Advertisement

ಮರಳು ನೀತಿಗೆ ಸಂಪುಟ ಅಸ್ತು; ಕರಾವಳಿಗೆ ವಿಶೇಷ ರಿಯಾಯಿತಿ ಕಡಿಮೆ ಬೆಲೆಯಲ್ಲಿ ಲಭ್ಯ

12:32 AM Nov 09, 2021 | Team Udayavani |

ಬೆಂಗಳೂರು: ಗ್ರಾಹಕರಿಗೆ ಸುಲಭ ವಾಗಿ ಮತ್ತು ಕಡಿಮೆ ದರದಲ್ಲಿ ಮರಳು ದೊರೆಯುವಂತಾಗಲು ಮರಳು ಗಣಿಗಾರಿಕೆಯಲ್ಲಿ ಪಾರದರ್ಶಕತೆ ಹೆಚ್ಚಿ ಸಲು ರಾಜ್ಯ ಸರಕಾರ ಹೊಸ “ಮರಳು ನೀತಿ’ ಜಾರಿಗೆ ನಿರ್ಧರಿಸಿದೆ.

Advertisement

ಇದೇ ಸಂದರ್ಭದಲ್ಲಿ ಕರಾವಳಿ ಪ್ರದೇಶದಲ್ಲಿ ಸಾಂಪ್ರದಾಯಿಕ ಮರಳುಗಾರಿಕೆಗೆ ಅನುಮತಿ ನೀಡಿದೆ. ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಈ ನಿರ್ಧಾರ ಕೈಗೊಂಡಿದೆ. ಸಭೆಯ ಬಳಿಕ ಕಾನೂನು ಮತ್ತು ಸಂಸ ದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧು ಸ್ವಾಮಿ ಮಾಧ್ಯಮಗಳಿಗೆ ವಿವರ ನೀಡಿದರು.

ದರ ನಿಗದಿ
ಮೂರು ಹಂತಗಳಲ್ಲಿ ಮರಳು ಮಾರಲು ಹೊಸ ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಗ್ರಾಮ ಪಂಚಾ ಯತ್‌ ವ್ಯಾಪ್ತಿಯಲ್ಲಿ ಮರಳು ಮಾರಾಟಕ್ಕೆ ಒಂದು ಮೆಟ್ರಿಕ್‌ ಟನ್‌ಗೆ 300 ರೂ., ನದಿ ಪಾತ್ರಗಳಲ್ಲಿ ಮರಳು ತೆಗೆದು ಮಾರಲು ಪ್ರತೀ ಮೆಟ್ರಿಕ್‌ ಟನ್‌ಗೆ 700 ರೂ. ನಿಗದಿ ಮಾಡಲಾಗಿದೆ. ಈ ಮರಳನ್ನು ನಗರ ಪ್ರದೇಶ, ಪಟ್ಟಣಗಳಲ್ಲಿ ಮಾರಾಟ ಮಾಡಬಹುದಾಗಿದೆ. ಸರಕಾರಿ ಯೋಜನೆಗಳು ಮತ್ತು ಬಡವರಿಗೆ ರಿಯಾ ಯಿತಿ ದರದಲ್ಲಿ ಮರಳು ನೀಡಲೂ ಗ್ರಾ.ಪಂ. ಅಧಿಕಾರಿಗಳಿಗೆ ಅಧಿಕಾರ ನೀಡ ಲಾಗಿದೆ ಎಂದು ಸಚಿವರು ಹೇಳಿದರು.

ಗ್ರಾಮಗಳಲ್ಲಿ ತೆಗೆಯಲಾಗುವ ಮರಳಿಗೆ ಶೇ. 50ರಷ್ಟು ರಾಜಸ್ವ ಸಂಗ್ರಹಿಸಲು ಒಪ್ಪಿಗೆ ನೀಡಲಾಗಿದೆ. ಇದರಲ್ಲಿ ಶೇ. 25ರಷ್ಟು ಪಾಲನ್ನು ಸರಕಾರಕ್ಕೆ ಮತ್ತು ಉಳಿದ ರಾಜಸ್ವವನ್ನು ಗ್ರಾ.ಪಂ.ಗಳ ವ್ಯಾಪ್ತಿಯ ರಸ್ತೆಗಳು, ಮೂಲಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ಅಭಿವೃದ್ಧಿ ಚಟುವಟಿಕೆಗಳಿಗೆ ಉಪಯೋಗಿಸಬಹುದು. ಈ ಸಂಬಂಧ ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದ್ದು, ತಾಲೂಕಿ ನಲ್ಲಿ ಜಿಲ್ಲಾ ಕಂದಾಯ ಉಪ ವಿಭಾಗದ ಸಹಾಯಕ ಆಯುಕ್ತರು ಸಮಿತಿ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಮಟ್ಟ ದಲ್ಲಿ ಜಿಲ್ಲಾಧಿಕಾರಿಗಳು ಮತ್ತು ರಾಜ್ಯ ಮಟ್ಟದ ಸಮಿತಿಯಲ್ಲಿ ಮುಖ್ಯ ಕಾರ್ಯ ದರ್ಶಿ ಅಧ್ಯಕ್ಷರಾಗಿರುತ್ತಾರೆ. ಕಾನೂನು- ನಿಯಮಾ ವಳಿಗಳ ಪ್ರಕಾರ ಮರಳು ಸಾಗಣೆ ಸಂಬಂಧ ನಿಗಾ ವಹಿಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.

ಗ್ರಾ.ಪಂ. ವ್ಯಾಪ್ತಿಯ ಮರಳು ಗಣಿಗಾರಿಕೆಗೆ ಆಯಾ ಗ್ರಾ.ಪಂ.ಗೆ ಅಧಿಕಾರ ನೀಡಲಾಗುವುದು.ಹಸಿರು ನ್ಯಾಯಾಧಿಕರಣದ ನಿಯಮಾವಳಿಗಳನ್ನು ಅಳವಡಿಸಿಕೊಂಡು ಮರಳು ನೀತಿಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ. ಮರಳು ತೆಗೆಯಲು ಸಂಬಂಧಿತ ಪ್ರಾಧಿಕಾರಗಳಿಂದ ಒಪ್ಪಿಗೆ ಪಡೆಯಬೇಕಾಗಿದೆ. ಈ ಸಂಬಂಧ ಪ್ರತೀ ಹಂತದಲ್ಲಿ ಪ್ರಾಧಿಕಾರಿಗಳ ರಚನೆ ಮತ್ತು ಅಗತ್ಯ ಮಾರ್ಗಸೂಚಿಗಳನ್ನು ರಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ವಿವರಿಸಿದರು.

Advertisement

ಇದನ್ನೂ ಓದಿ:12ರ ವರೆಗೂ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

ಆದಾಯ ರಸ್ತೆ ಅಭಿವೃದ್ಧಿಗೆ
ಜತೆಗೆ ಮರಳು ಗಣಿಗಾರಿಕೆಯಿಂದ ಬಂದ ಹಣವನ್ನು ಸ್ಥಳೀಯ ರಸ್ತೆ ಅಭಿವೃದ್ಧಿಗೆ ಬಳಸಲಾಗುವುದು. ಗ್ರಾ.ಪಂ. ವ್ಯಾಪ್ತಿಯ ಮರಳು ಗಣಿಗಾರಿಕೆಯಿಂದ ಬರುವ ಹಣದಲ್ಲಿ ಶೇ. 50ರಷ್ಟು ಸ್ಥಳೀಯ ಅಭಿವೃದ್ಧಿ ಕಾರ್ಯಗಳಿಗೆ ನೀಡಲಾಗುವುದು. ಮರಳು ಸಾಗಣೆ ಮಾಡುವ ರಸ್ತೆಗಳ ಅಭಿವೃದ್ಧಿಗೆ ಶೇ. 25ರಷ್ಟನ್ನು ಬಳಸಲು ಮರಳು ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಮರಳನ್ನು ಸಂಪೂರ್ಣವಾಗಿ ಯಾವ ಪ್ರದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ತೆಗೆಯಬೇಕು ಎಂಬ ಕುರಿತು ಆಯಾ ಜಿಲ್ಲೆಗಳಿಂದ ವರದಿ ತರಿಸಿಕೊಳ್ಳಲಾಗುವುದು. ಆನ್‌ಲೈನ್‌ ಮೂಲಕವೂ ಮರಳು ಖರೀದಿಸಬಹುದು ಎಂದರು.

“ಕಿತ್ತೂರು ಕರ್ನಾಟಕ’ಕ್ಕೂ ಒಪ್ಪಿಗೆ
ದಶಕಗಳಿಂದ “ಮುಂಬಯಿ ಕರ್ನಾಟಕ’ ಎಂದು ಕರೆಯಲಾಗುತ್ತಿದ್ದ ಕರ್ನಾಟಕದ ಪ್ರದೇಶವನ್ನು ಇನ್ನು ಮುಂದೆ “ಕಿತ್ತೂರು ಕರ್ನಾಟಕ’ ಎಂದು ಸಂಪುಟ ಸಭೆ ಅಧಿಕೃತಗೊಳಿಸಿದೆ. ಈ ವ್ಯಾಪ್ತಿಯ ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಹಾವೇರಿ ಮತ್ತು ಗದಗ ಜಿಲ್ಲೆಗಳು ಇನ್ನು “ಕಿತ್ತೂರು ಕರ್ನಾಟಕ’ವಾಗಲಿದೆ. ಈ ಹಿಂದೆ ಹೈದರಾಬಾದ್‌ – ಕರ್ನಾಟಕ ಭಾಗಕ್ಕೆ “ಕಲ್ಯಾಣ ಕರ್ನಾಟಕ’ ಎಂದು ಹೆಸರಿ ರಿಸಿದ ಬಳಿಕ ಕಿತ್ತೂರು ಕರ್ನಾಟಕದ ಬೇಡಿಕೆ ಬಂದಿತ್ತು.

ನಿಯಮಗಳೇನು?
-ಗ್ರಾ.ಪಂ. ವ್ಯಾಪ್ತಿಯ ಮರಳು ಗಣಿಗಾರಿಕೆಗೆ ಆಯಾ ಗ್ರಾ.ಪಂ.ಗಳಿಗೆ ಅಧಿಕಾರ
-ಹಸಿರು ನ್ಯಾಯಾಧಿಕರಣದ ನಿಯಮಾವಳಿಗಳನ್ನು ಅಳವಡಿಸಿ ಕೊಂಡು ಮರಳು ನೀತಿ ಜಾರಿ
-ಮರಳು ತೆಗೆಯಲು ಸಂಬಂಧಿತ ಪ್ರಾಧಿಕಾರಗಳಿಂದ ಒಪ್ಪಿಗೆ ಪಡೆಯುವುದು ಕಡ್ಡಾಯ

ಸಾಂಪ್ರದಾಯಿಕ ಮುಳುಗು
ಮರಳುಗಾರಿಕೆಗೆ ಅವಕಾಶ
ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಯಲ್ಲಿ ನಡೆಯುವ ನದಿ ಬದಿಯ ಸಾಂಪ್ರದಾಯಿಕ ಮಾನವಾಧಾರಿತ “ಮುಳುಗು ಮರಳು ತೆಗೆಯುವ ಪದ್ಧತಿ’ಗೆ ರಿಯಾಯಿತಿ ನೀಡಲಾಗಿದೆ. ದ.ಕ.ದಲ್ಲಿ ಮರಳು ತೆಗೆಯಲು ಅಲ್ಲಿನ ಬೇಡಿಕೆಗೆ ಅನುಗುಣವಾಗಿ ರಿಯಾ ಯಿತಿ ನೀಡಲಾಗಿದೆ. ಆದರೆ ಯಾವುದೇ ಯಂತ್ರೋಪಕರಣ ಬಳಸದೆ ಸಾಂಪ್ರ ದಾಯಿಕ ರೀತಿಯಲ್ಲಿ ಅವಕಾಶ ಕಲ್ಪಿಸ ಲಾಗಿದೆ. ಗ್ರಾ.ಪಂ.ಗಳ ಅನುಮತಿ ಪಡೆದು ಮರಳು ಮಾರಬಹುದಾಗಿದೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next