪರಿಕಲ್ಪನೆ ಹುಟ್ಟು ಹಾಕಿದ ಪೂರ್ವಜರು ಬಹುಶಃ ಇಂಥದೊಂದು ಪರಿಸ್ಥಿತಿ ಎದುರಾಗಬಹುದು ಎಂದು ಊಹೆ ಕೂಡ ಮಾಡಿರಲಿಕ್ಕಿಲ್ಲ. ಮತದಾರನ ಶಕ್ತಿ ಕೇವಲ ಕಾಗದದ ಮೇಲಿನ ಹುಲಿಯಾಗಿದೆ. ಎಲ್ಲ ಶಕ್ತಿ ಸಾಮರ್ಥ್ಯಗಳು ಗೆದ್ದು ಗದ್ದುಗೆ ಏರಿದವನ ಕೈಯಲ್ಲಿದೆ. ಮತದಾರ ಅಸಹಾಯಕನಾಗಿದ್ದಾನೆ. ನಾಯಕ ವಿಜೃಂಭಿಸುತ್ತಿದ್ದಾನೆ. ಗೆದ್ದು ಬಂದಾತನ ಮನೆ ಅರಮನೆಯಾಗುತ್ತದೆ. ಆತ ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಾನೆ.

ಈ ಒಂದು ವಿಷಯ ಯಾವಾಗಲೂ ಮತದಾರರನ್ನು ಕಾಡುತ್ತಲೆ ಇರುತ್ತದೆ.. ಅಂಥ ಕ್ರಿಮಿನಲ್‌ಗ‌ಳು, ಬಾಹುಬಲಿಗಳು ಚುನಾವಣೆಯಲ್ಲಿ ಗೆಲ್ಲುವುದಾದರೂ ಹೇಗೆ? ಒಳ್ಳೆಯ ಚಾರಿತ್ರಿಕ ಹಿನ್ನೆಲೆಯಿರುವ ವ್ಯಕ್ತಿಗಳು ಚುನಾವಣೆಯಲ್ಲಿ ಸೋಲುವುದಾದರೂ ಹೇಗೆ? ಚುನಾವಣೆ ರಾಜಕೀಯದಲ್ಲಿರುವ ಭ್ರಷ್ಟತೆಯಿಂದ ಜನಸಾಮಾನ್ಯರು ಎಚ್ಚೆತ್ತುಕೊಳ್ಳುವುದಾದರೂ ಯಾವಾಗ? ಮತದಾರನ ಹೊಣೆಗಾರಿಕೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದಕ್ಕಷ್ಟೇ ಸೀಮಿತವಾಗಿ ಹೋಗಿದೆ. ಒಮ್ಮೆ ಚುನಾವಣೆ ಮುಗಿದ ಅನಂತರ ಮತದಾರರ ಏನೂ ಮಾಡಲಾಗದ ಅಸಹಾಯಕ ಸ್ಥಿತಿ ಈಗಲೂ ಇದೆ.

ನಮ್ಮ ಮುಂದಿನ ಪ್ರಶ್ನೆಯೆಂದರೆ, ಮತದಾರರ ಏನು ಮಾಡಬೇಕು.? ಯಾರಿಗೆ ವೋಟು ಹಾಕಬೇಕು? ಎಂಬುದಾಗಿದೆ. ಮತವನ್ನು ಹಾಕುವಾಗ ನಾವು ಅಭ್ಯರ್ಥಿಯ ಹಿನ್ನೆಲೆಯನ್ನು ಗಮನಿಸಬೇಕಾಗಿರುವುದು ಮುಖ್ಯ. ಅಭ್ಯರ್ಥಿಯ ಆಸ್ತಿ ಹಿನ್ನೆಲೆ, ಶೈಕ್ಷಣಿಕ ಹಿನ್ನೆಲೆ ಹಾಗೂ ಅಪರಾಧ ಹಿನ್ನೆಲೆಗಳನ್ನು ಗಮನಿಸಬೇಕಾಗುತ್ತದೆ.. ಅಭ್ಯರ್ಥಿಯು ಒಂದು ವೇಳೆ ಅಪರಾಧಿಯಾಗಿದ್ದಲ್ಲಿ ಅವನನ್ನು ಆಯ್ಕೆ ಮಾಡದೆ ಇರುವುದೇ ಉತ್ತಮ.

ಕೆಲವರು ಇರುತ್ತಾರೆ ಅಭ್ಯರ್ಥಿಯು ನಮ್ಮ ಜಾತಿಗೆ ಸೇರಿದವನು ಇವನನ್ನು ಆಯ್ಕೆ ಮಾಡಿದರೆ ನಮ್ಮ ಜಾತಿಯವನು ಅಧಿಕಾರಕ್ಕೆ ಬರುತ್ತಾನೆ ಎಂದೆಲ್ಲಾ ಯೋಚಿಸುತ್ತಾರೆ. ಇನ್ನೂ ಕೆಲವರು ರಾಜಕಾರಣಿಗಳು ಅಥವಾ ಅಭ್ಯರ್ಥಿಗಳು ನೀಡುವ ಉಡುಗೊರೆ, ಹಣ ಮತ್ತಿತರ ವಸ್ತುಗಳ ಆಮೀಷಕ್ಕೆ ಒಳಗಾಗಿ ತಮ್ಮ ಮತವನ್ನು ಮಾರಿಕೊಳ್ಳುತ್ತಾರೆ.

Advertisement

ಇದ್ಯಾವುದೇ ಆಮೀಷಕ್ಕೆ ಒಳಗಾಗದೇ ಅಭ್ಯರ್ಥಿಯ ಹಿನ್ನೆಲೆಯನ್ನು ಗಮನಿಸಿ, ಅವನು ಪ್ರಾಮಾಣಿಕನೋ, ಅವನಿಗೆ ಆಡಳಿತ ಮಾಡುವ ಸಾಮರ್ಥ್ಯ ನಿಜವಾಗಿಯೂ ಇದೆಯಾ, ಒಂದೊಮ್ಮೆ ಈ ಅಭ್ಯರ್ಥಿಯು ಆಯ್ಕೆ ಆದರೆ ನಮ್ಮ ಗ್ರಾಮ, ದೇಶ ಅಭಿವೃದ್ಧಿಯಾಗುತ್ತದೆಯೇ ಎಂಬೆಲ್ಲ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಮತದಾನ ಮಾಡಿದರೆ ಒಬ್ಬ ಉತ್ತಮ ಅಭ್ಯರ್ಥಿಯನ್ನು ಆರಿಸಬಹುದು ಎಂಬುದು ನನ್ನ ಅಭಿಪ್ರಾಯವಾಗಿದೆ.

-ಕೆ. ಎಂ. ಪವಿತ್ರಾ

ಎಂಜಿಎಂ ಕಾಲೇಜು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next