ಕಾಣಿಯೂರು: ಕಡಬ ತಾಲೂಕು ಚಾರ್ವಾಕ ಗ್ರಾಮದ ಕುಂಬ್ಲಾಡಿ ಸಮೀಪದ ಐರಲ ಎನ್ನುವಲ್ಲಿ ಕುಮಾರಧಾರಾ ನದಿಯಲ್ಲಿ ಮರಳುಗಾರಿಕೆ ನಡೆಸಲು ಬಂದವರ ಬೋಟನ್ನು ನದಿಯ ಪೊದೆಗೆ ಊರವರು ಕಟ್ಟಿ ಹಾಕಿದ ಘಟನೆ ಶುಕ್ರವಾರ ನಡೆದಿದೆ.
ಇದರ ಬೆನ್ನಲ್ಲೆ ಕಡಬ ಠಾಣೆಯಲ್ಲಿ ಬೋಟ್ ಕಟ್ಟಿ ಹಾಕಿವರ ವಿರುದ್ಧ ಪ್ರಕರಣ ದಾಖಲಾಗುತ್ತದೆ ಎನ್ನುವ ಮಾಹಿತಿ ಪಡೆದ ನೂರಾರು ಸ್ಥಳೀಯರು ಸಂಜೆ ವೇಳೆಗೆ ಕಡಬ ಠಾಣೆಯ ಮುಂಭಾಗದಲ್ಲಿ ಜಮಾಯಿಸಿದ್ದರು.
ಎರಡು ದಿನದ ಹಿಂದೆ ಚಾರ್ವಾಕ ಭಾಗದಲ್ಲಿ ಮರಳುಗಾರಿಕೆಗೆ ಬಂದ ತಂಡಕ್ಕೆ ಊರವರು ವಿರೋಧ ವ್ಯಕ್ತಪಡಿಸಿದ್ದರು. ಶುಕ್ರವಾರ ಮತ್ತೆ ಬೋಟ್ ಮೂಲಕ ತಂಡ ಬಂದಾಗ ಬೋಟನ್ನು ಹಿಡಿದು ಕಟ್ಟಿ ಹಾಕಲಾಗಿತ್ತು. ಬೋಟ್ನಲ್ಲಿದ್ದ ಮರಳುಗಾರಿಕೆಯ ಕಾರ್ಮಿಕರು ಈಜಿ ಆಚೆ ಬದಿಗೆ ತೆರಳಿದ್ದರು.
ಕುಂಬ್ಲಾಡಿಯ ಇನ್ನೊಂದು ಭಾಗ ಪೆರಾಬೆ ಗ್ರಾಮದ ಕುಂಟ್ಯಾನ ಎಂಬಲ್ಲಿ ಯಾಂತ್ರಿಕೃತವಾಗಿ ಮರಳುಗಾರಿಗೆ ನಡೆಸುತ್ತಿದ್ದ ತಂಡ ಈ ಭಾಗಕ್ಕೆ ಬಂದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಇಲ್ಲಿ ಪರವಾನಿಗೆ ಪಡೆದ ವ್ಯಕ್ತಿ ಮರಳುಗಾರಿಕೆ ನಡೆಸದೆ ಬೇರೊಂದು ತಂಡ ಮರಳುಗಾರಿಗೆ ನಡೆಸುತ್ತಿತ್ತು ಎನ್ನುವ ಆರೋಪ ವ್ಯಕ್ತವಾಗಿದೆ. ಠಾಣೆಯಲ್ಲಿ ಜಮಾಯಿಸಿದ್ದ ಸ್ಥಳೀಯರು ಪರವಾನಿಗೆ ಪಡೆದವರು ಮತ್ತು ಗಣಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿವಂತೆ ಪಟ್ಟು ಹಿಡಿದಿದ್ದರು. ಮರಳುಗಾರಿಕೆ ಪರವಾನಿಗೆ ಪಡೆದ ವ್ಯಕ್ತಿ ಠಾಣೆಗೆ ಆಗಮಿಸಿದ್ದರು.
ಈ ವೇಳೆ ಮಾತುಕತೆ ನಡೆಸಿ ಸಾರ್ವಜನಿಕರಿಗೆ ಸಮಸ್ಯೆಯಾಗುವುದಾದರೆ ಪರವಾನಿಗೆಯನ್ನು ರದ್ದುಪಡಿಸಲು ಗಣಿ ಇಲಾಖೆಗೆ ಕೇಳಿಕೊಳ್ಳುತ್ತೇನೆ ಎಂದರು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ವರದಿ ನೀಡಲಾಗುವುದು ಎಂದು ಠಾಣಾಧಿಕಾರಿ ತಿಳಿಸಿದ್ದರು. ಅನಂತರ ಸ್ಥಳೀಯರು ತೆರಳಿದರು.