ಗುಂಡ್ಲುಪೇಟೆ: ಚುನಾವಣೆಯನ್ನು ಗೆಲ್ಲಲೇ ಬೇಕೆಂಬ ಹಠತೊಟ್ಟಿರುವ ಕಾಂಗ್ರೆಸ್, ಪ್ರತಿ ಓಟಿಗೆ ನಾಲ್ಕು ಸಾವಿರ ರೂ.ಹಂಚುತ್ತಿರುವ ಮಾಹಿತಿಯಿದೆ. ಹೀಗಾಗಿ, ಮತದಾರರು ಕಾಂಗ್ರೆಸ್‌ನಿಂದ ಹಣ ಪಡೆದು, ಬಿಜೆಪಿಗೆ ಮತ ಹಾಕಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ತಾಲೂಕಿನ ಚಿಕ್ಕಾಟಿ ಗ್ರಾಮದಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ಸಿ.ಎಸ್.ನಿರಂಜನಕುಮಾರ್ ಪರ ಚುನಾವಣಾ ಪ್ರಚಾರ ಕೈಗೊಂಡ ಅವರು, “ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕೃಪಾಪೋಷಿತ ನಾಟಕ ಮಂಡಳಿ, ಕ್ಷೇತ್ರದಲ್ಲಿ ಉಪಚುನಾವಣೆಯಲ್ಲಿ ಗೆಲ್ಲಲು
ಕಾನೂನು ಬಾಹಿರ ತಂತ್ರಗಳನ್ನು ಆರಂಭಿಸಿದೆ. ಮತವೊಂದಕ್ಕೆ ನಾಲ್ಕು ಸಾವಿರ ರೂಪಾಯಿ ನೀಡುತ್ತಿದೆ ಎಂಬ ಮಾಹಿತಿಯಿದೆ.
ಹೀಗಾಗಿ, ಕಾಂಗ್ರೆಸ್‌ನವರಿಂದ ಹಣ ಪಡೆದುಕೊಳ್ಳಿ. ಆದರೆ, ಬಿಜೆಪಿಗೆ ಮಾತ್ರ ಮತ ಹಾಕಿ’ ಎಂದರು. “ಕಾಂಗ್ರೆಸ್‌ನವರು ಹಣ ಹಂಚುತ್ತಿರುವುದು ಅವರ ಅಪ್ಪನ ಮನೆಯ ದುಡ್ಡಲ್ಲ. ಸಾರ್ವಜನಿಕರ ದುಡ್ಡು. ಜನಸಾಮಾನ್ಯರ ತೆರಿಗೆ ಹಣ. ಹೀಗಾಗಿ, ನೀವು ಹಣ ಪಡೆದುಕೊಳ್ಳಿ. ಅದರಲ್ಲಿ ತಪ್ಪೇನೂ ಇಲ್ಲ’ ಎಂದು ತಮ್ಮ ಹೇಳಿಕೆ ಸಮರ್ಥಿಸಿಕೊಂಡರು.